ಐಎಂಎ ಹಗರಣ: ರೋಷನ್ ಬೇಗ್ ಆಸ್ತಿ ಜಪ್ತಿಗೆ ಮುಂದಾಗಿರುವುದಾಗಿ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದ ಸರ್ಕಾರ

ಐಎಂಎಯಿಂದ ರೂ 10 ಕೋಟಿ ದೇಣಿಗೆ ಪಡೆದಿರುವುದು ಮತ್ತು ಆಸ್ತಿ ಜಪ್ತಿ ಮಾಡುವ ಕುರಿತಂತೆ ಸರ್ಕಾರ ತನ್ನ ನಿಲುವು ಪ್ರಕಟಿಸಬೇಕು ಎಂದು ಸೂಚಿಸಿದ ನ್ಯಾಯಾಲಯ ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿದೆ.
ಐಎಂಎ ಹಗರಣ: ರೋಷನ್ ಬೇಗ್ ಆಸ್ತಿ ಜಪ್ತಿಗೆ ಮುಂದಾಗಿರುವುದಾಗಿ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದ ಸರ್ಕಾರ
Published on

ಐಎಂಎ ಠೇವಣಿದಾರರ ಹಣವನ್ನೇ ಸರ್ಕಾರಿ ಶಾಲೆಯೊಂದಕ್ಕೆ ದೇಣಿಗೆ ಪಡೆದಿರುವುದಕ್ಕೆ ಕರ್ನಾಟಕ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದ್ದು ಸಂಸ್ಥೆಯ ಆಸ್ತಿ ರಕ್ಷಣೆಗೆ ಸರ್ಕಾರ ಆಸಕ್ತಿ ತೋರುತ್ತಿರುವಂತಿದೆ ಎಂದು ಹೇಳಿದೆ. ಇದೇ ವೇಳೆ ಸರ್ಕಾರ ರೋಷನ್‌ ಬೇಗ್‌ ಅವರ ಆಸ್ತಿ ಜಪ್ತಿ ಸಂಬಂಧ ಎರಡು ಅಧಿಸೂಚನೆಗಳನ್ನು ಹೊರಡಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎ ಎಸ್‌ ಓಕಾ ನೇತೃತ್ವದ ವಿಭಾಗೀಯ ಪೀಠ ಬೇಗ್‌ ಆಸ್ತಿ ಜಪ್ತಿ ಸಂಬಂಧ ಸರ್ಕಾರ ಅನುಸರಿಸುತ್ತಿರುವ ವಿಳಂಬ ಧೋರಣೆ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಆಸ್ತಿ ಜಪ್ತಿಗೆ ಐದಾರು ಆದೇಶಗಳನ್ನು ನೀಡಬೇಕಾಯಿತು. ಇದೆಲ್ಲಾ ನೋಡಿದರೆ ಸರ್ಕಾರ ಐಎಂಎಯನ್ನು ರಕ್ಷಿಸಲು ಆಸಕ್ತಿ ತೋರುವಂತಿದೆ ಎಂದು ಕಿಡಿಕಾರಿತು.

ಐಎಂಎ ಠೇವಣಿದಾರರಿಂದ ಪಡೆದಿದ್ದ ಹಣದಲ್ಲಿಯೇ ಸರ್ಕಾರಿ ಶಾಲೆಯೊಂದಕ್ಕೆ ರೂ 10 ಕೋಟಿ ದೇಣಿಗೆ ನೀಡಿದ್ದು ಅದು ಹೂಡಿಕೆದಾರರ ಹಣ ಎಂಬುದನ್ನು ಸರ್ಕಾರ ಪರಿಶೀಲಿಸಲಿಲ್ಲವೇ? ಹೂಡಿಕೆದಾರರ ಹಣವನ್ನು ದೇಣಿಗೆ ರೂಪದಲ್ಲಿ ಪಡೆದದ್ದಾದರೂ ಹೇಗೆ ಎಂದು ನ್ಯಾಯಾಲಯ ಪ್ರಶ್ನಿಸಿತು.

