ಕಾವೇದಿ ನದಿ ತೀರದಲ್ಲಿ ಅಸ್ಥಿ ವಿಸರ್ಜನೆ ಸೇರಿದಂತೆ ಮಾಲಿನ್ಯಕಾರಕ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ ಕೆ ಜಿ ರಸ್ತೆಯ ಕುಶಾಲ್ ಕುಮಾರ್ ಕೌಶಿಕ್ ಸೇರಿದಂತೆ ಆರು ಮಂದಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು “ಕಾವೇರಿ ನದಿ ತೀರದಲ್ಲಿ ಮಾಲಿನ್ಯ ಹೆಚ್ಚಳವಾಗಿದೆ. ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ವರದಿಯಲ್ಲಿ ಕಾವೇರಿ ನದಿ ತೀರದಲ್ಲಿ ಮಾಲಿನ್ಯ ಹೆಚ್ಚಾಗುವುದಕ್ಕೆ ಕಾರಣಗಳನ್ನು ಉಲ್ಲೇಖಿಸಲಾಗಿದೆ. ಇದನ್ನು ಪರಿಗಣಿಸಿ ನದಿ ತೀರದಲ್ಲಿ ಅಸ್ಥಿ ವಿಸರ್ಜನೆಗೆ ಮಾರ್ಗಸೂಚಿ ರೂಪಿಸಬೇಕು. ಕಾವೇರಿ ನದಿಯನ್ನು ಜ್ಯುರಿಸ್ಟಿಕ್ ಪರ್ಸನ್ (ಕಾನೂನಾತ್ಮಕ ವ್ಯಕ್ತಿ - ವಾಸ್ತವ ವ್ಯಕ್ತಿಯಲ್ಲದ ಆದರೆ ಕಾನೂನಿನನ್ವಯ ಮಾನ್ಯ ಮಾಡಲಾದ ಸಂಘ ಸಂಸ್ಥೆಗಳು, ನಿಸರ್ಗದ ಭಾಗಗಳನ್ನು ವ್ಯಕ್ತಿಗಳ ರೀತಿಯಲ್ಲಿ ಕಾನೂನಾತ್ಮಕವಾಗಿ ಗ್ರಹಿಸುವಿಕೆ) ಎಂದು ಘೋಷಿಸಬೇಕು” ಎಂದು ಕೋರಿದರು.
ಮುಂದುವರಿದು, “ಈ ಹಿಂದೆ ಸಾಮಾನ್ಯವಾಗಿ ಎರಡು ಸ್ಥಳಗಳಲ್ಲಿ ಮಾತ್ರ ಅಸ್ಥಿ ವಿಸರ್ಜನೆ ನಡೆಯುತ್ತಿತ್ತು. ಈಗ ನದಿಯ ತೀರದ ಎಲ್ಲಾ ಕಡೆಗಳಲ್ಲೂ ಅಸ್ಥಿ ವಿಸರ್ಜನೆ ನಡೆಸಲಾಗುತ್ತಿದೆ. ಇದೇ ನೀರನ್ನು ಕುಡಿಯಲು ಬಳಕೆ ಮಾಡಲಾಗುತ್ತಿದೆ. ಕನಿಷ್ಠ ಪಕ್ಷ ಶ್ರೀರಂಗಪಟ್ಟದ ನಿಮಿಷಾಂಭ ದೇವಸ್ಥಾನದ ತೀರದಲ್ಲಿಯಾದರೂ ಅಸ್ಥಿ ವಿಸರ್ಜನೆ ಮಾಡದಂತೆ ಮಧ್ಯಂತರ ತಡೆ ವಿಧಿಸಬೇಕು. ಈಗ ಮುಂಗಾರು ವ್ಯಾಪಕವಾಗಿದ್ದು, ಅರೆಬೆಂದ ಮೂಳೆಗಳು ದೇವಸ್ಥಾನದ ಬಳಿ ಬಂದು ಬೀಳಬಹುದು” ಎಂದರು.
ಕೆಲ ಕಾಲ ವಾದ ಆಲಿಸಿದ ಪೀಠವು ಮಧ್ಯಂತರ ಆದೇಶ ಮಾಡಲು ನಿರಾಕರಿಸಿತು. ರಾಜ್ಯ ಸರ್ಕಾರ ಮತ್ತು ಇತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಿತು.
