ಹೈಕೋರ್ಟ್‌ನಲ್ಲಿ ಐದು ವಿಭಿನ್ನ ರಾಗಗಳಲ್ಲಿ ನಾಡಗೀತೆ ಪ್ರಸ್ತುತಪಡಿಸಿದ ಕಿಕ್ಕೇರಿ ಕೃಷ್ಣಮೂರ್ತಿ

ಕಿಕ್ಕೇರಿ ಅವರು ಪ್ರಕರಣದ ಮೆರಿಟ್ ಮೇಲೆ ಖುದ್ದು ವಾದ ಮಂಡಿಸಿದ್ದಾರೆ. ಹೀಗಾಗಿ, ಈ ಕುರಿತು ಸರ್ಕಾರಿ ವಕೀಲರು ತಮ್ಮ ಪ್ರತಿಕ್ರಿಯೆ ತಿಳಿಸಬೇಕು ಎಂದು ಸೂಚಿಸಿದ ನ್ಯಾಯಾಲಯ.
ಹೈಕೋರ್ಟ್‌ನಲ್ಲಿ ಐದು ವಿಭಿನ್ನ ರಾಗಗಳಲ್ಲಿ ನಾಡಗೀತೆ ಪ್ರಸ್ತುತಪಡಿಸಿದ ಕಿಕ್ಕೇರಿ ಕೃಷ್ಣಮೂರ್ತಿ

ಸುಗಮ ಸಂಗೀತ ವಿದ್ವಾಂಸರಾಗಿರುವ ಕಿಕ್ಕೇರಿ ಅವರ ಧ್ವನಿಯಲ್ಲಿ ಐದು ವಿಭಿನ್ನ ರಾಗಗಳಲ್ಲಿ ಕುವೆಂಪು ವಿರಚಿತ ನಾಡಗೀತೆ ಗುರುವಾರ ಕರ್ನಾಟಕ ಹೈಕೋರ್ಟ್‌ನ ಮೊಳಗಿತು.

ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಸರ್ಕಾರವು 2022ರ ಸೆಪ್ಟೆಂಬರ್‌ 25ರಂದು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಖುದ್ದಾಗಿ ಕೋರ್ಟ್ ಹಾಲ್‌ನಲ್ಲಿ, ಸಿ ಅಶ್ವತ್ಥ್ ಅವರು ಸಂಯೋಜಿಸಿರುವ ರಾಗದಲ್ಲೇ ನಾಡಗೀತೆ ಹಾಡುವುದು ಸಮಂಜಸ ಎಂದು ಪ್ರತಿಪಾದಿಸಿದರು.

ತಮ್ಮ ವಾದಕ್ಕೆ ಪೂರಕವೆಂಬಂತೆ ‘ಉದಯ ರವಿಚಂದ್ರಿಕೆ, ಜಂಜೂಟಿ, ಹಿಂಧೋಳ, ಕಲ್ಯಾಣಿ ಮತ್ತು ಮಾಯಾ ಮಾಳವ ಗೌಳ’ ರಾಗಗಳಲ್ಲಿ ನಾಡಗೀತೆಯನ್ನು ಹಾಡಿದರು.

ಇದರಿಂದ ಪ್ರಕರಣದಲ್ಲಿ ಅಡಗಿರುವ ವಿಚಾರಗಳು ಗಂಭೀರವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು, ಪ್ರಕರಣದ ಕುರಿತಂತೆ ಸರ್ಕಾರಿ ವಕೀಲರು ಆಳವಾಗಿ ವಿಚಾರಗಳನ್ನು ಶೋಧಿಸಿ ಹಾಗೂ ಸರ್ಕಾರಿ ಅಧಿಕಾರಿಗಳಿಂದ ಸಮರ್ಪಕ ಮತ್ತು ಸಮಗ್ರವಾದ ಮಾಹಿತಿ ಕಲೆಹಾಕಿ ಪೀಠದ ಮುಂದಿಡಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಜುಲೈ 31ಕ್ಕೆ ಮುಂದೂಡಿದರು.

