ತೆರವು ಕಾರ್ಯಾಚರಣೆ ವೇಳೆ ಧಾರ್ಮಿಕ ತಾರತಮ್ಯ ನಡೆದಿಲ್ಲ: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಡಿಸಿ ಮಾಹಿತಿ

ಕೆಡವಲಾದ 38 ಅಂಗಡಿಗಳಲ್ಲಿ ಶೇ.55ರಷ್ಟು ಹಿಂದೂಗಳಿಗೆ ಸೇರಿದ್ದು ಶೇ.45ರಷ್ಟು ಅಲ್ಪಸಂಖ್ಯಾತರದ್ದಾಗಿವೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
Punjab and Haryana High Court with Nuh violence
Punjab and Haryana High Court with Nuh violence

ನೂಹ್‌ ಹಿಂಸಾಚಾರದ ಹಿನ್ನೆಲೆಯಲ್ಲಿ ನಡೆದಿದೆ ಎನ್ನಲಾದ ಕಟ್ಟಡ ನೆಲಸಮ ಕಾರ್ಯಾಚರಣೆ ವೇಳೆ ಧಾರ್ಮಿಕ ತಾರತಮ್ಯ ಮತ್ತು ಆಯ್ದು ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ ಎಂಬ ವಾದವನ್ನು ಹರಿಯಾಣದ ನೂಹ್ ಜಿಲ್ಲೆಯ ಡೆಪ್ಯುಟಿ ಕಮಿಷನರ್ ನಿರಾಕರಿಸಿದ್ದಾರೆ.

‘ಪ್ರಧಾನವಾಗಿ ಮುಸ್ಲಿಂ  ಬಾಹುಳ್ಯ ಇರುವ ಪ್ರದೇಶವಾದ ನೂಹ್‌ನ ಧ್ವಂಸ ಕಾರ್ಯಾಚರಣೆಯಿಂದ ಒಟ್ಟು 354 ವ್ಯಕ್ತಿಗಳ ಮೇಲೆ ಪರಿಣಾಮ ಬೀರಿದೆ, ಅದರಲ್ಲಿ 71 ಹಿಂದೂಗಳು ಮತ್ತು 283 ಮುಸ್ಲಿಮರು ಸೇರಿದ್ದಾರೆ ಎಂದು  ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ಗೆ ಆಗಸ್ಟ್ 17 ರಂದು ಸಲ್ಲಿಸಿದ ಅಫಿಡವಿಟ್‌ನಲ್ಲಿ, ಡೆಪ್ಯೂಟಿ ಕಮಿಷನರ್ ಧೀರೇಂದ್ರ ಖಡ್ಗಟಾ ತಿಳಿಸಿದ್ದಾರೆ.

ಕೆಡವಲಾದ 38 ಅಂಗಡಿಗಳಲ್ಲಿ ಶೇ.55ರಷ್ಟು ಹಿಂದೂಗಳಿಗೆ ಸೇರಿದ್ದು ಶೇ.45ರಷ್ಟು ಅಲ್ಪಸಂಖ್ಯಾತರದ್ದಾಗಿವೆ. ಸರ್ಕಾರ ಜಾತಿ ಧರ್ಮದ ಆಧಾರದಲ್ಲಿ ಕಟ್ಟಡ ಕೆಡವಿಲ್ಲ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

ಕಟ್ಟಡ ನೆಲಸಮ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪ್ರಸ್ತುತ ಹೈಕೋರ್ಟ್‌ನಲ್ಲಿ ಬಾಕಿ ಇರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ (ಪಿಐಎಲ್) ಪ್ರತಿಕ್ರಿಯೆಯಾಗಿ ಈ ಅಫಿಡವಿಟ್‌ ಸಲ್ಲಿಸಲಾಗಿದೆ. ಧ್ವಂಸ ಕಾರ್ಯಾಚರಣೆಯು ಮುಸ್ಲಿಂ ಸಮುದಾಯವನ್ನು ಮಾತ್ರ ಗುರಿಯಾಗಿಸಿಕೊಂಡಿದೆ ಎಂದು ವಿವಿಧ ಸುದ್ದಿ ವರದಿಗಳಲ್ಲಿ ಆರೋಪಿಸಲಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿತ್ತು. ನಿರ್ದಿಷ್ಟ ಸಮುದಾಯದ ಒಡೆತನದ ಕಟ್ಟಡಗಳನ್ನು ಕೆಡವಲಾಗುತ್ತಿದೆಯೇ ಎಂಬ ಆತಂಕವನ್ನು ಅದು ವ್ಯಕ್ತಪಡಿಸಿತ್ತು, ಇದು ಸರ್ಕಾರದ ಜನಾಂಗೀಯ ನಿರ್ಮೂಲನೆ ಯತ್ನವನ್ನು ಸೂಚಿಸುತ್ತದೆಯೇ ಎಂದು ಅದು ಕಿಡಿಕಾರಿತ್ತು. ಅಲ್ಲದೆ, ನೆಲಸಮ ಕಾರ್ಯಾಚರಣೆಗೆ ತಡೆ ನೀಡಿದ್ದ ಹೈಕೋರ್ಟ್, ನೂಹ್ ಮತ್ತು ಗುರುಗ್ರಾಮದಲ್ಲಿ ಸೂಕ್ತ ಆದೇಶ ಮತ್ತು ನೋಟಿಸ್‌ ನೀಡದೆ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತಿದೆ ಎಂದು ಟೀಕಿಸಿತ್ತು.

ಆದ್ದರಿಂದ, ನೂಹ್ ಮತ್ತು ಗುರುಗ್ರಾಮ ಎರಡರಲ್ಲೂ ಕಳೆದ ಎರಡು ವಾರಗಳಲ್ಲಿ ಕೆಡವಲಾದ ಕಟ್ಟಡಗಳ ಸಂಖ್ಯೆಯ ಕುರಿತಾದ ಮಾಹಿತಿ ಮತ್ತು ಹಾಗೆ ನೆಲಸಮಗೊಳಿಸುವುದಕ್ಕೂ ಮುನ್ನ ಯಾವುದಾದರೂ ನೋಟಿಸ್‌ಗ ನೀಡಲಾಗಿದೆಯೇ ಎಂಬ ವಿವರಗಳಿರುವ ಅಫಿಡವಿಟ್ ಸಲ್ಲಿಸುವಂತೆ ಹರಿಯಾಣ ಸರ್ಕಾರಕ್ಕೆ ಪೀಠ ನಿರ್ದೇಶಿಸಿತ್ತು.

Related Stories

No stories found.
Kannada Bar & Bench
kannada.barandbench.com