ಪೊಕ್ಸೊ ಕಾಯಿದೆಯಡಿ ವಿಚಾರಣೆ ವಿಳಂಬವಾದರೆ ಅದು ಜಾಮೀನು ಪಡೆಯಲು ಆಧಾರವಾಗದು: ಕರ್ನಾಟಕ ಹೈಕೋರ್ಟ್

ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಇದೇ ಸಂದರ್ಭದಲ್ಲಿ ನಿರ್ದೇಶನ ನೀಡಿದೆ.
Karnataka HC, POCSO
Karnataka HC, POCSO

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯಿದೆ ಸೆಕ್ಷನ್ 35ರ ಅಡಿ ದಾಖಲಾಗುವ ಪ್ರಕರಣಗಳ ವಿಚಾರಣೆಯಲ್ಲಿ ವಿಳಂಬ ಉಂಟಾದರೆ ಅದು ಆರೋಪಿಗೆ ಜಾಮೀನು ನೀಡಲು ಪೂರಕ ಆಧಾರವಾಗದು ಎಂದು ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ.

ಕಾಯ್ದೆಯ ಸೆಕ್ಷನ್ 35 ರ ಪ್ರಕಾರ ವಿಶೇಷ ನ್ಯಾಯಾಲಯ ಮೂವತ್ತು ದಿನಗಳ ಒಳಗೆ ಮಗು ನೀಡುವ ಸಾಕ್ಷ್ಯವನ್ನು ದಾಖಲಿಸಿಕೊಳ್ಳಬೇಕಿದೆ. ಇದಲ್ಲದೆ ಅಪರಾಧವನ್ನು ಪರಿಗಣಿಸಿದ ದಿನದಿಂದ ಒಂದು ವರ್ಷದ ಅವಧಿಯಲ್ಲಿ ನ್ಯಾಯಾಲಯ ಸಾಧ್ಯವಾದಷ್ಟೂ ವಿಚಾರಣೆ ಪೂರ್ಣಗೊಳಿಸಬೇಕು ಎಂದು ಕೂಡ ಸೆಕ್ಷನ್‌ 35 ಹೇಳುತ್ತದೆ. ಆದರೆ ಇದನ್ನೇ ಆಧರಿಸಿ ಅಪರಾಧಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ ವಿ ನಗರತ್ನ ಮತ್ತು ಎಂ ಜಿ ಉಮಾ ಅವರಿದ್ದ ವಿಭಾಗೀಯ ಪೀಠ ತೀರ್ಪು ನೀಡಿದೆ.

ಪೊಕ್ಸೊ ಸೆಕ್ಷನ್ 35ನ್ನು ಅನುಸರಿಸದೇ ಇರುವುದು ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆಧಾರವಾಗದು. ಹಾಗೆ ಮಾಡುವುದರಿಂದ ನಿಬಂಧನೆಯನ್ನು ತಪ್ಪಾಗಿ ಓದಿದಂತಾಗುತ್ತದೆ.
ಕರ್ನಾಟಕ ಹೈಕೋರ್ಟ್

ಕಾಯಿದೆಯಡಿ ವಿಚಾರಣೆಯನ್ನು ಒಂದು ವರ್ಷಕ್ಕಿಂತ ಹೆಚ್ಚು ಅವದಿಗೆ ವಿಸ್ತರಿಸಲು ಹಲವು ಕಾರಣಗಳಿರಬಹುದು. ಆದರೆ ಇದನ್ನೇ ಆಧರಿಸಿ ಮಗುವಿನ ಹಿತಾಸಕ್ತಿಗೆ ವಿರುದ್ಧವಾಗಿ ಆರೋಪಿಗೆ ಜಾಮೀನು ನೀಡಬೇಕೆಂದೇನೂ ಇಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ವಿಶೇಷ ನ್ಯಾಯಾಲಯ ಒಂದು ವರ್ಷವಾದರೂ ವಿಚಾರಣೆ ಪೂರ್ಣಗೊಳಿಸದಿದ್ದ ಹಿನ್ನೆಲೆಯಲ್ಲಿ ಹನುಮಂತ ಮೊಗವೀರ ಎಂಬಾತ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ವಿನಯ್‌ ಮತ್ತು ಕರ್ನಾಟಕ ಸರ್ಕಾರದ ನಡುವಣ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಆಧರಿಸಿ ಆತ ಜಾಮೀನು ಕೋರಿದ್ದ. ಆದರೆ ಕಾಯಿದೆಯ ಆಶಯವನ್ನು ಓದುವಾಗ ʼಸಾಧ್ಯವಾದಷ್ಟೂʼ ಎಂಬ ಪದನನ್ನು ಗಮನಿಸಬೇಕು ಎಂದ ಹೈಕೋರ್ಟ್‌ನ ಏಕಸದಸ್ಯ ಪೀಠ ಅರ್ಜಿಯನ್ನು ತಳ್ಳಿ ಹಾಕಿತ್ತು. ಇದರಿಂದ ಹನುಮಂತ ಮೊಗವೀರ ವಿಭಾಗೀಯ ಪೀಠದ ಮೊರೆ ಹೋಗಿದ್ದ.

ಕಾಯಿದೆಯ ಕಾನೂನಾತ್ಮಕ ಆಶಯಗಳನ್ನು ಪರಿಗಣಿಸಿ ವಿಭಾಗೀಯ ಪೀಠ ತೀರ್ಪು ನೀಡಿತು. ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ಪೂರಕವಾದ ವಿಚಾರಗಳನ್ನು ಪ್ರಸ್ತಾಪಿಸಿತು. ಹಲವು ಆಯಾಮಗಳಿಂದ ಕಾನೂನನ್ನು ಅವಲೋಕಿಸಿದ ನ್ಯಾಯಾಲಯ ಕಡೆಗೆ ಆರೋಪಿಗೆ ಜಾಮೀನು ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿತು.