ಇದಕ್ಕೂ ಮುನ್ನ, ವಿಚಾರಣೆ ವೇಳೆ ಸರ್ಕಾರಿ ವಕೀಲರು, ಕುವೆಂಪು ಅವರು ಕೆಲವೊಂದು ಷರತ್ತು ವಿಧಿಸಿ ಸಿನಿಮಾದಲ್ಲಿ ನಾಡಗೀತೆ ಬಳಸಲು ಮತ್ತು ರಾಗ ಸಂಯೋಜಿಸಲು ಅನುಮತಿ ನೀಡಿದ್ದಾರೆ ಎಂದರು.

ಆಗ ಪೀಠವು, ಕುವೆಂಪು ಅವರು ಅನುಮತಿ ನೀಡಿರುವುದು ನಿಜವೇ? ಎಂದು ಕಿಕ್ಕೇರಿ ಪರ ವಕೀಲರನ್ನು ಪ್ರಶ್ನಿಸಿದರು.

ಕಿಕ್ಕೇರಿ ಪರ ವಕೀಲರು, ಕುವೆಂಪು ಸಾಹಿತ್ಯ ಬಳಕೆಗೆ ಮಾತ್ರ ಅನುಮತಿ ನೀಡಿದ್ದಾರೆ ಹೊರತು ಸಂಗೀತ ಸಂಯೋಜನೆಗೆ ಅಲ್ಲ ಎಂದರು.

ಅದರಿಂದ ತೃಪ್ತವಾಗದ ಪೀಠವು ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ನ್ಯಾಯಾಲಯ ತಿಳಿಯಬೇಕಿದೆ. ನಿಮ್ಮ ಕಕ್ಷಿದಾರರು ಲಭ್ಯವಿದ್ದರೆ ಅವರನ್ನು ಕರೆಯಿಸಿ ಎಂದು ಸೂಚಿಸಿದರು. ಇದೇ ವೇಳೆ ಕೋರ್ಟ್ ಹಾಲ್‌ನಲ್ಲಿ ಕಿಕ್ಕೇರಿ ಕೃಷ್ಣ ಮೂರ್ತಿ ಹಾಜರಿದ್ದನ್ನು ತಿಳಿದು, ಅವರಿಂದಲೇ ಪೀಠವು ಹೆಚ್ಚಿನ ಮಾಹಿತಿ ಕೇಳಿತು.

ಆಗ ಕಿಕ್ಕೇರಿ ಅವರು ಕುವೆಂಪು ವಾಸ್ತವವಾಗಿ ಸಿನಿಮಾಕ್ಕೆ ನಾಡಗೀತೆಯ ಸಾಲು ಬಳಸಲು ಅನುಮತಿ ನೀಡಿದ್ದರು. ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಅವರು ಕಲ್ಯಾಣಿ ರಾಗದಲ್ಲಿ ಸಂಗೀತ ಸಂಯೋಜಿಸಿದ್ದಾರೆ. ಅಶ್ವತ್ಥ್ ಅವರು ಉದಯ ರವಿಚಂದ್ರಿಕೆ ರಾಗ ಮತ್ತು ಅನಂತಸ್ವಾಮಿ ಅವರು ಮಾಯಾ ಮಾಳವ ಗೌಳ ಸಂಗೀತದಲ್ಲಿ ರಾಗ ಸಂಯೋಜಿಸಿದ್ದಾರೆ. ಇದಲ್ಲದೆ, ಇನ್ನು ಹಲವು ರಾಗಗಳಲ್ಲಿ ನಾಡಗೀತೆಯನ್ನು ಹಾಡಬಹುದಾಗಿದೆ ಎಂದರು.

ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ರಾಗಗಳ ಹೆಸರು ಹೇಳಿದರೆ ಸಾಕಾಗುವುದಿಲ್ಲ. ಹಾಡಿನ ಸೌಂದರ್ಯ ಹಾಗೂ ಪ್ರಾಮುಖ್ಯತೆ, ವಿವಿಧ ರಾಗಗಳಲ್ಲಿನ ವ್ಯತ್ಯಾಸವನ್ನು ಪ್ರಸ್ತುತ ಪಡಿಸುವುದು ಉತ್ತಮ. ವಿವಿಧ ರಾಗಗದಲ್ಲಿ ಹಾಡಲು ಸಾಧ್ಯವಿದೆ ಎಂದಾದರೆ ನೀವು ಹಾಡಿ ತೋರಿಸಬಹುದೇ? ಎಂದು ಕಿಕ್ಕೇರಿ ಅವರನ್ನು ಪ್ರಶ್ನಿಸಿದರು.