ಐಎಂಎಯಿಂದ ರೂ 10 ಕೋಟಿ ದೇಣಿಗೆ ಪಡೆದಿರುವುದು ಮತ್ತು ಆಸ್ತಿ ಜಪ್ತಿ ಮಾಡುವ ಕುರಿತಂತೆ ಸರ್ಕಾರ ತನ್ನ ನಿಲುವು ಪ್ರಕಟಿಸಬೇಕು ಎಂದು ಸೂಚಿಸಿದ ನ್ಯಾಯಾಲಯ ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿದೆ.

Also Read
ಐಎಂಎ ಹಗರಣ: ಪರಪ್ಪನ ಅಗ್ರಹಾರ ಜೈಲಿಗೆ ಮಾಜಿ ಸಚಿವ ರೋಷನ್‌ ಬೇಗ್‌, 14 ದಿನಗಳ ನ್ಯಾಯಾಂಗ ಬಂಧನ

ಎರಡು ಅಧಿಸೂಚನೆ

ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ರೋಷನ್‌ ಬೇಗ್‌ ಅವರ ಸ್ಥಿರ ಮತ್ತು ಚರಾಸ್ತಿ ಜಪ್ತಿ ಮಾಡಲು ಸರ್ಕಾರ ಎರಡು ಅಧಿಸೂಚನೆಗಳನ್ನು ಹೊರಡಿಸಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಐಎಂಎ ಪ್ರಕರಣಗಳ ಸಕ್ಷಮ ಪ್ರಾಧಿಕಾರ ಮತ್ತು ವಿಶೇಷ ಅಧಿಕಾರಿ ಹರ್ಷ್ ಗುಪ್ತಾ ಅವರು ಸಲ್ಲಿಸಿದ ವರದಿಯನ್ನು ಪರಿಗಣಿಸಿ ಸಿಬಿಐನಿಂದ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಅದು ಹೇಳಿದೆ.

ಅಲ್ಲದೆ ಅಗ್ರ ನೂರು ಠೇವಣಿದಾರರಿಗೆ ಪಾವತಿಸಿದ ಹೆಚ್ಚುವರಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತೊಂದು ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

ಬೇಗ್‌ ಅವರಿಂದ ಇಪ್ಪತ್ತು ಸ್ಥಿರ ಮತ್ತು ಚರಾಸ್ತಿಗಳನ್ನು ವಶಪಡಿಸಿಕೊಂಡಿರುವ ಸರ್ಕಾರ ತನ್ನ ಅಗ್ರ ಠೇವಣಿದಾರರಿಗೆ ಪಾವತಿಸಿದ್ದ ಠೇವಣಿ ಮೊತ್ತಕ್ಕಿಂತ ರೂ 52 ಕೋಟಿ ಕೋಟಿಯಷ್ಟು ಹೆಚ್ಚಿನ ಹಣವನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ತಿಳಿಸಿದೆ. ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾದ ಸ್ವತ್ತುಗಳನ್ನು ರೋಷನ್ ಬೇಗ್ ಅವರು 2018 ರ ಏಪ್ರಿಲ್‌ನಲ್ಲಿ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ. ಅವರ ಘೋಷಿತ ಆಸ್ತಿ ಮೌಲ್ಯ 17 ಕೋಟಿ ರೂಪಾಯಿ.

ದೇಶದಿಂದ ಪಲಾಯನ ಮಾಡಲು ಹಗರಣದ ಪ್ರಮುಖ ಆರೋಪಿ ಮತ್ತು ಐಎಂಎ ಮಾಲೀಕ ಮೊಹಮ್ಮದ್‌ ಮನ್ಸೂರ್‌ ಖಾನ್‌ಗೆ ಸಹಾಯ ಮಾಡಿದ ಆರೋಪ ಬೇಗ್‌ ಅವರ ಮೇಲಿತ್ತು. ತನ್ನಿಂದ ಬೇಗ್‌ ರೂ 200 ಕೋಟಿಯಷ್ಟು ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂದು ವೀಡಿಯೊ ಮೂಲಕ ಮನ್ಸೂರ್‌ ಆರೋಪಿಸಿದ್ದರು.

Kannada Bar & Bench
kannada.barandbench.com