ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ತಿದ್ದುಪಡಿ ಕಾಯಿದೆ 2021ಕ್ಕೆ ಮಾಡಲಾದ ತಿದ್ದುಪಡಿಗೆ ಸಂಬಂಧಿಸಿದಂತೆ ವಿಚಾರಣೆ ಬಾಕಿ ಉಳಿದಿರುವ ಪ್ರಕರಣದಲ್ಲಿ ಜನವರಿ 10ರಂದು ನೀಡಲಾದ ತಡೆಯಾಜ್ಞೆ ಮೂಲಕ ಮಕ್ಕಳ ದತ್ತು ಸ್ವೀಕಾರ ಪ್ರಕ್ರಿಯೆ ಸ್ಥಗಿತಗೊಳಿಸಿಲ್ಲ ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ [ನಿಶಾ ಪ್ರದೀಪ್ ಪಾಂಡ್ಯ ಅಲಿಯಾಸ್ ನಿಶಾ ಅಮಿತ್ ಗೋರ್ ಮತ್ತಿತರರು ಹಾಗೂ ಭಾರತ ಒಕ್ಕೂಟ ನಡುವಣ ಪ್ರಕರಣ].
ಆಕ್ಷೇಪ ವ್ಯಕ್ತಪಡಿಸಲಾದ ತಿದ್ದುಪಡಿಯಿಂದಾಗಿ ವಿದೇಶಿ ದತ್ತು ಸ್ವೀಕಾರ ಸೇರಿದಂತೆ ದತ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ವಿಶೇಷ ನ್ಯಾಯವ್ಯಾಪ್ತಿ ದೊರೆಯುತ್ತದೆ. ದತ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ತಿದ್ದುಪಡಿಗೂ ಮುನ್ನ ಸಿವಿಲ್ ನ್ಯಾಯಾಲಯಗಳು ವಿಚಾರಣೆ ನಡೆಸುತ್ತಿದ್ದವು.
ದತ್ತು ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಿವಿಲ್ ನ್ಯಾಯಾಲಯಗಳಿಂದ ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸಬೇಕು ಎಂದಿದ್ದ ತಿದ್ದುಪಡಿ ಜಾರಿಗೆ ಬಾರದಂತೆ ನ್ಯಾಯಮೂರ್ತಿ ಜಿ ಎಸ್ ಪಟೇಲ್ ನೇತೃತ್ವದ ಪೀಠ ಜನವರಿ 10ರಂದು ತಡೆ ನೀಡಿತ್ತು.
ಈ ತಡೆಯಾಜ್ಞೆಯಿಂದಾಗಿ ಜನವರಿ 11ರಿಂದ ಮಹಾರಾಷ್ಟ್ರದಲ್ಲಿ ದತ್ತು ಪ್ರಕ್ರಿಯೆಗಳು ಸ್ಥಗಿತಗೊಂಡಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ದೈನಿಕ ವರದಿ ಮಾಡಿತ್ತು.
ಈ ಹಿನ್ನೆಲೆಯಲ್ಲಿ , ಜನವರಿ 10ರ ಆದೇಶದ ಮೂಲಕ ದತ್ತು ಸ್ವೀಕಾರಕ್ಕೆ ತಡೆ ನೀಡಿಲ್ಲ ಎಂದು ಹೈಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ. ಬದಲಿಗೆ ಪ್ರಕರಣಗಳನ್ನು ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸುವುದನ್ನು ನ್ಯಾಯಾಲಯ ತಡೆ ಹಿಡಿದಿದೆ ಎಂದು ಅದು ವಿವರಿಸಿದೆ.
“ನಾವು ದತ್ತು ಸ್ವೀಕಾರವನ್ನು ಸ್ಥಗಿತಗೊಳಿಸಿಲ್ಲ… ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸಲಾದ ಯಾವುದೇ ದಾಖಲೆಗಳನ್ನು ಜಿಲ್ಲಾ ನ್ಯಾಯಾಧೀಶರು ಇಲ್ಲವೇ ನ್ಯಾಯಾಲಯಗಳಿಗೆ ಮರಳಿಸಬೇಕು” ಎಂದು ಹೈಕೋರ್ಟ್ ಸೂಚಿಸಿದೆ.
ಕಾಯಿದೆಗೆ ತಿದ್ದುಪಡಿ ಮಾಡಿರುವುದನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆ ಬಾಕಿ ಉಳಿದಿರುವುದರಿಂದ ಹೈಕೋರ್ಟ್ ನಿರ್ಧರಿಸುವವರೆಗೆ ಜಿಲ್ಲಾಧಿಕಾರಿಗಳು ಎಲ್ಲಾ ದಾಖಲೆಗಳನ್ನು ಸಂಬಂಧಪಟ್ಟ ಸಿವಿಲ್ ನ್ಯಾಯಾಲಯಗಳಿಗೆ ಹಿಂತಿರುಗಿಸಬೇಕು ಎಂದು ಕೂಡ ನ್ಯಾಯಾಲಯ ನಿರ್ದೇಶಿಸಿದೆ. ಕಾಯಿದೆಯ ತಿದ್ದುಪಡಿ ಪ್ರಶ್ನಿಸಿರುವ ಅರ್ಜಿಯನ್ನು ಹೈಕೋರ್ಟ್ ಬರುವ ಜುಲೈ 7, 2023ರಂದು ವಿಚಾರಣೆ ನಡೆಸಲಿದೆ .