
ದೇಶದಲ್ಲಿ ಭದ್ರತೆಗಾಗಿ ಬೇಹು ತಂತ್ರಾಂಶ ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮಂಗಳವಾರ ಹೇಳಿರುವ ಸುಪ್ರೀಂ ಕೋರ್ಟ್ ಖಾಸಗಿ ವ್ಯಕ್ತಿಗಳ ವಿರುದ್ಧ ಅದನ್ನು ಬಳಸಲಾಗುತ್ತಿದೆ ಎಂಬ ಆರೋಪಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದೆ.
ಪತ್ರಕರ್ತರು, ನ್ಯಾಯಾಧೀಶರು, ಕಾರ್ಯಕರ್ತರು ಮತ್ತಿತರರ ಮೇಲೆ ಕಣ್ಣಿಡಲು ಕೇಂದ್ರ ಸರ್ಕಾರ ಪೆಗಸಸ್ ಬೇಹು ತಂತ್ರಾಂಶ ಬಳಸಿದೆ ಎಂದು ಆರೋಪಿಸಲಾದ ಅರ್ಜಿಗಳ ವಿಚಾರಣೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠದಲ್ಲಿ ನಡೆಯಿತು.
ದೇಶದ ಪ್ರಸಕ್ತ ಭದ್ರತಾ ಪರಿಸ್ಥಿತಿ (ಪಹಲ್ಗಾಮ್ ದಾಳಿನಂತರದ ಬೆಳವಣಿಗೆಗಳು) ಪ್ರಸ್ತಾಪಿಸಿದ ನ್ಯಾಯಾಲಯ ಈ ಸಮಯದಲ್ಲಿ ಯಾರೇ ಆಗಲಿ ಜಾಗರೂಕರಾಗಿರಬೇಕು ಎಂದ ಹೇಳಿದೆ.
ಬೇಹು ತಂತ್ರಾಂಶ ಖರೀದಿಸಿದ್ದರೆ, ಸರ್ಕಾರ ಅದನ್ನು ಬಳಸುವುದನ್ನು ಯಾವುದೂ ತಡೆಯಲಾಗದು ಎಂದು ವಕೀಲರೊಬ್ಬರು ವಾದಿಸಿದರು. ಆಗ ನ್ಯಾಯಾಲಯವು, " ದೇಶ ಪ್ರತಿಗಾಮಿ ಶಕ್ತಿಗಳ ವಿರುದ್ಧ ಆ ಬೇಹು ತಂತ್ರಾಂಶ ಬಳಸುತ್ತಿದ್ದರೆ ತಪ್ಪೇನು? ಬೇಹು ತಂತ್ರಾಂಶ ಹೊಂದಿರುವುದರಲ್ಲಿ ಯಾವುದೇ ತಪ್ಪಿಲ್ಲ... ರಾಷ್ಟ್ರದ ಭದ್ರತೆ ಕುರಿತಂತೆ ರಾಜಿ ಅಥವಾ ತ್ಯಾಗ ಸಾಧ್ಯವಿಲ್ಲ. ಗೌಪ್ಯತೆಯ ಹಕ್ಕನ್ನು ಹೊಂದಿರುವ ಖಾಸಗಿ ನಾಗರಿಕರಿಗೆ ಸಂವಿಧಾನದ ಅಡಿಯಲ್ಲಿ ರಕ್ಷಣೆ ಇರುತ್ತದೆ... ಅದಕ್ಕೆ ಸಂಬಂಧಿಸಿದಂತೆ ಅವರ ದೂರನ್ನು [ಸದಾ ಪರಿಶೀಲಿಸಬಹುದು]” ಎಂಬುದಾಗಿ ನ್ಯಾಯಾಲಯ ನುಡಿಯಿತು.
