ವಿವಾಹಿತ ಪುರುಷ ಮದುವೆಯಾಗದೇ ಇನ್ನೊಬ್ಬ ಮಹಿಳೆಯೊಂದಿಗೆ ಬಾಳುತ್ತಿದ್ದರೆ ಅದು ದ್ವಿಪತ್ನಿತ್ವವಲ್ಲ: ರಾಜಸ್ಥಾನ ಹೈಕೋರ್ಟ್

ಜೋಡಿಯೊಂದು (ಪ್ರಸ್ತುತ ಪ್ರಕರಣದಲ್ಲಿ, ಈಗಾಗಲೇ ಇನ್ನೊಬ್ಬರನ್ನು ಮದುವೆಯಾಗಿರುವ ವ್ಯಕ್ತಿ) ಗಂಡ ಹೆಂಡತಿಯಂತೆ ವಾಸಿಸುತ್ತಿದ್ದು ವಿವಾಹವಾಗದೆ ಇರುವಾಗ ಅದನ್ನು ದ್ವಿಪತ್ನಿತ್ವ ಎಂದು ಪರಿಗಣಿಸಲಾಗದು ಎಂದ ಪೀಠ.
ವಿವಾಹಿತ ಪುರುಷ ಮದುವೆಯಾಗದೇ ಇನ್ನೊಬ್ಬ ಮಹಿಳೆಯೊಂದಿಗೆ ಬಾಳುತ್ತಿದ್ದರೆ ಅದು ದ್ವಿಪತ್ನಿತ್ವವಲ್ಲ: ರಾಜಸ್ಥಾನ ಹೈಕೋರ್ಟ್

ವಿವಾಹಿತ ವ್ಯಕ್ತಿ ಎರಡನೇ ಮದುವೆಯಾಗದೆ ಮತ್ತೊಬ್ಬ ಸಂಗಾತಿಯೊಂದಿಗೆ ಜೀವಿಸುತ್ತಿದ್ದರೆ ಆಗ ಅದು ದ್ವಿಪತ್ನಿತ್ವದ ಅಪರಾಧ ಎನಿಸಿಕೊಳ್ಳುವುದಿಲ್ಲ ಎಂದು ರಾಜಸ್ಥಾನ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ವಿವಾಹಿತ ಪುರುಷ ಬೇರೊಬ್ಬ ಮಹಿಳೆಯೊಂದಿಗೆ ಬಾಳುತ್ತಿದ್ದ ಹಿನ್ನೆಲೆಯಲ್ಲಿ ಆತನ ಪತ್ನಿ ದ್ವಿಪತ್ನಿತ್ವದ ಆರೋಪ ಹೊರಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ಕುಲದೀಪ್ ಮಾಥುರ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಐಪಿಸಿ ಸೆಕ್ಷನ್‌ 494ರ ಪ್ರಕಾರ ಪತಿ ಇಲ್ಲವೇ ಪತ್ನಿ ಜೀವಂತ ಇರುವಾಗ ಇನ್ನೊಬ್ಬರನ್ನು ಮದುವೆಯಾಗುವುದು ಶಿಕ್ಷಾರ್ಹ ಅಪರಾಧ ಎಂಬುದು ಮೊದಲ ಮದುವೆಯಾಗಿರುವ ವ್ಯಕ್ತಿ ಎರಡನೇ ವಿವಾಹವಾಗದೆ ಇದ್ದು ಮೊದಲನೆ ವಿವಾಹ ಇನ್ನೂ ಜಾರಿಯಲ್ಲಿದ್ದರೆ ಅನ್ವಯವಾಗುವುದಿಲ್ಲ ಎಂದು ನ್ಯಾಯಾಲಯ ನುಡಿದಿದೆ.

ವಿವಾಹಿತ ವ್ಯಕ್ತಿಯೊಬ್ಬರು ಎರಡನೇ ವಿವಾಹವಾಗದೆ ಮತ್ತೊಬ್ಬರೊಂದಿಗೆ ಸಹಜೀವನ ನಡೆಸುತ್ತಿದ್ದ ಮಾತ್ರಕ್ಕೆ ಅದು ದ್ವಿಪತ್ನಿತ್ವದ ಅಪರಾಧವಾಗದು ಎಂದು ನ್ಯಾಯಾಲಯ ನುಡಿದಿದೆ.

“ಪತಿ ಅಥವಾ ಪತ್ನಿ ಜೀವಂತವಿದ್ದಂತೆಯೇ ಬೇರೊಬ್ಬರನ್ನು ಶಾಸ್ತ್ರೋಕ್ತವಾಗಿ ವಿವಾಹವಾದರೆ ಆಗ ಅದು IPC ಸೆಕ್ಷನ್ 494ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂಬುದು ಇತ್ಯರ್ಥವಾದ ಕಾನೂನಾಗಿದೆ. ಪುರುಷ ಮತ್ತು ಮಹಿಳೆ ಗಂಡ ಹೆಂಡತಿಯಾಗಿ ಸಹಜೀವನ ನಡೆಸುತ್ತಿದ್ದರೆ ಆಗ ಅದು IPC ಸೆಕ್ಷನ್ 494ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎನಿಸದು" ಎಂದು ಮೇ 7ರಂದು ನೀಡಿದ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರ ಬೇರೊಬ್ಬ ಮಹಿಳೆಯೊಂದಿಗೆ ಎರಡನೇ ವಿವಾಹವಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುವಂತಹ ಯಾವುದೇ ಪುರಾವೆಗಳಿಲ್ಲ. ಹಾಗಾಗಿ ದ್ವಿಪತ್ನಿತ್ವದ ಆರೋಪ ಸಾಬೀತಾಗಿಲ್ಲ ಎಂದಿರುವ ನ್ಯಾಯಾಲಯ ಆರೋಪಿಯ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ಕ್ರಿಮಿನಲ್‌ ಮೊಕದ್ದಮೆಗಳನ್ನು ರದ್ದುಗೊಳಿಸಿತು.

Kannada Bar & Bench
kannada.barandbench.com