ಜಾತಿ ಸಮೀಕ್ಷೆ ಪ್ರಶ್ನಿಸಿರುವ ಅರ್ಜಿ ಊರ್ಜಿತತ್ವದ ಪ್ರಶ್ನೆ ಎತ್ತಿದ ಆಯೋಗ: ನವೆಂಬರ್‌ 4ಕ್ಕೆ ವಿಚಾರಣೆ ಮುಂದೂಡಿಕೆ

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯಿದೆ ಸೆಕ್ಷನ್‌ 9ಕ್ಕೆ ಮಾಡಿರುವ ತಿದ್ದುಪಡಿಯನ್ನು ಸಂವಿಧಾನಬಾಹಿರ ಎಂದು ಘೋಷಿಸುವಂತೆ ಅರ್ಜಿದಾರರು ಕೋರಿದ್ದಾರೆ.
ಜಾತಿ ಸಮೀಕ್ಷೆ ಪ್ರಶ್ನಿಸಿರುವ ಅರ್ಜಿ ಊರ್ಜಿತತ್ವದ ಪ್ರಶ್ನೆ ಎತ್ತಿದ ಆಯೋಗ: ನವೆಂಬರ್‌ 4ಕ್ಕೆ ವಿಚಾರಣೆ ಮುಂದೂಡಿಕೆ
Published on

ಜಾತಿ ಸಮೀಕ್ಷೆಗೆ ತಡೆ ಕೋರಿ ಹಾವೇರಿಯ ಹಿರೇಕೆರೂರಿನ ಲಿಂಗರಾಜ ಚಪ್ಪರದಳ್ಳಿ ಸಲ್ಲಿಸಿರುವ ರಿಟ್‌ ಅರ್ಜಿಯ ಊರ್ಜಿತತ್ವದ ಬಗ್ಗೆ ಹಿಂದುಳಿದ ವರ್ಗಗಳ ಆಯೋಗವು ಪ್ರಶ್ನೆ ಎತ್ತಿದೆ.

ರಾಜ್ಯ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಕೈಗೊಳ್ಳಲಿರುವ ಸಮೀಕ್ಷಾ ಕಾರ್ಯಕ್ಕೆ ಇಂಧನ ಇಲಾಖೆಯ ವಿದ್ಯುಚ್ಛಕ್ತಿ ಮೀಟರ್‌ ರೀಡರ್‌ಗಳ ಸೇವೆ ಬಳಸಿಕೊಳ್ಳುವುದಕ್ಕೆ ಆಕ್ಷೇಪಿಸಿ ಮತ್ತು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯಿದೆ ಸೆಕ್ಷನ್‌ 9ಕ್ಕೆ ಮಾಡಿರುವ ತಿದ್ದುಪಡಿಯನ್ನು ಸಂವಿಧಾನಬಾಹಿರ ಎಂದು ಘೋಷಿಸುವಂತೆ ಕೋರಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ಪ್ರಸಾದ್‌ ಅವರ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಗಂಗಾಧರ ಗುರುಮಠ ಅವರು “ಸಂವಿಧಾನ, ಕಾಯಿದೆ ಮತ್ತು ಸುಪ್ರೀಂ ಕೋರ್ಟ್‌ ರೂಪಿಸಿರುವ ಕಾನೂನಿನ ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ನಡೆಸಲು ಅಧಿಕಾರವಿಲ್ಲ. ಹಿಂದುಳಿದ ವರ್ಗಗಳ ಆಯೋಗದ ಕಾಯಿದೆ 1995ಯು ಹಿಂದುಳಿದ ವರ್ಗಗಳಿಗೆ ಮಾತ್ರ ಸೀಮಿತವಾಗಿದ್ದು, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅನ್ವಯಿಸುವುದಿಲ್ಲ. ಈ ಹಿಂದೆಯು ಜಾತಿ ಗಣತಿ ನಡೆಸಲಾಗಿದ್ದು, ಅದಕ್ಕೆ 180 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಈಗ ಜಾತಿ ಸಮೀಕ್ಷೆಗಾಗಿ 450 ಕೋಟಿ ವಿನಿಯೋಗಿಸಲಾಗುತ್ತಿದೆ. ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ಮತ್ತು ಹಿಂದುಳಿದ ವರ್ಗಗಳ ಆಯೋಗಕ್ಕೆ ಅಧಿಕಾರವಿಲ್ಲ” ಎಂದರು.