ಅರ್ಜಿದಾರರ ಕೋರಿಕೆ ಏನು?: ಕಾವೇರಿ ನದಿ ತೀರದ ನಿರ್ದಿಷ್ಟ ಸ್ಥಳಗಳಲ್ಲಿ ಅಸ್ಥಿ ವಿಸರ್ಜನೆಗೆ ಅವಕಾಶ ಮಾಡಿ ಮಾರ್ಗಸೂಚಿ ರೂಪಿಸಬೇಕು. ಉತ್ತರಾಖಂಡ ಹೈಕೋರ್ಟ್ ಗಂಗಾ, ಯಮುನಾ ಮತ್ತು ಅವುಗಳ ಉಪನದಿಗಳನ್ನು ಜ್ಯುರಿಸ್ಟಿಕ್ ಪರ್ಸನ್ ಎಂದು ಘೋಷಿಸಿದ್ದು, ಅಂತೆಯೇ ಕಾವೇರಿಯನ್ನೂ ಜ್ಯುರಿಸ್ಟಿಕ್ ಪರ್ಸನ್ ಎಂದು ಪರಿಗಣಿಸಬೇಕು. ಕಾವೇರಿ ನದಿಯ ವ್ಯಕ್ತಿಗಳು ಎಂದು ಪರಿಗಣಿಸಿ ಸಮಿತಿಯೊಂದನ್ನು ರಚಿಸಬೇಕು. ಇವರು ನದಿಗೆ ಹಾನಿ ಮಾಡಿದರವ ವಿರುದ್ಧ ದಾವೆ ಹೂಡಲು ಅವಕಾಶ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಲಾಗಿದೆ.
ಶ್ರೀರಂಗಪಟ್ಟಣದ ಗೋಸಾಯಿ ಘಾಟ್ ಮತ್ತು ನಿಮಿಷಾಂಭ ದೇವಸ್ಥಾನದ ಸಮೀಪ ಅಸ್ಥಿ ವಿಸರ್ಜನೆ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಸಂಪೂರ್ಣ ನಿಷೇಧ ವಿಧಿಸಬೇಕು. ನದಿಗೆ ಹೂವು, ಪ್ಲ್ಯಾಸ್ಟಿಕ್ ಬ್ಯಾಗ್ ಮತ್ತು ಬಟ್ಟೆ ಎಸೆಯುವವರ ವಿರುದ್ಧ ಕ್ರಮಕೈಗೊಳ್ಳಬೇಕು ಮತ್ತು ಅವುಗಳ ಮರುಬಳಕೆಗೆ ವ್ಯವಸ್ಥೆ ಮಾಡಬೇಕು. ನದಿಯ ತೀರದಲ್ಲಿನ ಭೂ ಮಾಲೀಕರು ತಮ್ಮ ಜಮೀನನ್ನು ಅಸ್ಥಿ ವಿಸರ್ಜನೆ ಮತ್ತಿತರರ ಚಟುವಟಿಕೆಗಳಿಗೆ ನೀಡಿ ಹಣ ಮಾಡುವುದಕ್ಕೆ ನಿರ್ಬಂಧ ವಿಧಿಸಬೇಕು. ಸಾಮೂಹಿಕ ಸ್ನಾನಕ್ಕೆ ಶ್ಯಾಂಪೂ, ಸೋಪು, ಬಾಡಿ ವಾಷ್, ಡಿಟರ್ಜೆಂಟ್ ಬಳಕೆಗೆ ನಿಷೇಧ ವಿಧಿಸಬೇಕು. ಅಗತ್ಯ ಶೌಚಾಲಯ ನಿರ್ಮಿಸಬೇಕು ಮತ್ತು ಅಲ್ಲಿ ಬಳಕೆ ಮಾಡಿದ ನೀರನ್ನು ಶುದ್ಧೀಕರಿಸಿ ನದಿಗೆ ಬಿಡಲು ವ್ಯವಸ್ಥೆ ಮಾಡಬೇಕು. ಶ್ರೀರಂಗಪಟ್ಟಣದ ಕೊಳಚೆ ನೀರು ಶುದ್ಧೀಕರಿಸಿ ನದಿಗೆ ಬಿಡುವುದಕ್ಕೆ ಕ್ರಮವಹಿಸಬೇಕು. ನದಿಯಲ್ಲಿ ಗೋವುಗಳಿಗೆ ಸ್ನಾನ ಮಾಡಿಸುವುದು ಸೇರಿದಂತೆ ಮಾಲಿನ್ಯಕಾರಕ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂಬುದು ಸೇರಿದಂತೆ ಹಲವು ಮನವಿ ಮಾಡಲಾಗಿದೆ.