ಪೊಲೀಸರ ವಿರುದ್ಧ ನ್ಯಾಯಾಲಯಗಳು ನೀಡುವ ಕಠಿಣ ಹೇಳಿಕೆಗಳಿಂದ ಅವರ ಕೆಲಸದ ಮೇಲೆ ಪರಿಣಾಮ: ದೆಹಲಿ ಹೈಕೋರ್ಟ್ ಎಚ್ಚರಿಕೆ

ಮಾದಕ ದ್ರವ್ಯ ಪ್ರಕರಣದ ತನಿಖೆ ನಡೆಸಿದ್ದ ಈಶಾನ್ಯ ದೆಹಲಿ ವಲಯದ ಡಿಸಿಪಿ ವಿರುದ್ಧ ವಿಚಾರಣಾ ನ್ಯಾಯಾಲಯ ಮಾಡಿದ್ದ ಟೀಕೆಗಳನ್ನು ಪ್ರಸ್ತಾಪಿಸಿ ನ್ಯಾ. ಸ್ವರಣಾ ಕಾಂತ ಶರ್ಮಾ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
Courtroom
Courtroom

ಪೊಲೀಸ್ ಅಧಿಕಾರಿಗಳು ಅಥವಾ ಅಧಿಕಾರಿಗಳ ವಿರುದ್ಧ ಕಠಿಣ ಹೇಳಿಕೆ ನೀಡುವಾಗ ಇಲ್ಲವೇ ಶಿಸ್ತುಕ್ರಮ ಕೈಗೊಳ್ಳುವಾಗ ನ್ಯಾಯಾಂಗ ಅಧಿಕಾರಿಗಳು ಸ್ವತಃ ಸಂಯಮದಿಂದ ವರ್ತಿಸಬೇಕಿದೆ. ಏಕೆಂದರೆ ಅದು ಅವರ ಕೆಲಸದ ಮೇಲೆ ಪರಿಣಾಮ ಬೀರಬಹುದು ಎಂದು ದೆಹಲಿ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ [ಸಂಜಯ್‌ ಕುಮಾರ್‌ ಸೇನ್‌ ಮತ್ತು ದೆಹಲಿ ರಾಜಧಾನಿ ಪ್ರದೇಶಾಡಳಿತ ನಡುವಣ ಪ್ರಕರಣ].

ವಿಚಾರಣೆಗಳು ತ್ವರಿತವಾಗಿ, ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಯುವಂತೆ ನ್ಯಾಯಾಲಯಗಳಯ ನೋಡಿಕೊಳ್ಳಬೇಕು. ಆದರೆ ಹಾಗೆ ಮಾಡುವಾಗ ವಾಸ್ತವಾಂಶಗಳನ್ನು ಮತ್ತು ಕಾನೂನಿನ ಸ್ಥಾನಮಾನವನ್ನು ಅರಿಯಬೇಕು ಎಂದು ನ್ಯಾ. ಸ್ವರಣಾ ಕಾಂತ ಶರ್ಮಾ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ತನಿಖಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ  ವೃತ್ತಿಪರ ಸಾಮರ್ಥ್ಯ ಮತ್ತು ಅವರ ಕರ್ತವ್ಯದ ಬಗೆಗಿನ ಶ್ರದ್ಧೆಯ ಬಗ್ಗೆ ಕಠಿಣ ಭಾಷೆ ಬಳಸಲು ಮುಂದಾಗುವಾಗ ನ್ಯಾಯಾಂಗ ಅಧಿಕಾರಿಗಳು ಹೆಚ್ಚಿನ ಸಂಯಮ ಮತ್ತು ಎಚ್ಚರಿಕೆ ವಹಿಸಬೇಕು. ಏಕೆಂದರೆ ಅಂತಹ ಹೇಳಿಕೆ ವ್ಯಕ್ತಿಯ ಆತ್ಮವಿಶ್ವಾಸವನ್ನು ಕುಗ್ಗಿಸಬಹುದು. ಅವರ ಕೆಲಸ ಮತ್ತು ಖ್ಯಾತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ನ್ಯಾ., ಸ್ವರಣಾ ಅವರು ಮಾರ್ಚ್ 1ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

