ಅಧಿಕ ರಕ್ತದೊತ್ತಡಕ್ಕೆ ಬೊಜ್ಜು ಮಾತ್ರ ಕಾರಣವಲ್ಲ: ಸೇನಾ ಶುಶ್ರೂಷಕಿಗೆ ವೈಕಲ್ಯ ಪಿಂಚಣಿ ನೀಡಲು ದೆಹಲಿ ಹೈಕೋರ್ಟ್ ಆದೇಶ

ಮಹಿಳೆಗೆ ಪಿಂಚಣಿ ಹಕ್ಕು ನಿರಾಕರಿಸಿದ್ದ ಎಎಫ್‌ಟಿ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿತು.
Indian Army women and Delhi High Court
Indian Army women and Delhi High Court
Published on

ಬೊಜ್ಜು ಮತ್ತು ಅಧಿಕ ರಕ್ತದೊತ್ತಡದ ಕಾರಣ ನೀಡಿ ಸೇನೆಯ ನಿವೃತ್ತ ಮಹಿಳಾ ಶುಶ್ರೂಷಕ ಅಧಿಕಾರಿಗೆ ನಿರಾಕರಿಸಲಾಗಿದ್ದ ಅಂಗವೈಕಲ್ಯ ಪಿಂಚಣಿಯನ್ನು ಆಕೆಗೆ ಒದಗಿಸುವಂತೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.

ಯಾವುದೇ ವೈದ್ಯಕೀಯ ಆಧಾರವಿಲ್ಲದೆ ಮಹಿಳೆಯ ಬೊಜ್ಜು ಮತ್ತು ಅಧಿಕ ರಕ್ತದೊತ್ತಡದ ನಡುವಿನ ಸಂಬಂಧವನ್ನು ವಿವರಿಸುವ ಮೂಲಕ ಪಿಂಚಣಿ ಕೋರಿಕೆಯನ್ನು ನಿರಾಕರಿಸಿದ ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ (ಎಎಫ್‌ಟಿ) ಆದೇಶವನ್ನು ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್ ಶುಕ್ಲಾ ಅವರಿದ್ದ ವಿಭಾಗೀಯ ಪೀಠ ರದ್ದುಗೊಳಿಸಿತು.

Also Read
ಗಾಯಗೊಂಡ ಯೋಧನ ಪುತ್ರನಿಗಿಲ್ಲ ಉದ್ಯೋಗ: ಪಂಜಾಬ್ ಹೈಕೋರ್ಟ್ ದಿಗ್ಭ್ರಮೆ

“ಬೊಜ್ಜು ಇರುವ ಎಲ್ಲಾ ವ್ಯಕ್ತಿಗಳೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಅಂತೆಯೇ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಎಲ್ಲಾ ವ್ಯಕ್ತಿಗೂ ಬೊಜ್ಜು ಇರುವುದಿಲ್ಲ” ಎಂದು ಹೈಕೋರ್ಟ್‌ ತಿಳಿಸಿದೆ. ಈ ನಿಟ್ಟಿನಲ್ಲಿ ನಿಗದಿಪಡಿಸಿದ ಕಾನೂನಿಗೆ ವಿರುದ್ಧವಾಗಿ ಎಎಫ್‌ಟಿ ಆದೇಶ ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು  ಅದು ಹೇಳಿದೆ.

ಅರ್ಜಿದಾರೆ ಶುಶ್ರೂಷಕಿ ಅನುಭವಿಸುತ್ತಿದ್ದ ಅಧಿಕ ರಕ್ತದೊತ್ತಡಕ್ಕೂ ಬೊಜ್ಜುತನಕ್ಕೂ ಸಂಬಂಧವನ್ನು ಹುಡುಕುವ ನ್ಯಾಯಮಂಡಳಿಯ ಯತ್ನ ಸಮರ್ಥನೀಯವಲ್ಲ. ಅಂತಹ ಸಾಂದರ್ಭಿಕ ನಂಟನ್ನು ಸೇವಾ ಬಿಡುಗಡೆ ವೈದ್ಯಕೀಯ ಮಂಡಳಿಯಾಗಲಿ (ರಿಲೀಸ್‌ ಮೆಡಿಕಲ್‌ ಬೋರ್ಡ್‌ - ಆರ್‌ಎಂಬಿ), ಅರ್ಜಿದಾರರನ್ನು ಪರೀಕ್ಷಿಸಿದ ತಜ್ಞ ವೈದ್ಯರಾಗಲಿ ಗಮನಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.

1969ರಲ್ಲಿ ಭಾರತೀಯ ಸೇನೆಗೆ ಸೇರಿ 36 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಿವೃತ್ತ ನರ್ಸ್‌ಗೆ ಅಂಗವೈಕಲ್ಯ ಪಿಂಚಣಿ ದೊರೆಯದೆ ನ್ಯಾಯಮಂಡಳಿ ಮೆಟ್ಟಿಲೇರಿದ್ದರು.