ಬೇಹು ತಂತ್ರಾಂಶ ದುರುಪಯೋಗದ ಕುರಿತಾದ ತಜ್ಞರ ಸಮಿತಿಯ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲು ಸಾಧ್ಯವಿಲ್ಲ ಎಂದ ನ್ಯಾಯಾಲಯ ಇದರಿಂದಾಗಿ ಅದು ಹಾದಿ- ಬೀದಿಯ ಚರ್ಚೆಯ ವಿಷಯವಾಗಿಬಿಡುತ್ತದೆ ಎಂದಿತು.
ವ್ಯಕ್ತಿಗಳ ಮೊಬೈಲ್ ಫೋನ್ ರೀತಿಯ ಎಲೆಕ್ಟ್ರಾನಿಕ್ ಸಾಧನಗಳ ವಿವರ ಕಲೆ ಹಾಕಲು ಕೇಂದ್ರ ಸರ್ಕಾರ ಪೆಗಸಸ್ ಬೇಹು ತಂತ್ರಾಂಶ ಬಳಸಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು ಎಂದು ಕೋರಿ ವಿವಿಧ ಅರ್ಜಿಗಳು ಸಲ್ಲಿಕೆಯಾಗಿದ್ದವು.
ಇಸ್ರೇಲ್ ಮೂಲದ ಬೇಹು ತಂತ್ರಾಂಶ ಸಂಸ್ಥೆ ಎನ್‌ಎಸ್‌ಒ ತನ್ನ ಪೆಗಸಸ್ ಸ್ಪೈವೇರ್‌ಗೆ ಹೆಸರುವಾಸಿಯಾಗಿದ್ದು ಅನುಮೋದಿಸಲ್ಪಟ್ಟ ಸರ್ಕಾರಗಳಿಗೆ ಮಾತ್ರವೇ ಇದನ್ನು ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿತ್ತು. ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುವುದಿಲ್ಲ ಎಂದು ಹೇಳಿಕೊಂಡಿತ್ತು. ಆದರೂ ಇದು ಯಾವ ಸರ್ಕಾರಗಳಿಗೆ ತನ್ನ ವಿವಾದಿತ ಉತ್ಪನ್ನವನ್ನು ಮಾರಾಟ ಮಾಡಿದೆ ಎಂಬುದನ್ನು ಬಹಿರಂಗಪಡಿಸಿರಲಿಲ್ಲ.
ಭಾರತೀಯ ಸುದ್ದಿ ಜಾಲತಾಣ ದಿ ವೈರ್ ಸೇರಿದಂತೆ ಸುದ್ದಿ ಸಂಸ್ಥೆಗಳ ಅಂತಾರಾಷ್ಟ್ರೀಯ ಒಕ್ಕೂಟ 2021ರಲ್ಲಿ ಖಾಸಗಿ ವ್ಯಕ್ತಿಗಳ ಮೇಲೆ ಪೆಗಸಸ್ ಬೇಹು ತಂತ್ರಾಂಶ ಬಳಸಿರುವ ಕುರಿತಾಗಿ ಸರಣಿ ವರದಿಗಳನ್ನು ಬಿಡುಗಡೆ ಮಾಡಿತ್ತು. ಈ ಸಾಫ್ಟ್‌ವೇರ್ ಅನ್ನು ಭಾರತೀಯ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ವಕೀಲರು, ಅಧಿಕಾರಿಗಳು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಸೇರಿದಂತೆ ಹಲವು ವ್ಯಕ್ತಿಗಳ ಮೊಬೈಲ್ ಸಾಧನಗಳಿಗೆ ಅಳವಡಿಸಿರುವ ಶಂಕೆ ವ್ಯಕ್ತಪಡಿಸಿತ್ತು.
