ಯೆಮನ್‌ನಲ್ಲಿ ಗಲ್ಲು ಶಿಕ್ಷೆಗೀಡಾದ ನಿಮಿಷಾ ಉಳಿಸುವ ಈವರೆಗಿನ ಎಲ್ಲ ಯತ್ನ ವಿಫಲ: ಸುಪ್ರೀಂಗೆ ಕೇಂದ್ರದ ಮಾಹಿತಿ

ನ್ಯಾಯಾಲಯ ಜುಲೈ 18ಕ್ಕೆ ಪ್ರಕರಣ ಮುಂದೂಡಿತು. "ಎ ಜಿ ವಾದ ಆಲಿಸಿದೆವು. ಶುಕ್ರವಾರಕ್ಕೆ ಪ್ರಕರಣ ಪಟ್ಟಿ ಮಾಡಿ. ಪಕ್ಷಕಾರರು ಸ್ಥಿತಿಗತಿಯನ್ನು ನಮಗೆ ತಿಳಿಸಲಿ" ಎಂದು ಅದು ನಿರ್ದೇಶಿಸಿತು. ಇದೇ 16ರಂದು ನಿಮಿಷಾರನ್ನು ಗಲ್ಲಿಗೇರಿಸಲಾಗುತ್ತದೆ.
Supreme Court
Supreme Court
Published on

ತನ್ನ ವ್ಯವಹಾರ ಪಾಲುದಾರನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಶಿಕ್ಷೆಯಿಂದ ಪಾರು ಮಾಡುವ ಈವರೆಗಿನ ಎಲ್ಲಾ ಯತ್ನಗಳು ವಿಫಲವಾಗಿವೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ನಿಮಿಷಾ ಪ್ರಿಯಾ ಇಂಟರ್‌ನ್ಯಾಷನಲ್‌ ಆಕ್ಷನ್ ಕೌನ್ಸಿಲ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಮಾತುಕತೆ ಸೇರಿದಂತೆ ಎಲ್ಲಾ ಮಾರ್ಗಗಳನ್ನೂ ಸರ್ಕಾರ ಅನ್ವೇಷಿಸಿತಾದರೂ ಇದುವರೆಗೆ ಅದಾವುದೂ ಫಲಪ್ರದವಾಗಿಲ್ಲ ಎಂದು ಅಟಾರ್ನಿ ಜನರಲ್ (ಎಜಿ) ಆರ್ ವೆಂಕಟರಮಣಿ ಅವರು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠಕ್ಕೆ ತಿಳಿಸಿದರು. ಶಿಕ್ಷೆಯನ್ನು ಅಮಾನತಿನಲ್ಲಿಡುವಂತೆ ಮಾಡಿದ ಮನವಿಗೂ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ ಎಂದು ಅವರು ಹೇಳಿದರು.

Also Read
ಗಲ್ಲುಶಿಕ್ಷೆಯಿಂದ ಮಗಳ ರಕ್ಷಣೆ: ಕೇರಳ ಮಹಿಳೆ ಮನವಿ ಕುರಿತು ಕೇಂದ್ರದ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್

“ಸಂಧಾನಕ್ಕೆ ಕೂಡ ಯತ್ನಿಸಲಾಯಿತು. ಭಾರತ ಸರ್ಕಾರ ತಲುಪಬಹುದಾದ ಹಂತ ಇದು. ಅಲ್ಲಿಯವರೆಗೂ ಹೋಗಿದ್ದೇವೆ. ಶಿಕ್ಷೆಯನ್ನು ಅಮಾನತಿನಲ್ಲಡಬಹುದೇ ಎಂಬುದನ್ನು ಗಮನಿಸಿ ಎಂತಲೂ ನಾವು ಸರ್ಕಾರಿ ವಕೀಲರನ್ನು ಕೇಳಿದೆವು. ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಯೆಮೆನ್ ಸರ್ಕಾರಕ್ಕೆ ಯಾವುದೂ ಮುಖ್ಯವಲ್ಲ. ನಾವು ಅದರ ಬಗ್ಗೆ (ಪ್ರಯತ್ನಗಳ ಬಗ್ಗೆ) ಹೆಚ್ಚು ಸಾರ್ವಜನಿಕವಾಗಿ ಮಾತನಾಡಿಲ್ಲ. ಅಲ್ಲಿ ಪ್ರಭಾವಿಯಾಗಿರುವ ಶೇಖ್ ಒಬ್ಬರ ಜೊತೆಯೂ ಮಾತುಕತೆ ನಡೆಸಿದವು. ಅದು ಫಲಪ್ರದವಾಗಲಿಲ್ಲ. ಮರಣದಂಡನೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ನಮಗೆ ಅನೌಪಚಾರಿಕವಾಗಿ ತಿಳಿಯಿತು ಆದರೆ ಅದು ಕಾರ್ಯರೂಪಕ್ಕೆ ಬರಲಿದೆಯೇ, ಇಲ್ಲವೇ ಎಂಬುದು ನಮಗೆ ಖಾತ್ರಿ ಇಲ್ಲ. ನಿರ್ದಿಷ್ಟ ಎಲ್ಲೆ ಮೀರಿ ಏನನ್ನಾದರೂ ಮಾಡುವಂತೆ ಸರ್ಕಾರವನ್ನು ಕೇಳಬಹುದಾದ ವಿಷಯ ಇದಲ್ಲ" ಎಂದು ಎಜಿ ವೆಂಕಟರಮಣಿ ಹೇಳಿದರು.

