
ಗ್ರಾಮೀಣಾಭಿವೃದ್ಧಿ ಮತ್ತು ಕುಡಿಯುವ ನೀರು ಪೂರೈಕೆ ವಿಭಾಗಕ್ಕೆ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗಳ ನೇಮಕದಲ್ಲಿ ನಡೆದಿರುವ ಅಕ್ರಮದ ಹಿನ್ನೆಲೆಯಲ್ಲಿ ನೇಮಕಾತಿ ಆದೇಶ ನೀಡದಂತೆ ಎರಡೆರಡು ಬಾರಿ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಸರ್ಕಾರಕ್ಕೆ ಪತ್ರ ಬರೆದಿದ್ದರೂ ನೇಮಕ ಆದೇಶ ನೀಡುವ ತೀರ್ಮಾನವನ್ನು ಯಾರು ಕೈಗೊಂಡಿದ್ದಾರೆ ಎಂದು ತಿಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ಕಟ್ಟಪ್ಪಣೆ ವಿಧಿಸಿದೆ.
ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗಳ ನೇಮಕದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಕೆಪಿಎಸ್‌ಸಿ ಮಾಡಿರುವ ಶಿಫಾರಸ್ಸಿಗೆ ತಡೆ ನೀಡಬೇಕು ಎಂಬ ಮನವಿಯನ್ನು ನಿರಾಕರಿಸಿರುವ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ ನೀಡಿರುವ ಆದೇಶ ಪ್ರಶ್ನಿಸಿ ಎಂಜಿನಿಯರ್‌ಗಳಾದ ವಿಶ್ವಾಸ್ ಮತ್ತಿತರರು ಸಲ್ಲಿಸಿರುವ ಎರಡು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ರಾಮಚಂದ್ರ ಹುದ್ದಾರ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
“ಸಾರ್ವಜನಿಕ ನೇಮಕಾತಿ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಸಕಾರಾತ್ಮಕ ಕ್ರಮಗಳ ಬಗ್ಗೆ ಮೆಚ್ಚಬೇಕಿದೆ. ಈ ಸಂಬಂಧ ರಾಜ್ಯ ಸರ್ಕಾರವು ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ಮಸೂದೆ ರೂಪಿಸಿ, ಅದಕ್ಕೆ ಸದನದಲ್ಲಿ ಒಪ್ಪಿಗೆ ಪಡೆದು ಅದನ್ನು ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಿಕೊಡಲಾಗಿದೆ ಎಂದು ಅಡ್ವೊಕೇಟ್ ಜನರಲ್ ತಿಳಿಸಿದ್ದಾರೆ. ಈ ಕ್ರಮಕ್ಕೆ ಮೆಚ್ಚುಗೆ ಇದೆ ಎಂದು ಮತ್ತೊಮ್ಮೆ ಹೇಳುತಿದ್ದೇವೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.
ನ್ಯಾಯಾಲಯದ ಮುಂದೆ ಇಟ್ಟಿರುವ ದಾಖಲೆಗಳನ್ನು ಪರಿಶೀಲಿಸಿದ ನಂತರ ಕೆಪಿಎಸ್‌ಸಿ ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳಲ್ಲಿ ನಿರ್ದಿಷ್ಟ ಮಟ್ಟದಲ್ಲಿ ಅನುಮಾನದ ನಡೆ ಕಂಡಿದೆ. ಈ ಹಂತದಲ್ಲಿ ಅರ್ಜಿದಾರರು ಸೇರಿ ಯಾರ ಬಗ್ಗೆಯೂ ಶಂಕೆ ವ್ಯಕ್ತಪಡಿಸುವುದಿಲ್ಲ. ಪ್ರಕರಣದ ಕುರಿತಾದ ಇಡೀ ಚರ್ಚೆಯು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಲಭ್ಯವಿದ್ದು, ಅಡ್ವೊಕೇಟ್ ಜನರಲ್ ಮತ್ತು ಕೆಪಿಎಸ್‌ಸಿ ಪ್ರತಿನಿಧಿಸಿರುವ ವಕೀಲರು ಏನೆಲ್ಲಾ ಮಾಡಬೇಕು ಎಂಬುದನ್ನು ಈ ಆದೇಶದಲ್ಲಿ ಉಲ್ಲೇಖಿಸಲಾಗಿಲ್ಲ” ಎಂದು ಆದೇಶದಲ್ಲಿ ದಾಖಲಿಸಿದೆ.