ಸಂಭಾವ್ಯ ಗುರಿಗಳಾಗಿ ಆಯ್ಕೆ ಮಾಡಲಾದ ಫೋನ್ ಸಂಖ್ಯೆಗಳ ಪಟ್ಟಿಯನ್ನು ವರದಿಗಳಲ್ಲಿ ಉಲ್ಲೇಖಿಸಲಾಗಿತ್ತು. ಅಮ್ನೆಸ್ಟಿ ಇಂಟರ್‌ನ್ಯಾಷನಲ್ ತಂಡ ನಡೆಸಿದ ವಿಶ್ಲೇಷಣೆ ಈ ಫೋನ್ ನಂಬರ್‌ಗಳಲ್ಲಿ ಕೆಲವಕ್ಕೆ ಪೆಗಸಸ್ ಬೇಹು ತಂತ್ರಾಂಶ ಯಶಸ್ವಿಯಾಗಿ ನುಸುಳಿರುವ ಕುರುಹುಗಳಿವೆ ಎಂದೂ ಮತ್ತೆ ಕೆಲ ಉಪಕರಣಗಳಲ್ಲಿ ಅದನ್ನು ಅಳವಡಿಸಲು ಯತ್ನಿಸಿದ ಕುರುಹುಗಳು ಕಂಡುಬಂದಿವೆ ಎಂದೂ ತಿಳಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಎದುರು ಪ್ರಸ್ತುತ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಅರ್ಜಿದಾರರಲ್ಲಿ ವಕೀಲ ಎಂಎಲ್ ಶರ್ಮಾ, ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ , ಹಿಂದೂ ಸಮೂಹ ಪ್ರಕಟಣಾ ಸಂಸ್ಥೆಗಳ ನಿರ್ದೇಶಕ ಎನ್ ರಾಮ್ ಮತ್ತು ಏಷ್ಯಾನೆಟ್ ಸಂಸ್ಥಾಪಕ ಶಶಿಕುಮಾರ್ , ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ , ಪತ್ರಕರ್ತರಾದ ರೂಪೇಶ್ ಕುಮಾರ್ ಸಿಂಗ್, ಇಪ್ಸಾ ಶತಾಕ್ಷಿ , ಪರಂಜಯ್ ಗುಹಾ ಠಾಕುರ್ತಾ, ಎಸ್‌ಎನ್‌ಎಂ ಅಬಿದಿ ಮತ್ತು ಪ್ರೇಮ್ ಶಂಕರ್ ಝಾ ಸೇರಿದ್ದಾರೆ.
ನಂತರ ಸುಪ್ರೀಂ ಕೋರ್ಟ್ ಹಗರಣದ ತನಿಖೆಗಾಗಿ ತ್ರಿಸದಸ್ಯ ತಜ್ಞರ ಸಮಿತಿ ರಚಿಸಿತ್ತು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್ ವಿ ರವೀಂದ್ರನ್ ನೇತೃತ್ವದ ಸಮಿತಿ ಜುಲೈ 2022ರಲ್ಲಿ ಸಲ್ಲಿಸಿದ ವರದಿ, ಪರೀಕ್ಷಿಸಿದ ಇಪ್ಪತ್ತೊಂಬತ್ತು ಮೊಬೈಲ್ ಫೋನ್‌ಗಳಲ್ಲಿ ಬೇಹು ತಂತ್ರಾಂಶ ಕಂಡುಬಂದಿಲ್ಲ ಎಂದಿತ್ತು. 29 ಸಾಧನಗಳಲ್ಲಿ 5 ಸಾಧನಗಳಲ್ಲಿ ಕೆಲವು ಮಾಲ್‌ವೇರ್ ಕಂಡುಬಂದಿದೆ ಆದರೆ ಅದು ಪೆಗಸಸ್ ಅಲ್ಲ ಎಂದು ಸಮಿತಿ ತಿಳಿಸಿತ್ತು.
ಇಂದಿನ ವಿಚಾರಣೆ ವೇಳೆ ಹಿರಿಯ ವಕೀಲರಾದ ಕಪಿಲ್ ಸಿಬಲ್, ಶ್ಯಾಮ್ ದಿವಾನ್ ವಾದ ಮಂಡಿಸಿದರು. ಪ್ರಕರಣದ ಮುಂದಿನ ವಿಚಾರಣೆ ಜುಲೈ 30ರಂದು ನಡೆಯಲಿದೆ.