ಆಗ ಪೀಠವು “ಆಗಸ್ಟ್‌ 13ರಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ನಿನ್ನೆ ಅರ್ಜಿ ಸಲ್ಲಿಸಲಾಗಿದ್ದು, ಇಂದು ವಿಚಾರಣೆಗೆ ಬಂದಿದೆ. ಸಮೀಕ್ಷೆಯು ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಿರುತ್ತದೆ. ಸಮೀಕ್ಷೆಯಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ” ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಪ್ರತಿಮಾ ಹೊನ್ನಾಪುರ ಅವರು “ಇಂದು ಪಿಐಎಲ್‌ ರೂಪದಲ್ಲಿ ವಿಭಾಗೀಯ ಪೀಠದ ಮುಂದೆ ಅರ್ಜಿಗಳು ವಿಚಾರಣೆಯಾಗಿದ್ದು, ನೋಟಿಸ್‌ ಜಾರಿಯಾಗಿದೆ. ಇದೇ ರೀತಿಯ ಕೋರಿಕೆಯು ಅದರಲ್ಲಿವೆ” ಎಂದರು.

Also Read
ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ: ಕೇಂದ್ರ, ರಾಜ್ಯ ಸರ್ಕಾರ, ಹಿಂದುಳಿದ ವರ್ಗಗಳ ಆಯೋಗಕ್ಕೆ ಹೈಕೋರ್ಟ್‌ ನೋಟಿಸ್‌

ಹಿಂದುಳಿದ ವರ್ಗಗಳ ಆಯೋಗ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ಅರ್ಜಿದಾರರು ಯಾವ ರೀತಿ ಬಾದಿತರಾಗಿದ್ದಾರೆ. ಅವರ ಹಕ್ಕುಗಳೇನು? ಯಾವ ಹಕ್ಕಗಳನ್ನು ಕಸಿಯಲಾಗಿದೆ ಎಂಬುದನ್ನು ತಿಳಿಸಿಲ್ಲ. ನಿರ್ದಿಷ್ಟವಾಗಿ ಹೊಸ ಜಾತಿ ಸೃಷ್ಟಿಸಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಅರ್ಜಿದಾರರ ಜಾತಿ ಯಾವುದು, ಇದರಿಂದ ಅವರು ಹೇಗೆ ಬಾದಿತರಾಗಿದ್ದಾರೆ. ಊಹೆಯೊಂದಿಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಈಗಾಗಲೇ ಎರಡು ದಿನಗಳ ಹಿಂದೆ ಸಮೀಕ್ಷೆ ಆರಂಭವಾಗಿದೆ. ಈ ಹಿಂದೆ ನಡೆಸಿದ್ದ ಜಾತಿ ಸಮೀಕ್ಷೆಯನ್ನು ಪ್ರಶ್ನಿಸಿದ್ದು, ಅದರಲ್ಲೂ ಮಧ್ಯಂತರ ತಡೆ ಇರಲಿಲ್ಲ. ಅರ್ಜಿಯ ಊರ್ಜಿತತ್ವದ ಬಗ್ಗೆಯೇ ನಮಗೆ ಆಕ್ಷೇಪವಿದೆ” ಎಂದರು.

ಇದನ್ನು ಆಲಿಸಿದ ಪೀಠವು ರಾಜ್ಯ ಸರ್ಕಾರ ಮತ್ತು ಹಿಂದುಳಿದ ವರ್ಗಗಳ ಆಯೋಗಕ್ಕೆ ನೋಟಿಸ್‌ ಜಾರಿ ಮಾಡಿ, ವಿಚಾರಣೆಯನ್ನು ನವೆಂಬರ್‌ 4ಕ್ಕೆ ಮುಂದೂಡಿತು.

Kannada Bar & Bench
kannada.barandbench.com