ಇದಕ್ಕೂ ಮುನ್ನ, “ಅಕ್ರಮದ ತನಿಖೆಗಾಗಿ ಮೂವರು ಮತ್ತು ಐವರ ಸದಸ್ಯರ ಸಮಿತಿಯ ಪ್ರಕ್ರಿಯೆ ಬಾಕಿ ಇರುವಾಗ, 23.1.2024ರಂದು ಆಯೋಗ ನಡೆಸಿರುವ ಸಭೆಯಲ್ಲಿ ಕೋರಂ ಇರದಿದ್ದಾಗ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗದು. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಆನಂತರ 18.5.2024ರಂದು ನಡೆದ ಸಭೆಯಲ್ಲಿ ಆಯ್ಕೆ ಪಟ್ಟಿಗೆ ಆಯೋಗ ಒಪ್ಪಿಗೆ ನೀಡಿರುವುದಕ್ಕೆ ಸಿಂಧುತ್ವ ಇಲ್ಲ. 22.2.2024ರಂದು ಆಯೋಗದ ಕಾರ್ಯದರ್ಶಿ ರಾಕೇಶ್ ಕುಮಾರ್ ಅವರು ನೇಮಕಾತಿಯಲ್ಲಿ ಅಕ್ರಮದ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಹೀಗಾಗಿ, ನೇಮಕಾತಿ ಆದೇಶ ಜಾರಿ ಮಾಡದೇ ತಡೆಹಿಡಿಯಬೇಕು ಎಂದು ಪತ್ರ ಬರೆದಿದ್ದಾರೆ. 18.5.2024ರಲ್ಲಿ ಕಾರ್ಯದರ್ಶಿ ಅದನ್ನು ಸರ್ಕಾರಕ್ಕೆ ನೆನಪಿಸಿದ್ದಾರೆ. ತನಿಖೆಯನ್ನು ಮುಂದುವರಿಸುವಂತೆ 27.5.2024ರಂದು ಸರ್ಕಾರ ಆಯೋಗಕ್ಕೆ ಪತ್ರದ ಮುಖೇನ ನಿರ್ದೇಶಿಸಿದೆ. 25.6.2024ರಂದು ಆಯೋಗವು ಓಎಂಆರ್ ಸೀಟುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿತ್ತು. 2025ರ ಜನವರಿಯಲ್ಲಿ ಎಫ್‌ಎಸ್‌ಎಲ್ ವರದಿ ಬಂದಿತ್ತು. ಹೀಗಿದ್ದರೂ ನೇಮಕಾತಿ ಆದೇಶ ನೀಡಲಾಗಿದೆ. ಯಾರ ಮಟ್ಟದಲ್ಲಿ ನೇಮಕ ಮಾಡುವ ತೀರ್ಮಾನವಾಗಿದೆ. ವಂಚನೆ ಮಾಡಿರುವವರ ಮೇಲೆ ಆಯೋಗವು ಏಕೆ ದೂರು ನೀಡಿಲ್ಲ? ಆಯೋಗದ ಹಿಂದಿನ ಕಾರ್ಯದರ್ಶಿ ಲತಾ ಕುಮಾರಿ ವಿರುದ್ಧ ಕ್ರಮ ಏಕೆ ಆಗಿಲ್ಲ?” ಎಂಬುದರ ಬಗ್ಗೆ ಮಾಹಿತಿ ನೀಡಬೇಕು ಎಂದು ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಮತ್ತು ಕೆಪಿಎಸ್‌ಸಿ ಪ್ರತಿನಿಧಿಸಿರುವ ಹಿರಿಯ ವಕೀಲ ರೊಬೆನ್ ಜಾಕಬ್ ಅವರಿಗೆ ನಿರ್ದೇಶಿಸಿದೆ.