Also Read
ಪ್ರಧಾನಿ ಮೋದಿಗೆ ಅಪಮಾನ: ಕಾಂಗ್ರೆಸ್‌ ನಾಯಕ ಖೇರಾ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಹೂಡಿರುವ ಸೆಕ್ಷನ್‌ಗಳು ಇವು

ವಿಚಾರಣಾ ನ್ಯಾಯಾಲಯ ನೀಡಿದ್ದ ಕಠೋರ ಹೇಳಿಕೆಗಳನ್ನು ಒಂದು ವೇಳೆ ಹೈಕೋರ್ಟ್‌ ತೆಗೆದು ಹಾಕಿದರೂ ಅಧಿಕಾರಿಯೊಬ್ಬರಿಗೆ ಇದ್ದ ಕೀರ್ತಿಯನ್ನು ಮರಳಿ ನೀಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ತನಿಖೆಯಲ್ಲಿ ಅಥವಾ ಅಧಿಕಾರಿಗಳ ಕಡೆಯಿಂದ ಆದ ನ್ಯೂನತೆಗಳನ್ನು ಎತ್ತಿ ತೋರಿಸುವಾಗ ನ್ಯಾಯಾಂಗ ಸಂಯಮವನ್ನು ಪ್ರದರ್ಶಿಸುವ ಹೊಣೆಗಾರಿಕೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಪೀಠ ಕಿವಿಮಾತು ಹೇಳಿತು.

ಮಾದಕವಸ್ತು ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ  ತಮ್ಮ ವಿರುದ್ಧ ಮಾಡಿದ ಕೆಲವು ಅವಲೋಕನಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಈಶಾನ್ಯ ದೆಹಲಿಯ ಡಿಸಿಪಿ ಸಂಜಯ್ ಸೇನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡುವಾಗ ಹೈಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿತು.

“ಶಿಸ್ತುಕ್ರಮ ಜಾರಿಯಾದವರಿಗೆ ನ್ಯಾಯಾಂಗ ಪರಿಹಾರ ಲಭ್ಯವಿದ್ದರೂ ಅನೇಕ ಬಾರಿ ಶಿಸ್ತುಕ್ರಮಗಳು ಸಾರ್ವಜನಿಕರ ನೆನಪಿನಲ್ಲಿ ಮಾತ್ರವಲ್ಲದೆ ಶಿಸ್ತುಕ್ರಮ ಜಾರಿಯಾದವರ ಮನಸ್ಸಿನಲ್ಲಿಯೂ ಉಳಿದುಬಿಡುತ್ತವೆ ಎಂಬುದನ್ನು ನ್ಯಾಯಾಲಯಗಳು ಮರೆಯುವಂತಿಲ್ಲ. ಶಿಸ್ತುಕ್ರಮ ಅನುಭವಿಸಿದ ವ್ಯಕ್ತಿಗೆ ತೀರ್ಪಿನ ಬಳಿಕ ನ್ಯಾಯಾಂಗ ವಿನಾಯಿತಿ ದೊರೆಯಬಹುದಾದರೂ ಶಿಸ್ತುಕ್ರಮ ಎದುರಿಸಿದವರಿಗೆ ಸಾಮಾಜಿಕ ಕಳಂಕ ತಟ್ಟಿರುತ್ತದೆ” ಎಂದು ಪೀಠ ಹೇಳಿತು. ಈ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧ ವಿಚಾರಣಾ ನ್ಯಾಯಾಲಯ ಉಲ್ಲೇಖಿಸಿದ್ದ ಆಕ್ಷೇಪಗಳನ್ನು ಅದು ತೀರ್ಪಿನಿಂದ ತೆಗೆದುಹಾಕಿತಲ್ಲದೆ ಅರ್ಜಿದಾರರಿಗೆ ನೀಡಲಾಗಿದ್ದ ಜಾಮೀನುಯುಕ್ತ ವಾರೆಂಟನ್ನೂ ರದ್ದುಗೊಳಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Sanjay_Kumar_Sain_vs_State_of_NCT_of_Delhi.pdf
Preview

Related Stories

No stories found.
Kannada Bar & Bench
kannada.barandbench.com