ಶಿಕ್ಷಕರ ನೇಮಕಕ್ಕೆ ತಂದೆಯ ಆದಾಯ ಪ್ರಮಾಣ ಪತ್ರ ಪರಿಗಣಿಸದ ಕ್ರಮ ಪ್ರಶ್ನಿಸಿ ಕೆಎಟಿ ಮೊರೆ: ಶಿಕ್ಷಣ ಇಲಾಖೆಗೆ ನೋಟಿಸ್‌

ಅರ್ಜಿ ವಿಲೇವಾರಿಗೆ ಸರ್ಕಾರದ ಉತ್ತರ ಅತ್ಯವಶ್ಯಕ. ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ನಡೆದರೆ ಅದು ಈ ಅರ್ಜಿಯ ತೀರ್ಪಿಗೆ ಒಳಪಡುತ್ತದೆ ಎಂದು ಆದೇಶಿಸಿರುವ ಕೆಎಟಿ.
ಶಿಕ್ಷಕರ ನೇಮಕಕ್ಕೆ ತಂದೆಯ ಆದಾಯ ಪ್ರಮಾಣ ಪತ್ರ ಪರಿಗಣಿಸದ ಕ್ರಮ ಪ್ರಶ್ನಿಸಿ ಕೆಎಟಿ ಮೊರೆ: ಶಿಕ್ಷಣ ಇಲಾಖೆಗೆ ನೋಟಿಸ್‌

ಸುಮಾರು 13 ಸಾವಿರಕ್ಕೂ ಅಧಿಕ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶನದ ಹೊರತಾಗಿಯೂ ತಂದೆಯ ಆದಾಯ ಪ್ರಮಾಣಪತ್ರ ಪರಿಗಣಿಸದಿರುವುದನ್ನು ಆಕ್ಷೇಪಿಸಿ ಅನೇಕ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಆಡಳಿತ ನ್ಯಾಯಾಧಿಕರಣದ (ಕೆಎಟಿ) ಕದತಟ್ಟಿದ್ದಾರೆ. ಶಿಕ್ಷಕರ ನೇಮಕಕ್ಕೆ ಸಮ್ಮತಿಸಿದ್ದ ಹೈಕೋರ್ಟ್‌ ಅಕ್ಟೋಬರ್ 12ರಂದು ನೀಡಿದ್ದ ಆದೇಶದಲ್ಲಿ ತಂದೆಯ ಆದಾಯ ಪ್ರಮಾಣಪತ್ರದ ಕುರಿತು ಅಭ್ಯರ್ಥಿಗಳು ತಮ್ಮ ತಕರಾರನ್ನು ಕೆಎಟಿ ಮುಂದೆ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು ಎಂದು ಹೇಳಿತ್ತು.

ಇದರ ಭಾಗವಾಗಿ ಬೆಂಗಳೂರಿನ ಬಿಳೇಕಹಳ್ಳಿಯ ಚೈತ್ರಾ ಸೇರಿದಂತೆ 22 ಮಂದಿ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಕುರಿತು ವಿಚಾರಣೆ ನಡೆಸಿದ ನ್ಯಾಯಾಂಗ ಸದಸ್ಯ ನಾರಾಯಣ ಮತ್ತು ಆಡಳಿತಾತ್ಮಕ ಸದಸ್ಯ ಎಸ್ ಶಿವಸೈಲಂ ಅವರ ನೇತೃತ್ವದ ಪೀಠವು ಪ್ರತಿವಾದಿ ರಾಜ್ಯ ಸರ್ಕಾರ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿ ಅಂತಿಮ ವಿಚಾರಣೆಯನ್ನು ನವೆಂಬರ್‌ 6ಕ್ಕೆ ನಿಗದಿಪಡಿಸಿದೆ.

ಅಲ್ಲದೇ, ಅರ್ಜಿ ವಿಲೇವಾರಿಗೆ ಸರ್ಕಾರದ ಉತ್ತರ ಅತ್ಯವಶ್ಯಕ. ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ನಡೆದರೆ ಅದು ಈ ಅರ್ಜಿಯ ತೀರ್ಪಿಗೆ ಒಳಪಡುತ್ತದೆ ಎಂದು ಕೆಎಟಿ ಆದೇಶಿಸಿದೆ.