ಮುಂದುವರಿದು ಪೀಠವು “ಸರ್ಕಾರ, ನ್ಯಾಯಾಲಯ ನಮಗೆ ಏನು ಮಾಡಲಾಗದು ಎಂಬ ಭಾವನೆ ಅಧಿಕಾರಿಗಳಲ್ಲಿ ಇರಬಾರದು. ನಮ್ಮನ್ನು ಯಾರೂ ಮುಟ್ಟಲಾಗದು ಎಂಬ ನಡೆಯು ಕಾನೂನಿಗೆ ವಿರುದ್ಧ. ಕಲ್ಯಾಣ ರಾಜ್ಯದಲ್ಲಿ ಸೂಕ್ಷ್ಮತೆ ಇರಬೇಕಾಗುತ್ತದೆ. ಇದೇ ಕೆಲಸವನ್ನು ಎಫ್‌ಡಿಸಿ, ಎಸ್‌ಡಿಎ, ಗುಮಾಸ್ತ ಮಾಡಿದ್ದರೆ ಸರ್ಕಾರ ಏನು ಮಾಡುತ್ತಿತ್ತು? ಇಲ್ಲಿ ಕ್ರಮಕೈಗೊಳ್ಳಬೇಕು ಎಂಬ ಆಯೋಗದ ಕರಡು ನಿರ್ಣಯ ಒಳಗೆ ಉಳಿದಿದ್ದೇಕೆ? ಈ ಹಿಂದೆ ತನಿಖೆ ಬಾಕಿ ಇದ್ದರೂ ನೇಮಕಾತಿ ಆದೇಶ ನೀಡಿರುವ ಐತಿಹ್ಯಗಳಿವೇಯೇ? ಅವುಗಳ ಮಾಹಿತಿ ಒದಗಿಸಬೇಕು” ಎಂದು ನಿರ್ದೇಶಿಸಿದೆ.
ಇದಕ್ಕೂ ಮುನ್ನ, ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಕೆಪಿಎಸ್‌ಸಿ ಹಾಲಿ ಕಾರ್ಯದರ್ಶಿ ರಾಕೇಶ್ ಕುಮಾರ್ ಅವರು 1.2.2024ರಂದು ಬರೆದಿರುವ ಪತ್ರವು ಮುಖ್ಯ ಕಾರ್ಯದರ್ಶಿಗೆ ಹೋಗಿದೆ. 22.2.2024ರಂದು ಬರೆದಿರುವ ಪತ್ರವು ಆರ್‌ಡಿಪಿಆರ್ ಕಾರ್ಯದರ್ಶಿಗೆ ಹೋಗಿದೆ. 18.5.2024ರಂದು ಬರೆದಿರುವ ಪತ್ರವು ಪುನಾ ಮುಖ್ಯ ಕಾರ್ಯದರ್ಶಿಗೆ ಹೋಗಿದೆ. ನೇಮಕಾತಿ ನೀಡಿದ ಆರು ತಿಂಗಳ ಬಳಿಕ ಎಫ್‌ಎಸ್‌ಎಲ್ ವರದಿ ಬಂದಿತ್ತು. 31.1.2024ರಂದು ಆಯೋಗದಲ್ಲಿ ನಡೆದಿರುವ ಅಕ್ರಮಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಇದೆಲ್ಲದರ ನಡುವೆ 25.6.2024ರಂದು ನೇಮಕಾತಿ ಆದೇಶ ಏಕೆ ನೀಡಲಾಗಿದೆ ಎಂಬುದಕ್ಕೆ ಉತ್ತರಿಸಲಾಗುವುದು” ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ಮಾರ್ಚ್ 24ಕ್ಕೆ ಮುಂದೂಡಿದೆ.