ಅವರ ಅಂಗವೈಕಲ್ಯಕ್ಕೆ ಬೊಜ್ಜು 1ರಿಂದ 5% ಕಾರಣವಾದರೆ, 30% ಅಧಿಕ ರಕ್ತದೊತ್ತಡ ಕಾರಣ ಎಂದು ಆರ್‌ಎಂಬಿ ತಿಳಿಸಿತ್ತು. ನಿಯಮಾವಳಿ ಪ್ರಕಾರ ಅಧಿಕ ರಕ್ತದೊತ್ತಡದಿಂದ ಉಂಟಾಗಿದ್ದರೆ ಆಕೆ ಅಂಗವೈಕಲ್ಯ ಪಿಂಚಣಿ ಪಡೆಯಲು ಅರ್ಹರು. ಆದರೂ ಆಕೆಯ ಅರ್ಜಿ ತಿರಸ್ಕರಿಸಿದ್ದರಿಂದ ಅವರು ಎಎಫ್‌ಟಿ ಕದ ತಟ್ಟಿದ್ದರು.

ಬೊಜ್ಜಿನ ಕಾರಣಕ್ಕೆ ಆಕೆಗೆ ರಕ್ತದೊತ್ತಡ ಉಂಟಾಗಿದೆಯೇ ವಿನಾ ಸೇನಾ ಸೇವೆಯ ಕಾರಣಕ್ಕೆ ಅಲ್ಲ ಎಂದು ಎಎಫ್‌ಟಿ ತಿಳಿಸಿತ್ತು. ಸೇವಾವಧಿಯಲ್ಲಿ ತೂಕ ಇಳಿಸಿಕೊಳ್ಳುವಂತೆ ಆಕೆಗೆ ಸಲಹೆ ಕೂಡ ನೀಡಲಾಗಿತ್ತು ಎಂಬುದನ್ನು ಅವಲಂಬಿಸಿ ಈ ತೀರ್ಪು ನೀಡಲಾಗಿತ್ತು.

Also Read
ಸಿಯಾಚಿನ್‌ನಲ್ಲಿ 36 ವರ್ಷಗಳ ಹಿಂದೆ ಸೇವೆ ಸಲ್ಲಿಸಿದ್ದ ಯೋಧನಿಗೆ ಅಂಗವೈಕಲ್ಯ ಪಿಂಚಣಿ ನೀಡಲು ಸುಪ್ರೀಂ ಕೋರ್ಟ್ ಆದೇಶ

ಆದರೆ ಈ ನಿರ್ಣಯಗಳಿಗೆ ಅಸಮ್ಮತಿ ಸೂಚಿಸಿದ ಹೈಕೋರ್ಟ್‌ ಸೇನೆಗೆ ಸೇರ್ಪಡೆ ಮಾಡಿಕೊಳ್ಳುವಾಗ ಅಂಗವೈಕಲ್ಯ ಇಲ್ಲದಿದ್ದರೆ ವೈದ್ಯಕೀಯ ಮಂಡಳಿ ಅದಕ್ಕೆ ಬೇರೆ ಕಾರಣ ಎಂದು ಸ್ಪಷ್ಟವಾಗಿ ತಿಳಿಸದ ಹೊರತು ಅಂತಹ ಅಂಗವೈಕಲ್ಯ ಸೇನಾ ಸೇವೆಯ ಪರಿಣಾಮದಿಂದಲೇ ಆಗಿದೆ ಎಂದು ಭಾವಿಸಬೇಕಾಗುತ್ತದೆ ಎಂಬುದು ಈಗಾಗಲೇ ತೀರ್ಪುಗಳ ಮುಖೇನ ಇತ್ಯರ್ಥಗೊಂಡಿದೆ ಎಂದು ನ್ಯಾಯಾಲಯ ವಿವರಿಸಿತು.

ಈ ಪ್ರಕರಣದಲ್ಲಿ ಆಕೆಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಬೊಜ್ಜಿನ ಕಾರಣಕ್ಕೆ ಉಂಟಾಗಿದೆ ಎಂಬುದನ್ನು ಸಾಬೀತುಪಡಿಸುವಂತಹ ಯಾವುದೇ ಕಾರಣವನ್ನು ಆರ್‌ಎಂಬಿ ಇಲ್ಲವೇ ಆಕೆಯನ್ನು ಪರೀಕ್ಷಿಸಿದ ತಜ್ಞರು ಒದಗಿಸಿಲ್ಲ ಎಂದು ಪೀಠ ಒತ್ತಿ ಹೇಳಿದೆ. ಆದ್ದರಿಂದ   ಅರ್ಜಿದಾರರ ಅಂಗವೈಕಲ್ಯ ಪಿಂಚಣಿಯನ್ನು ಬಾಕಿ ಸಹಿತ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಅದು ಆದೇಶಿಸಿದೆ.

Kannada Bar & Bench
kannada.barandbench.com