ಕನ್ನಡ ಕುರಿತ ವಿವಾದಾಸ್ಪದ ಹೇಳಿಕೆ: 'ಕಮಲ್‌ ಹಾಸನ್‌ ಇತಿಹಾಸಕಾರರೇ? ಭಾಷಾ ತಜ್ಞರೇ?' ಹೈಕೋರ್ಟ್‌ ಕೆಂಡಾಮಂಡಲ

“ನೆಲ, ಭಾಷೆ ಈ ಮೂರು ವಿಚಾರಗಳು ಯಾವುದೇ ವ್ಯಕ್ತಿಗೆ ಅತ್ಯಂತ ಮುಖ್ಯ. ಈ ದೇಶ ವಿಭಜನೆಯಾಗಿದ್ದುದು ಭಾಷೆಯ ಆಧಾರದಲ್ಲಿ. ರಾಜ್ಯಗಳು ಭಾಷೆಗಳ ಮೇಲೆ ರಚನೆಯಾಗಿವೆ. ಇದು ಭಾಷೆಯ ಪ್ರಾಮುಖ್ಯತೆಯನ್ನು ತಿಳಿಸುತ್ತದೆ” ಎಂದ ನ್ಯಾಯಾಲಯ.
Kamal Hassan & Karnataka HC
Kamal Hassan & Karnataka HC
Published on

ಬಹುಭಾಷಾ ನಟ ಕಮಲ್‌ ಹಾಸನ್‌ ನಟಿಸಿರುವ ಥಗ್‌ ಲೈಫ್‌ ಚಿತ್ರ ಬಿಡುಗಡೆಗೆ ಪೊಲೀಸ್‌ ರಕ್ಷಣೆ ಕೋರಿರುವುದಕ್ಕೆ ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌, “(ಕನ್ನಡ ತಮಿಳಿನಿಂದ ಹುಟ್ಟಿದೆ ಎಂಬ ಹೇಳಿಕೆ ನೀಡಲು) ಕಮಲ್‌ ಹಾಸನ್‌ ಭಾಷಾ ತಜ್ಞರೇ? ಅಥವಾ ಇತಿಹಾಸಕಾರರೇ?” ಎನ್ನುವ ಮೂಲಕ ಹರಿಹಾಯ್ದಿದೆ.

ʼಥಗ್‌ ಲೈಫ್‌ʼ ಸಿನಿಮಾ ಹಂಚಿಕೆ ಮತ್ತು ಬಿಡುಗಡೆಗೆ ಅಗತ್ಯ ಬಂದೋಬಸ್ತ್‌ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಾಜ್‌ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ ನಾರಾಯಣ್‌ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice M Nagaprasanna
Justice M Nagaprasanna

ಥಗ್‌ ಲೈಫ್‌ ಚಿತ್ರ ನಿರ್ಮಾಣ ಸಂಸ್ಥೆ ಪ್ರತಿನಿಧಿಸಿದ್ದ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ ಅವರು “ಕಮಲ್‌ ಹಾಸನ್‌ ಅವರು ನೀಡಿರುವ ಹೇಳಿಕೆಯನ್ನು ಆಧರಿಸಿ ಥಗ್‌ ಲೈಫ್‌ ಚಿತ್ರದ ಬಿಡುಗಡೆಗೆ ನಿಷೇಧ ವಿಧಿಸಲಾಗಿದೆ. ಇಡೀ ಹೇಳಿಕೆಯನ್ನು ನಾನು ನೋಡಿದ್ದೇನೆ. ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್‌ ಶಿವರಾಜ್‌ ಕುಮಾರ್‌ ಅವರು ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಮಲ್‌ ನೀಡಿರುವ ಹೇಳಿಕೆಯನ್ನು ವ್ಯಾಪ್ತಿ ಮೀರಿ ಅರ್ಥೈಸಿಕೊಂಡು ಅವರು ಕನ್ನಡದ ವಿರುದ್ಧ ಏನೋ ಹೇಳಿದ್ದಾರೆ ಎಂದು ಹೇಳುವುದು ಸರಿಯಲ್ಲ. ಹೇಳಿಕೆ ನೀಡಿದ ನಂತರ ಕಮಲ್‌ ಹಾಸನ್‌ ಸ್ಪಷ್ಟನೆ ನೀಡಿದ್ದಾರೆ. ಕಮಲ್‌ ಯಾವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದನ್ನು ನೋಡಬೇಕು” ಎಂದರು.

ಆಗ ಪೀಠವು “ನನ್ನ ಪ್ರಕಾರ ಜಲ, ನೆಲ, ಭಾಷೆ ಈ ಮೂರು ವಿಚಾರಗಳು ಯಾವುದೇ ವ್ಯಕ್ತಿಗೆ ಅತ್ಯಂತ ಮುಖ್ಯ. ಈ ದೇಶ ವಿಭಜನೆಯಾಗಿದ್ದುದು ಭಾಷೆಯ ಆಧಾರದಲ್ಲಿ. ರಾಜ್ಯಗಳು ಭಾಷೆಗಳ ಮೇಲೆ ರಚನೆಯಾಗಿವೆ. ಇದು ಭಾಷೆಯ ಪ್ರಾಮುಖ್ಯತೆಯನ್ನು ತಿಳಿಸುತ್ತದೆ” ಎಂದರು.