ಅರ್ಜಿದಾರರ ಪರ ವಾದಿಸಿದ ವಕೀಲ ಕೆ ಸತೀಶ್ ಭಟ್ ಅವರು ನಿಯಮದಂತೆ ತಂದೆಯ ಆದಾಯ ಪ್ರಮಾಣಪತ್ರವನ್ನು ಮಾತ್ರ ಪರಿಗಣಿಸಬೇಕೇ ಹೊರತು ಪತಿಯ ಆದಾಯವನ್ನಲ್ಲ. ಸುಪ್ರೀಂ ಕೋರ್ಟ್ ಕೂಡ ಎಲ್ಲಾ ಅಂಶಗಳನ್ನು ಪರಿಗಣಿಸಿ ಸುರೇಂದ್ರ ಸಿಂಗ್ ವರ್ಸಸ್ ಪಂಜಾಬ್ ಎಲೆಕ್ಟ್ರಿಸಿಟಿ ಬೋರ್ಡ್ ಅಂಡ್ ಅದರ್ಸ್‌ ಪ್ರಕರಣದಲ್ಲಿ ಪೋಷಕರ ಆದಾಯವನ್ನು ಮಾತ್ರ ಪರಿಗಣಿಸಬೇಕು ಎಂದು ಆದೇಶಿಸಿದೆ ಎಂದರು.

ಹುಟ್ಟಿನಿಂದ ಜಾತಿ ನಿರ್ಧಾರವಾಗುತ್ತದೆ. ಒಂದು ಜಾತಿಯ ಅಭ್ಯರ್ಥಿ ಬೇರೊಂದು ಜಾತಿಯ ಅಭ್ಯರ್ಥಿಯನ್ನು ಮದುವೆಯಾಗುವುದರಿಂದ ಅವರ ಜಾತಿ ಬದಲಾಗುವುದಿಲ್ಲ. ಆಗ ತಂದೆಯ ಆದಾಯವೇ ಪರಿಗಣಿಸ್ಪಡುತ್ತದೆಯೇ ಹೊರತು, ಪತಿಯ ಆದಾಯವಲ್ಲ ಎಂದು ವಿವರಿಸಿದರು.

Also Read
13,352 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಂದುವರಿಕೆಗೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಹಸಿರು ನಿಶಾನೆ

ಕರ್ನಾಟಕ ಹೈಕೋರ್ಟ್ ಕೂಡ ಸ್ಟೇಟ್ ಆಫ್ ಕರ್ನಾಟಕ ವರ್ಸಸ್ ಯೋಗೇಶ್ವರಿ ಅಂಡ್ ಅದರ್ಸ್‌ ಪ್ರಕರಣದಲ್ಲಿ ಪೋಷಕರ ಆದಾಯ ಪ್ರಮಾಣಪತ್ರವನ್ನೇ ಪರಿಗಣಿಸಬೇಕು ಎಂದು ಆದೇಶಿಸಿದೆ. ಅದರಂತೆ ಈ ಪ್ರಕರಣದಲ್ಲೂ ಸಹ ಅರ್ಜಿದಾರರು ಸಲ್ಲಿಸಿರುವ ತಂದೆಯ ಆದಾಯ ಪ್ರಮಾಣಪತ್ರ ಪರಿಗಣಿಸಿ ಅವರ ಹೆಸರನ್ನು ಆಯ್ಕೆ ಪಟ್ಟಿಯಲ್ಲಿ ಸೇರಿಸಬೇಕು ಮತ್ತು ಕೌನ್ಸೆಲಿಂಗ್ ನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವಂತೆ ಆದೇಶ ಮಾಡಬೇಕು ಎಂದು ಕೋರಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಅಕ್ಟೋಬರ್‌ 19ರಂದು ಕೌನ್ಸೆಲಿಂಗ್‌ಗೆ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಅದರಲ್ಲಿ ಅರ್ಜಿದಾರರ ಹೆಸರನ್ನು ಸೇರ್ಪಡೆ ಮಾಡುವಂತೆ ನಿರ್ದೇಶನ ನೀಡಬೇಕು ಎಂಬುದು ಅರ್ಜಿದಾರರು ಮಧ್ಯಂತರ ಕೋರಿಕೆಯಾಗಿದೆ.

Kannada Bar & Bench
kannada.barandbench.com