ಮುಸ್ಲಿಮೇತರ ವಿದ್ಯಾರ್ಥಿಗಳು ಹಿಜಾಬ್ ಧರಿಸುವಂತೆ ಶಾಲೆಗಳು ಒತ್ತಾಯಿಸುವಂತಿಲ್ಲ: ಮಧ್ಯಪ್ರದೇಶ ಹೈಕೋರ್ಟ್
ಎಲ್ಲಾ ಧರ್ಮದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಮತ್ತು ಇಸ್ಲಾಮ್ ಧರ್ಮದ ಪ್ರಾರ್ಥನೆಗಳನ್ನು ಎಲ್ಲಾ ವಿದ್ಯಾರ್ಥಿಗಳು ಕಲಿಯಲು ಬಲವಂತಪಡಿಸಿದ್ದ ದಾಮೋಹ್ ಜಿಲ್ಲೆಯ ಶಾಲೆಯೊಂದರ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಜವಾನನಿಗೆ ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಷರತ್ತುಬದ್ಧ ಜಾಮೀನು ನೀಡಿದೆ [ಅಫ್ಶಾ ಶೇಖ್ ಮತ್ತಿತರರು ಹಾಗೂ ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].
ಶಾಲೆಯ ವಿದ್ಯಾರ್ಥಿಗಳು, ವಿಶೇಷವಾಗಿ ಮುಸ್ಲಿಮರಲ್ಲದ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸುವಂತೆ ಒತ್ತಾಯಿಸಬಾರದು ಅಥವಾ ಅವರ ಸ್ವಂತ ಧರ್ಮಕ್ಕೆ ಸಂಬಂಧಿಸಿದ ವಸ್ತುಗಳನ್ನು ಧರಿಸುವುದನ್ನು ತಡೆಯಬಾರದು ಎಂದು ನ್ಯಾಯಮೂರ್ತಿ ದಿನೇಶ್ ಕುಮಾರ್ ಪಲಿಯಾವಾಲ್ ಅವರು ವಿಧಿಸಿರುವ ನಾಲ್ಕು ಜಾಮೀನು ಷರತ್ತುಗಳಲ್ಲಿ ತಿಳಿಸಲಾಗಿದೆ.
ಮುಸ್ಲಿಮೇತರ ವಿದ್ಯಾರ್ಥಿಗಳು ಹಿಜಾಬ್ ಧರಿಸುವಂತೆ ಶಾಲೆಗಳು ಒತ್ತಾಯಿಸುವಂತಿಲ್ಲ. ಪವಿತ್ರ ದಾರ, ತಿಲಕ ಧರಿಸಲು ಅವಕಾಶ ನೀಡಬೇಕು, ಮಧ್ಯಪ್ರದೇಶ ಶಿಕ್ಷಣ ಮಂಡಳಿ ಸೂಚಿಸದ ಯಾವುದೇ ವಿಷಯ ಅಥವಾ ಭಾಷೆಯನ್ನು ಅಧ್ಯಯನ ಮಾಡುವಂತೆ ಬೇರೆ ಧರ್ಮಗಳ ವಿದ್ಯಾರ್ಥಿಗಳಿಗೆ ಒತ್ತಾಯಿಸಬಾರದು ಎಂದು ವಿವರಿಸಲಾಗಿದೆ.
ಬೇರೆ ಧರ್ಮಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಇಸ್ಲಾಂ ಧರ್ಮಕ್ಕೆ ಸೇರಿದ ಧಾರ್ಮಿಕ ಶಿಕ್ಷಣ ಅಥವಾ ವಿಚಾರಗಳನ್ನು ಬೋಧಿಸುವಂತಿಲ್ಲ. ಬಾಲ ನ್ಯಾಯ ಕಾಯಿದೆ- 2015ರ ಸೆಕ್ಷನ್ 53 (1) (iii) ರಲ್ಲಿ ತಿಳಿಸಿರುವಂತೆ ಆಧುನಿಕ ಶಿಕ್ಷಣವನ್ನು ಮಾತ್ರ ನೀಡಬೇಕು. ಬೇರೆ ಧರ್ಮಗಳ (ಹಿಂದೂ, ಜೈನ, ಇತ್ಯಾದಿ) ವಿದ್ಯಾರ್ಥಿನಿಯರು ಶಾಲೆಯ ಆವರಣದಲ್ಲಿ ಅಥವಾ ತರಗತಿಯಲ್ಲಿ ಹಿಜಾಬ್ ಧರಿಸುವಂತೆ ಒತ್ತಾಯಿಸಬಾರದು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.
ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು ಪ್ರಮುಖ ಆರೋಪಗಳು ಶಾಲಾ ಆಡಳಿತದ ವಿರುದ್ಧ ಇವೆಯೇ ವಿನಾ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಜವಾನನ ವಿರುದ್ಧ ಅಲ್ಲ ಎಂಬುದನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ ಅವರಿಗೆ ಜಾಮೀನು ನೀಡಲು ಅನುಮತಿಸಿತು.