“ವಿವಾದ ಸೃಷ್ಟಿಯಾದ ನಂತರ ಕಮಲ್‌ ಹಾಸನ್‌ ಬರೆದಿರುವ ಪ್ರತಿಕ್ರಿಯೆಯಲ್ಲಿ ಕ್ಷಮೆ ಕೋರಿದ್ದರೆ ಅದನ್ನು ಒಪ್ಪಿಕೊಳ್ಳಲಾಗುವುದು. ಇದರಲ್ಲಿ ಯಾವುದೇ ಕ್ಷಮೆ ಇಲ್ಲ. ನೀವು ಕಮಲ್‌ ಹಾಸನ್‌ ಅಥವಾ ಬೇರೆ ಯಾರೇ ಆಗಿರಬಹುದು. ಜನರ ಭಾವನೆಗಳನ್ನು ನೀವು ನೋಯಿಸಲಾಗದು. ಭಾಷೆಯ ಆಧಾರದಲ್ಲಿ ಈ ದೇಶ ವಿಭಜನೆಯಾಗಿದೆ. ಸಾರ್ವಜನಿಕ ವ್ಯಕ್ತಿತ್ವದ ಕಮಲ್‌ ಹಾಸನ್‌ ಅವರು ಅಂಥ ಹೇಳಿಕೆ ನೀಡಲಾಗದು. ಇದರಿಂದ ಅಶಾಂತಿ ಮತ್ತು ಕ್ಷೋಭೆ ಉಂಟಾಗಿದೆ. ಕರ್ನಾಟಕದ ಜನರು ಕ್ಷಮೆ ಕೋರಲು ಕೇಳಿದ್ದಾರೆ ಅಷ್ಟೆ. ಈಗ ಕಮಲ್‌ ಅವರು ರಕ್ಷಣೆ ಕೋರಿ ನ್ಯಾಯಾಲಯದ ಮುಂದೆ ಬಂದಿದ್ದಾರೆ. ಯಾವ ಆಧಾರದಲ್ಲಿ ಕಮಲ್‌ ಹೇಳಿಕೆ ನೀಡಿದ್ದಾರೆ? ಅವರು ಭಾಷಾ ತಜ್ಞರೇ ಅಥವಾ ಇತಿಹಾಸಕಾರರೇ? ಯಾವ ಆಧಾರದ ಮೇಲೆ ಅವರು ಮಾತನಾಡುತ್ತಿದ್ದಾರೆ? 1950ರಲ್ಲಿ ರಾಜಗೋಪಾಲಚಾರಿಯವರು ಇಂಥದ್ಧೇ ಹೇಳಿಕೆ ನೀಡಿ, ಆನಂತರ ಬಹಿರಂಗವಾಗಿ ಕ್ಷಮೆ ಕೋರಿದ್ದರು. ಈಗ ಸಿನಿಮಾ ಬಿಡುಗಡೆಗೆ ಕಮಲ್‌ ನಿರ್ಮಾಣ ಸಂಸ್ಥೆ ರಕ್ಷಣೆ ಕೋರುತ್ತಿದ್ದಾರೆ. ಕ್ಷಮೆ ಕೇಳಿದ್ದರೆ ಇದು ಇರುತ್ತಲೇ ಇರಲಿಲ್ಲ” ಎಂದಿತು.

“ಮಣಿ ರತ್ನಂ ಮಾಡಿರುವ ಸಿನಿಮಾದ ಮಹತ್ವದ ಬಗ್ಗೆ ಕಮಲ್‌ಗೆ ತಿಳಿದಿದೆ. ಆದರೆ, ಕ್ಷಮೆ ವಿಚಾರದಲ್ಲಿ ಕಮಲ್‌ ಯಾವುದೇ ಹೇಳಿಕೆ ನೀಡುವುದಿಲ್ಲ. ಕಮಲ್‌ ಹಾಸನ್‌ ಸೃಷ್ಟಿಸಿರುವ ಸಮಸ್ಯೆಗೆ ಪೊಲೀಸರು ರಕ್ಷಣೆ ನೀಡಬೇಕೆ? ಜನರ ಭಾವನೆಗಳ ಜೊತೆ ಭಾಷೆ ತಳುಕು ಹಾಕಿಕೊಂಡಿದೆ. ಕಮಲ್‌ ಹಾಸನ್‌ ಅವರು ಸಾಮಾನ್ಯ ವ್ಯಕ್ತಿಯಲ್ಲ. ಸಾರ್ವಜನಿಕ ವ್ಯಕ್ತಿತ್ವ. ಸಾಮಾಜಿಕ ಮಾಧ್ಯಮದಲ್ಲಿ ಬರೆಯುವ ವ್ಯಕ್ತಿಗಳನ್ನೂ ತನಿಖೆಗೆ ಒಳಪಡಿಸಲಾಗುತ್ತಿದೆ ಎಂಬುದು ನೆನಪಿರಲಿ. ಅದು ಅಂಥ ತಪ್ಪೇ ಆಗದೇ ಇರಬಹುದು. ಕರ್ನಾಟಕದಲ್ಲಿ ನಿಮ್ಮ ಸಿನಿಮಾ ಬಿಡುಗಡೆಯಾಗಬೇಕಿದೆ. ಇಲ್ಲವೆಂದಾದರೆ ಬಿಡಿ. ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜನರ ಭಾವನೆಗಳಿಗೆ ನೋಯಿಸಲು ಬಳಸಲಾಗದು. ಕರ್ನಾಟಕದಲ್ಲಿ ಸಂಪಾದನೆ ಮಾಡಬೇಕೆಂದಾದರೆ ಕ್ಷಮೆ ಕೋರಬೇಕು. ಕಮಲ್‌ ಹೇಳಿಕೆ ನೀಡಿರುವುದರಿಂದ ಅವರೇ ಅದನ್ನು ಹಿಂಪಡೆಯಬೇಕು. ಆ ಹೇಳಿಕೆಗೆ ಬದ್ಧವಾಗಿದ್ದಾರೆಯೇ?” ಎಂದು ಕುಟುಕಿತು.

