ಸೆಷನ್ಸ್ ಮತ್ತು ಮ್ಯಾಜಿಸ್ಟೇರಿಯಲ್ ಪ್ರಕರಣಗಳನ್ನು ಸೆಷನ್ಸ್ ಮಟ್ಟದಲ್ಲಿ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಗಳ ರಚನೆಯನ್ನು ಕಾನೂನುಬಾಹಿರ ಎನ್ನಲಾಗದು ಎಂದು ಹಿರಿಯ ವಕೀಲ ಅಮಿಕಸ್ ಕ್ಯೂರಿ ವಿಜಯ್ ಹನ್ಸಾರಿಯಾ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ಉತ್ತರ ಪ್ರದೇಶದ ರಾಂಪುರದಲ್ಲಿ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆರಂಭಿಸಲು ನಿರ್ದೇಶಿಸುವಂತೆ ಕೋರಿ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ಸಲ್ಲಿಸಿದ್ದ ಮನವಿ ಹಿನ್ನೆಲೆಯಲ್ಲಿ ಅಮಿಕಸ್ ಕ್ಯೂರಿ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ 15ನೇ ವರದಿ ಸಲ್ಲಿಸಿದ್ದಾರೆ.
ಶಾಸನ ರೂಪಿಸುವವರ ವಿರುದ್ದಧ ಪ್ರಕರಣಗಳನ್ನು ಮ್ಯಾಜಿಸ್ಟ್ರೇಟ್ ಮಾತ್ರ ನಡೆಸಬಹುದೇ ವಿನಾ ಸೆಷನ್ಸ್ ನ್ಯಾಯಾಧೀಶರಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ಹೇಳಿದೆ ಎಂದು ಖಾನ್ ಹೇಳಿದ್ದಾರೆ. ಶಾಸನ ರೂಪಿಸುವವರ ವಿರುದ್ಧದ ಪ್ರಕರಣಗಳನ್ನು ಆಲಿಸಲು ಉತ್ತರ ಪ್ರದೇಶದಲ್ಲಿ ಮ್ಯಾಜಿಸ್ಟ್ರೇಟ್ ಮಟ್ಟದಲ್ಲಿ ವಿಶೇಷ ನ್ಯಾಯಾಲಯ ಇಲ್ಲ. ಸೆಷನ್ಸ್ ನ್ಯಾಯಾಧೀಶರು ಮಾತ್ರ ಅದನ್ನು ಮಾಡುತ್ತಾರೆ ಎಂದು ಖಾನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದರು.
ಆಗ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರಿದ್ದ ತ್ರಿಸದಸ್ಯ ಪೀಠವು ಸೆಷನ್ಸ್ ನ್ಯಾಯಾಧೀಶರು ಪ್ರಕರಣಗಳ ವಿಚಾರಣೆ ನಡೆಸಬಹುದೇ ಎಂದು ಅಮಿಕಸ್ ಕ್ಯೂರಿಯನ್ನು ಕೇಳಿದರು.
ಶಾಸಕರು ಮತ್ತು ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸಲು ಸಂವಿಧಾನದ 142ನೇ ವಿಧಿಯ ಅಡಿ ಅಧಿಕಾರ ಬಳಸಿ ವಿಶೇಷ ನ್ಯಾಯಾಲಯಗಳನ್ನು ಆರಂಭಿಸಿರುವುದು ಸಿಂಧುವಾಗಿದೆ. ಸಂಸದರು/ಶಾಸಕರ ವಿರುದ್ಧದ ಪ್ರಕರಣಗಳನ್ನು ವಿಚಾರಣೆ ನಡೆಸುವ ಈ ನ್ಯಾಯಾಲಯಗಳನ್ನು ಅಕ್ರಮ ಅಥವಾ ಅಸಾಂವಿಧಾನಿಕ ಎಂದು ಹೇಳಲಾಗದು” ಎಂದು ಹನ್ಸಾರಿಯಾ ಮಾಹಿತಿ ನೀಡಿದರು. ಅಲ್ಲದೆ, ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳನ್ನು ತ್ವರಿತವಾಗಿ ಆಲಿಸಲು ಮ್ಯಾಜಿಸ್ಟ್ರೇಟ್ ಹಾಗೂ ಸೆಷನ್ಸ್ ಎರಡೂ ಹಂತದಲ್ಲಿಯೂ ವಿಶೇಷ ನ್ಯಾಯಾಲಯಗಳನ್ನು ಆರಂಭಿಸುವುದಕ್ಕೆ ಹೈಕೋರ್ಟ್ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಅಮಿಕಸ್ ಒತ್ತಾಯಿಸಿದರು.