ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲದಿರುವುದು ಅಥವಾ ಹಾಡದಿರುವುದು ಅಪರಾಧವಲ್ಲ: ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್

ಉದ್ದೇಶಪೂರ್ವಕವಾಗಿ ರಾಷ್ಟ್ರಗೀತೆ ಹಾಡುವುದನ್ನು ತಡೆಯುವುದು ಅಥವಾ ಅಂತಹ ರಾಷ್ಟ್ರಗೀತೆ ಹಾಡುವ ಸಭೆಗೆ ತೊಂದರೆ ಉಂಟುಮಾಡುವುದು ರಾಷ್ಟ್ರೀಯ ಗೌರವಕ್ಕೆ ಹಾನಿ ತಡೆ ಕಾಯಿದೆಯಡಿ ಅಪರಾಧವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲದಿರುವುದು ಅಥವಾ ಹಾಡದಿರುವುದು ಅಪರಾಧವಲ್ಲ: ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್

ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲದಿರುವುದು ಅಥವಾ ಹಾಡದಿರುವುದು ಅಪರಾಧವಲ್ಲ. ಬದಲಿಗೆ ಉದ್ದೇಶಪೂರ್ವಕವಾಗಿ ರಾಷ್ಟ್ರಗೀತೆ ಹಾಡುವುದನ್ನು ತಡೆಯುವುದು ಅಥವಾ ಅಂತಹ ರಾಷ್ಟ್ರಗೀತೆ ಹಾಡುವ ಸಭೆಗೆ ತೊಂದರೆ ಉಂಟುಮಾಡುವುದು ʼರಾಷ್ಟ್ರೀಯ ಗೌರವಕ್ಕೆ ಹಾನಿ ತಡೆ ಕಾಯಿದೆʼಯಡಿ ಅಪರಾಧವಾಗುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ತೀರ್ಪು ನೀಡಿದೆ. (ಡಾ. ತೌಸೀಫ್‌ ಅಹ್ಮದ್‌ ಭಟ್‌ ಹಾಗೂ ಜಮ್ಮು ಮತ್ತು ಕಾಶ್ಮೀರ ನಡುವಣ ಪ್ರಕರಣ).

ರಾಷ್ಟ್ರಗೀತೆ ಹಾಡುತ್ತಿರುವ ಸಮಯದಲ್ಲಿ ಎದ್ದು ನಿಲ್ಲದಿರುವುದು ಅಥವಾ ಹಾಡದಿರುವುದು, ಸಂವಿಧಾನದ IV A ಭಾಗದಲ್ಲಿ ನೀಡಲಾಗಿರುವ ಮೂಲಭೂತ ಕರ್ತವ್ಯಗಳನ್ನು ಪಾಲಿಸುವಲ್ಲಿನ ವೈಫಲ್ಯವೇ ವಿನಾ ಕಾಯಿದೆಯ ಸೆಕ್ಷನ್‌ 3ರ ಅಡಿ ಅಪರಾಧವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ಹಿನ್ನೆಲೆಯಲ್ಲಿ ಕಾಶ್ಮೀರದ ಬಾನಿ ಎಂಬಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಗುತ್ತಿಗೆ ಆಧಾರದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ತೌಸೀಫ್ ಅಹ್ಮದ್ ಭಟ್ ಅವರ ವಿರುದ್ಧ ಪೊಲೀಸರು ಕಾಯಿದೆಯ ಸೆಕ್ಷನ್‌ 3ರಡಿ ದಾಖಲಿಸಿದ್ದ ಎಫ್‌ಐಆರ್‌ ಅನ್ನು ನ್ಯಾಯಮೂರ್ತಿ ಸಂಜೀವ್‌ ಕುಮಾರ್‌ ಅವರಿದ್ದ ಏಕಸದಸ್ಯ ಪೀಠ ರದ್ದುಗೊಳಿಸಿತು.

Also Read
ದೇಶದ್ರೋಹ ಪ್ರಕರಣ: ಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನಾಗೆ ನಿರೀಕ್ಷಣಾ ಜಾಮೀನು ನೀಡಿದ ಕೇರಳ ಹೈಕೋರ್ಟ್