“ಶೌರ್ಯದ ಮಹತ್ವ ಅಡಕವಾಗಿರುವುದು ವಿವೇಚನೆಯಲ್ಲಿ. ಭಾವನೆಯನ್ನು ನಗಣ್ಯವಾಗಿ ಪರಿಗಣಿಸುವುದಕ್ಕೆ ಅವಕಾಶ ನೀಡುವುದಿಲ್ಲ. ತಪ್ಪುಗಳಾಗುತ್ತವೆ. ಆದಾಗ ಏನು ಮಾಡಬೇಕು ಎಂಬುದು ಗೊತ್ತಿರಬೇಕು. ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಲಾಗಿದೆ ಎಂದು ಹೇಳುತ್ತಿದ್ದೀರಿ. ಹಾಗಾದರೆ ಕರ್ನಾಟಕ ಬಿಟ್ಟುಬಿಡಿ” ಎಂದಿತು.

Also Read
'ಥಗ್‌ ಲೈಫ್‌ʼಗೆ ನಿರ್ಬಂಧದ ತೂಗುಕತ್ತಿ: ಹೈಕೋರ್ಟ್‌ ಎಡತಾಕಿದ ರಾಜ್‌ಕಮಲ್‌ ಫಿಲ್ಮ್ಸ್‌

ಈ ಹಂತದಲ್ಲಿ ಧ್ಯಾನ್‌ ಚಿನ್ನಪ್ಪ ಅವರು “ಕೆಲವರು ಸಿನಿಮಾ ನೋಡಬೇಕು ಎನ್ನುತ್ತಿದ್ದಾರೆ. ಇದರಿಂದ ಅವರ ಹಕ್ಕುಗಳಿಗೆ ಸಮಸ್ಯೆಯಾಗುತ್ತದೆ” ಎಂದರು.

ಆಗ ಪೀಠವು “ಸಿನಿಮಾ ನೋಡಬೇಕು ಎನ್ನುವವರು ನ್ಯಾಯಾಲಯದ ಮುಂದೆ ಬರಲಿ. ಈ ಕುರಿತು ಆದೇಶ ಮಾಡಲಾಗುವುದು. ಅನಗತ್ಯ ಹೇಳಿಕೆ ನೀಡಲಾಗಿದೆ. ಬಾಯಿ ತಪ್ಪಿ ಮಾತನಾಡುವ ಸಾಧ್ಯತೆ ಇರುತ್ತದೆ. ಆಡಿದ ಮಾತನ್ನು ಹಿಂಪಡೆಯಲಾಗದು. ಬದಲಿಗೆ ಕ್ಷಮೆ ಕೋರಬಹುದು. ವ್ಯಕ್ತಿ ಸಮಸ್ಯೆ ಸೃಷ್ಟಿಸಿದ್ದು, ಅದು ಅಶಾಂತಿಗೆ ಕಾರಣವಾಗಿದೆ. ಇದಕ್ಕಾಗಿ ರಾಜಗೋಪಾಲಚಾರಿ ಉದಾಹರಣೆ ನೀಡಿದ್ದು. ಪರಿಸ್ಥಿತಿ ಕೈಮೀರುವಂತೆ ಮಾಡಿ, ಈಗ ಪೊಲೀಸ್‌ ರಕ್ಷಣೆ ಕೋರುತ್ತಿರುವುದು ಸರಿಯಲ್ಲ” ಎಂದಿತು.

ಅಂತಿಮವಾಗಿ ಧ್ಯಾನ್‌ ಚಿನ್ನಪ್ಪ ಅವರು ತಮ್ಮ ಕಕ್ಷಿದಾರರ ಸೂಚನೆ ಪಡೆಯಲಾಗುವುದು ಎಂದರು. ಇದಕ್ಕೆ ಸಮ್ಮತಿಸಿದ ಪೀಠವು ವಿಚಾರಣೆಯನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿತು.

Kannada Bar & Bench
kannada.barandbench.com