ಆಗ ಕಿಕ್ಕೇರಿ ಅವರು ಉದಯ ರವಿಚಂದ್ರಿಕೆ, ಜಂಜೂಟಿ, ಹಿಂಧೋಳ, ಕಲ್ಯಾಣಿ ಮತ್ತು ಮಾಯಾ ಮಾಳವ ಗೌಳ ರಾಗದಲ್ಲಿ ನಾಡಗೀತೆಯ ಸಾಲು ಹಾಡಿದರು.

Also Read
ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯ ನಾಡಗೀತೆಗೆ ಆಕ್ಷೇಪ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಅಲ್ಲದೆ, ಅನಂತಸ್ವಾಮಿ ಅವರು ನಾಡಗೀತೆಯ ಕೇವಲ ಒಂದು ಪಲ್ಲವಿ ಮತ್ತು ಎರಡು ಚರಣಗಳಿಗೆ ಮಾತ್ರ ರಾಗ ಸಂಯೋಜಿಸಿದ್ದಾರೆ. ಒಂದು ವೇಳೆ ಅನಂತ ಸ್ವಾಮಿಯವರೇ ಸಂಯೋಜಿಸಿದ ಧಾಟಿಯಲ್ಲೇ ಹಾಡುವುದಾದರೆ, ಅವರು ಪೂರ್ಣ ಪ್ರಮಾಣದಲ್ಲಿ ಸಂಯೋಜಿಸಿದ ಧಾಟಿಯನ್ನು ನಮ್ಮ ಮುಂದೆ ಸರ್ಕಾರ ಪ್ರಸ್ತುತಪಡಿಸಲಿ. ಆಗ ನಾವು ಒಪ್ಪುತ್ತೇವೆ. ಎರಡು ಚರಣಗಳನ್ನು ಸಂಯೋಜಿಸಿರುವಾಗ ಪೂರ್ತಿ ಹಾಡನ್ನು ಅದೇ ಧಾಟಿಯಲ್ಲಿ ಹಾಡುವುದನ್ನು ಹೇಗೆ ಕಡ್ಡಾಯ ಮಾಡಲಾಗುತ್ತದೆ. ಇನ್ನೂ ಸಿ ಅಶ್ವತ್ಥ್ ಅವರು, ನಾಡಗೀತೆಯ ಎಲ್ಲಾ ಚರಣಗಳಿಗೂ ರಾಗ ಸಂಯೋಜಿಸಿದ್ದಾರೆ. ಹೀಗಾಗಿ, ಅದೇ ರಾಗದಲ್ಲಿ ನಾಡಗೀತೆ ಹಾಡುವುದು ಸಮಂಜಸ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು.

ವಿವಿಧ ರಾಗದಲ್ಲಿ ನಾಡಗೀತೆಯನ್ನು ಕೇಳಿದ ನ್ಯಾಯಮೂರ್ತಿಗಳು, ಸುಗಮ ಸಂಗೀತ ವಿದ್ವಾಂಸರಾಗಿರುವ ಕಿಕ್ಕೇರಿ ಅವರು ಪ್ರಕರಣವನ್ನು ಪರಿಗಣಿಸಲು ಯೋಗ್ಯವಾದ ಕಾರಣಗಳನ್ನು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅವರು ನಾಡಗೀತೆಯ ಸಾಲುಗಳನ್ನು ಶಾಸ್ತ್ರೀಯತೆಯೊಂದಿಗೆ ಮಧುರವಾಗಿ ಹಾಡಿದ್ದಾರೆ. ಜೊತೆಗೆ, ಪ್ರಕರಣದ ಕುರಿತು ಮೆರಿಟ್ ಮೇಲೆ ಖುದ್ದು ವಾದ ಮಂಡಿಸಿದ್ದಾರೆ. ಹೀಗಾಗಿ, ಈ ಕುರಿತು ಸರ್ಕಾರಿ ವಕೀಲರು ತಮ್ಮ ಪ್ರತಿಕ್ರಿಯೆ ತಿಳಿಸಬೇಕು ಎಂದು ಸೂಚಿಸಿದರು.

Related Stories

No stories found.
Kannada Bar & Bench
kannada.barandbench.com