ಹಿನ್ನೆಲೆ

ನೆರೆಯ ದೇಶದ ವಿರುದ್ಧ ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್‌ ಸ್ಟ್ರೈಕ್‌ ಕುರಿತಂತೆ ಅರ್ಜಿದಾರ ಭಟ್‌ ಅವರು ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅರ್ಜಿಯ ಪ್ರಕಾರ ಕಾಲೇಜಿನ ಗುಮಾಸ್ತರ ಕೋರಿಕೆಯ ಮೇರೆಗೆ, ಭಟ್‌ ಬೋಧನೆ ನಿಲ್ಲಿಸಿ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದರು. ಅಲ್ಲದೆ ರಾಷ್ಟ್ರಗೀತೆ ಮೊಳಗುವಾಗ ಸಿಬ್ಬಂದಿಯೊಂದಿಗೆ ಎದ್ದು ನಿಂತಿದ್ದರು. ಆದಾದ ಬಳಿಕ ವಿದ್ಯಾರ್ಥಿಗಳ ಗುಂಪೊಂದು ತಾವು ರಾಷ್ಟ್ರಗೀತೆಗೆ ಅವಮಾನ ಎಸಗಿರುವುದಾಗಿ ಆಕ್ರೋಶ ವ್ಯಕ್ತಪಡಿಸಿತು. ಕಂಪ್ಯೂಟರ್ ಗುಮಾಸ್ತರೊಬ್ಬರ ಕುಮ್ಮಕ್ಕಿನಿಂದಾಗಿ ವಿದ್ಯಾರ್ಥಿಗಳು ಬಾನಿಯ ಉಪವಿಭಾಗಾಧಿಕಾರಿಗೆ ಲಿಖಿತ ದೂರು ನೀಡಿದರು. ಅದನ್ನು ಅವರು ಪೊಲೀಸರಿಗೆ ಸಲ್ಲಿಸಿದ ಬಳಿಕ ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಾಯಿತು ಎಂದು ಭಟ್‌ ಅರ್ಜಿಯಲ್ಲಿ ತಿಳಿಸಿದ್ದರು.

ನ್ಯಾಯಾಲಯ ಹೇಳಿದ್ದೇನು?

  • ಉದ್ದೇಶಪೂರ್ವಕವಾಗಿ ರಾಷ್ಟ್ರಗೀತೆ ಹಾಡುವುದನ್ನು ತಡೆಯುವುದು ಅಥವಾ ಅಂತಹ ರಾಷ್ಟ್ರಗೀತೆ ಹಾಡುವ ಸಭೆಗೆ ತೊಂದರೆ ಉಂಟುಮಾಡುವ ಎರಡು ರೀತಿಯ ನಡವಳಿಕೆಗಳನ್ನು ಮಾತ್ರ ಕಾಯಿದೆಯ ಸೆಕ್ಷನ್‌ 3 ಅಡಿ ಅಪರಾಧ ಎಂದು ಘೋಷಿಸಲಾಗಿದ್ದು ಅದು ಶಿಕ್ಷಾರ್ಹವಾಗಿದೆ.

  • ಸೆಕ್ಷನ್‌ 3 ಅನ್ನು ತಿದ್ದುಪಡಿ ಮಾಡಲು ಲೋಕಸಭೆಯಲ್ಲಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ಖಾಸಗಿ ಮಸೂದೆ ಮಂಡಿಸಿದ್ದರೂ ಅದನ್ನು ಇನ್ನೂ ಅಂಗೀಕರಿಸಿಲ್ಲ. ಆದ್ದರಿಂದ ಉದ್ದೇಶಪೂರ್ವಕವಾಗಿ ರಾಷ್ಟ್ರಗೀತೆ ಹಾಡುವುದನ್ನು ತಡೆಯುವುದು ಅಥವಾ ಅಂತಹ ರಾಷ್ಟ್ರಗೀತೆ ಹಾಡುವ ಸಭೆಗೆ ತೊಂದರೆ ಉಂಟುಮಾಡುವುದನ್ನು ಹೊರತುಪಡಿಸಿ ಉಳಿದದ್ದು ಅಪರಾಧವಲ್ಲ.

  • ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರ ಕಡೆಯಿಂದ ಅಂತಹ ಯಾವುದೇ ವರ್ತನೆ ಕಂಡುಬಂದಿಲ್ಲ.

  • ಅರ್ಜಿದಾರರು ರಾಷ್ಟ್ರಗೀತೆ ಹಾಡುವಾಗ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸಿದ್ದಾರೆ ಎಂಬ ಬನಿಯ ಉಪ ವಿಭಾಗಾಧಿಕಾರಿಯವರ ಅವಲೋಕನಗಳು ಕೇವಲ ʼನಂತರದ ಆಲೋಚನೆʼಗಳಷ್ಟೇ. ಅದು ವಿದ್ಯಾರ್ಥಿಗಳ ದೂರಿನ ಭಾಗವಲ್ಲ ಅಥವಾ ಅದನ್ನು ಬೆಂಬಲಿಸುವ ಯಾವುದೇ ಸಾಕ್ಷ್ಯಗಳಿಲ್ಲ.

  • ಬಂಧಿಸಲು ಸಾಧ್ಯವಾಗುವ ಪ್ರಕರಣದಲ್ಲಿ (cognizable case) ಸಿಆರ್‌ಪಿಸಿ ಸೆಕ್ಷನ್‌ 15ರ ಉಪ ಸೆಕ್ಷನ್‌ 3ರ ಅಡಿಯಲ್ಲಿ ಪ್ರಕರಣದ ತನಿಖೆ ನಡೆಸಲು ಪೊಲೀಸರಿಗೆ ನಿರ್ದೇಶಿಸುವ ಅಧಿಕಾರ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ಅವರಿಗೆ ಇರುತ್ತದೆಯೇ ಹೊರತು ಆಡಳಿತ ಮ್ಯಾಜಿಸ್ಟ್ರೇಟ್‌ ಅವರಿಗೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ ಎಫ್‌ಐಆರ್‌ ರದ್ದುಪಡಿಸಿತು.

Related Stories

No stories found.
Kannada Bar & Bench
kannada.barandbench.com