ಇದಲ್ಲದೆ ಕಾಯಿದೆಯ ಪರಿಣಾಮಕಾರಿ ಜಾರಿಗಾಗಿ ಸಂಬಂಧಪಟ್ಟವರ ನಡುವೆ ಆರೋಗ್ಯಕರ ಸಮನ್ವಯ ಇರಬೇಕು ಎಂದು ತನ್ನ 81 ಪುಟಗಳ ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ. ಜೊತೆಗೆ ಪೊಕ್ಸೊ ಕಾಯಿದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಕೆಲ ನಿರ್ದೇಶನಗಳನ್ನು ಕೂಡ ನ್ಯಾಯಾಲಯ ಇದೇ ಸಂದರ್ಭದಲ್ಲಿ ನೀಡಿದ್ದು ಅವು ಹೀಗಿವೆ:

ಹೈಕೋರ್ಟ್‌ ನಿರ್ದೇಶನಗಳು

  • ಪೊಕ್ಸೊ ಪ್ರಕರಣಗಳ ತ್ವರಿತ ವಿಲೇವಾರಿಗೆ ರಾಜ್ಯ ಸರ್ಕಾರ ಅಗತ್ಯ ಸಂಖ್ಯೆಯ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು.

  • ಅಂತಹ ವಿಶೇಷ ನ್ಯಾಯಾಲಯಗಳಿಗೆ ಅಗತ್ಯ ಮೂಲ ಸೌಕರ್ಯ ಮತ್ತು ಮಾನವ ಸಂಪನ್ಮೂಲವನ್ನು ಸರ್ಕಾರ ಒದಗಿಸಬೇಕು.

  • ತರಬೇತಿ ಪಡೆದ ಅಭಿಯೋಜಕರನ್ನು ಪೊಕ್ಸೊ ಪ್ರಕರಣಗಳ ವಿಚಾರಣೆಗೆ ತಕ್ಷಣವೇ ನೇಮಿಸಬೇಕು.

  • ಸಂತ್ರಸ್ತ ಮಕ್ಕಳ ಆರೈಕೆಗಾಗಿ ಜಿಲ್ಲಾ ಆಸ್ಪತ್ರೆಗಳಲ್ಲಿ ವಿಶೇಷ ಘಟಕಗಳನ್ನು ತೆರೆಯಬೇಕು. ಅಗತ್ಯ ಸಂದರ್ಭಗಳಲ್ಲಿ ಮಕ್ಕಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಬೇಕು.

  • ಮಕ್ಕಳನ್ನು ಆಘಾತದಿಂದ ಮುಕ್ತಗೊಳಿಸುವ ಸಲುವಾಗಿ ಮಾನಸಿಕ ಆರೋಗ್ಯ ತಜ್ಞರನ್ನು ಲಭ್ಯವಿರುವಂತೆ ನೋಡಿಕೊಳ್ಳಬೇಕು ಮತ್ತು ಮಕ್ಕಳ ಪುನರ್ವಸತಿ, ಪುನರ್‌ಸಂಯೋಜನೆಗಾಗಿ ವೆಚ್ಚವಾಗುವ ಮೊತ್ತವನ್ನು ಸರ್ಕಾರವೇ ಭರಿಸಬೇಕು.

  • ಸಂತ್ರಸ್ತ ಮಕ್ಕಳಿಗಾಗಿ ಸಮರ್ಪಕ ಬೆಂಬಲ ವ್ಯಕ್ತಿಗಳನ್ನು ನೇಮಿಸಬೇಕು.

  • ಎಲ್ಲಾ ವಿಶೇಷ ನ್ಯಾಯಾಲಯಗಳ ಮುಖ್ಯಸ್ಥರು ಸೆಕ್ಷನ್ 35ರ ಅಡಿ ನೀಡಲಾದ ಗಡುವಿನೊಳಗೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸಲು ಮುಂದಾಗಬೇಕು.

  • ನ್ಯಾಯ ವಿತರಣಾ ವ್ಯವಸ್ಥೆ ಮಗುವಿನ ಆಘಾತ, ಮಾನಸಿಕ ಆಘಾತ ತಗ್ಗಿಸಲು ಯಾವುದೇ ಕೊಡುಗೆ ನೀಡದಿದ್ದರೆ ಅದು ಮಗುವಿನ ನಡವಳಿಕೆ ಮತ್ತು ವ್ಯಕ್ತಿತ್ವದ ಮೇಲೆ ತೀವ್ರ ಪರಿಣಾಮ ಬೀರಬಹುದು.

ನಿಬಂಧನೆಗಳನ್ನು ಸರ್ಕಾರ ಮತ್ತಿತರರ ಭಾಗೀದಾರರು ಪರಿಣಾಕಾರಿಯಾಗಿ ಅನುಷ್ಠಾನಗೊಳಿಸದೇ ಹೋದರೆ ಪೊಕ್ಸೊ ಕಾಯ್ದೆಯ ಉದ್ದೇಶ ಮತ್ತು ಆದೇಶ ದುರ್ಬಲವಾಗುತ್ತದೆ. ಹೀಗಾಗಿ ಮೇಲಿನ ನಿರ್ದೇಶನಗಳನ್ನು ಸಮಯೋಚಿತವಾಗಿ ಜಾರಿಗೆ ತರಬೇಕು ಎಂದು ನ್ಯಾಯಾಲಯ ಸೂಚಿಸಿದೆ.

Kannada Bar & Bench
kannada.barandbench.com