ನಿಮಿಷಾ ಪ್ರಿಯಾ ಅವರನ್ನು ಉಳಿಸಲೆಂದು ರೂಪುಗೊಂಡಿರುವ ಸ್ವಯಂಸೇವಾ ಸಂಸ್ಥೆಯಾದ ʼಸೇವ್ ನಿಮಿಷಾ ಪ್ರಿಯಾ ಇಂಟರ್‌ನ್ಯಾಷನಲ್ ಆಕ್ಷನ್ ಕೌನ್ಸಿಲ್ʼ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸರ್ಕಾರ ಈ ವಿಚಾರ ತಿಳಿಸಿದೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನಿಮಿಷಾ ಪ್ರಿಯಾ ಯೆಮನ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಯೆಮೆನ್‌ನಲ್ಲಿ ವ್ಯವಹಾರ ನಡೆಸುವುದಕ್ಕೆ ಅಲ್ಲಿನ ಸ್ಥಳೀಯರೊಂದಿಗೆ ಪಾಲುದಾರಿಕೆಗೆ ಮುಂದಾಗಬೇಕು ಎಂಬ ಕಾನೂನು ಇದೆ. ಅದರಂತೆ ಯೆಮೆನ್ ಪ್ರಜೆ ತಲಾಲ್ ಅಬ್ದೋ ಮಹ್ದಿ ಪಾಲುದಾರಿಕೆಯಲ್ಲಿ ನಿಮಿಷಾ ಕ್ಲಿನಿಕ್‌ ತೆರೆದರು.

ಆದರೆ, ಕೆಲ ದಿನಗಳಲ್ಲೇ ಅವರ ನಡುವೆ ವ್ಯಾವಹಾರಿಕ ಭಿನ್ನಾಭಿಪ್ರಾಯ ತಲೆದೋರಿತ್ತು. ಯೆಮೆನ್‌ ಬಿಟ್ಟು ತೆರಳದಂತೆ ಮಹ್ದಿ ಆಕೆಯ ಪಾಸ್‌ಪೋರ್ಟ್‌ ಕಿತ್ತುಕೊಂಡಿದ್ದ ಎನ್ನಲಾಗಿತ್ತು. ತನ್ನ ಪಾಸ್‌ಪೋರ್ಟ್‌ ಮರಳಿ ಪಡೆಯಲೆಂದು ಅಮಲು ಪದಾರ್ಥವಿರುವ ಚುಚ್ಚುಮದ್ದನ್ನು ಆಕೆ ಮಹ್ದಿಗೆ ಚುಚ್ಚಿದ್ದಳು ಎಂದು ಆರೋಪಿಸಲಾಗಿದ್ದು, ಅಮಲು ಪದಾರ್ಥ ಅತಿಯಾದ ಪರಿಣಾಮ ಆತ ಸಾವನ್ನಪ್ಪಿದ್ದ ಎನ್ನಲಾಗಿತ್ತು. ಕೊಲೆ ಆರೋಪದಡಿ ನಿಮಿಷಾಗೆ ಮರಣದಂಡನೆ ವಿಧಿಸಲಾಗಿತ್ತು. ಶಿಕ್ಷೆಯ ವಿರುದ್ಧ ಆಕೆ ಸಲ್ಲಿಸಿದ್ದ ಮೇಲ್ಮನವಿಯನ್ನು ಯೆಮೆನ್ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು

ಮಹ್ದಿ ಕುಟುಂಬಸ್ಥರಿಗೆ ಪರಿಹಾರ ಧನ (ಬ್ಲಡ್‌ ಮನಿ) ಪಾವತಿಸಲು ವ್ಯವಸ್ಥೆ ಮಾಡಲಾಯಿತಾದರೂ ಗೌರವದ ಪ್ರಶ್ನೆ ಎಂಬ ಕಾರಣಕ್ಕೆ ಮಹ್ದಿ ಸಂಬಂಧಿಕರು ಅದಕ್ಕೆ ಒಪ್ಪಲಿಲ್ಲ ಎಂದು ಎಜಿ ವೆಂಕಟರಮಣಿ ಅವರು ಇಂದಿನ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.  

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ರಘುನಾಥ್‌ ಬಸಂತ್‌ ಅವರು ಇದಕ್ಕೆ ದನಿ ಗೂಡಿಸಿ, ಯೆಮನ್‌ ಆಗಿರುವುದರಿಂದ ಎಂತಹ ಸಂಧಾನಪಟುಗಳು ಯತ್ನಿಸಿದರೂ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

 "ಹೌದು, ಏನೂ ಆಗುತ್ತಿಲ್ಲ. ಸಮಸ್ಯೆ ಏನೆಂದರೆ ದಯವಿಟ್ಟು ಅದನ್ನು ಮಾಡಿ ಎಂದು ನಾವು ಹೇಳಲು ಸಾಧ್ಯವಿಲ್ಲ, ಅವರು ನಮ್ಮ ಮಾತು ಕೇಳುವುದಿಲ್ಲ" ಎಂದು ಎಜಿ ಹೇಳಿದರು.

ಹೆಚ್ಚಿನ ಮೊತ್ತದ ಬ್ಲಡ್‌ ಮನಿ ಪಾವತಿಸಲು ಸಿದ್ಧವಿರುವುದಾಗಿ ಬಸಂತ್‌ ಈ ವೇಳೆ ಸ್ಪಷ್ಟಪಡಿಸಿದರು.

Also Read
ಕೇರಳ ನರ್ಸ್‌ಗೆ ಗಲ್ಲು: ಕುಟುಂಬ ಯೆಮನ್‌ಗೆ ತೆರಳಲು ಅನುಮತಿಸಬಹುದೇ ಎಂದು ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಪ್ರಶ್ನೆ

"ವಿದೇಶಾಂಗ ವ್ಯವಹಾರಗಳ ಜಂಟಿ ಕಾರ್ಯದರ್ಶಿ ಕೂಡ ಇಲ್ಲಿ ಇದ್ದಾರೆ. ಅವರು ನನಗೆ ಮಾಹಿತಿ ನೀಡುತ್ತಿದ್ದಾರೆ. ಬೆಳಿಗ್ಗೆ 10:30ಕ್ಕೆ  ಶಿಕ್ಷೆ ಅಮಾನತುಗೊಳಿಸುವಂತೆ ವಿನಂತಿಸಲಾಯಿತು. ಆದರೆ ಫಲಪ್ರದವಾಗಿಲ್ಲ. ಇದು ಪ್ರತಿಕೂಲವೂ ಆಗಿರಬಹುದು. ಇವು ಅತ್ಯಂತ ಗೌಪ್ಯ ಸಂಗತಿಗಳು" ಎಂದು ಎಜಿ ವಿವರಿಸಿದರು.

ಅಂತಿಮವಾಗಿ ನ್ಯಾಯಾಲಯ ಜುಲೈ 18ಕ್ಕೆ ಪ್ರಕರಣ ಮುಂದೂಡಿತು. "ಎ ಜಿ ವಾದ ಆಲಿಸಿದೆವು. ಶುಕ್ರವಾರಕ್ಕೆ ಪ್ರಕರಣ ಪಟ್ಟಿ ಮಾಡಿ. ಪಕ್ಷಕಾರರು ಸ್ಥಿತಗತಿಯನ್ನು ನಮಗೆ ತಿಳಿಸಲಿ" ಎಂದು ಅದು ನಿರ್ದೇಶಿಸಿತು. ಇದೇ 16ರಂದು ನಿಮಿಷಾರನ್ನು ಗಲ್ಲಿಗೇರಿಸಲಾಗುತ್ತದೆ.

Kannada Bar & Bench
kannada.barandbench.com