ಪ್ರಧಾನಿ ಮೋದಿಗೆ ಅಪಮಾನ: ಕಾಂಗ್ರೆಸ್‌ ನಾಯಕ ಖೇರಾ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಹೂಡಿರುವ ಸೆಕ್ಷನ್‌ಗಳು ಇವು

ಪವನ್‌ ಖೇರಾ ವಿರುದ್ಧ ಮೂರು ಎಫ್‌ಐಆರ್‌ಗಳು ದಾಖಲಾಗಿವೆ. ಅವುಗಳಲ್ಲಿ ಎರಡು  ಲಖನೌ ಮತ್ತು ವಾರಾಣಸಿಯಲ್ಲಿ ದಾಖಲಾಗಿದ್ದರೆ ಮತ್ತೊಂದು ಅಸ್ಸಾಂ ರಾಜ್ಯದಲ್ಲಿ ದಾಖಲಾಗಿದೆ.
Pawan Khera
Pawan Khera facebook

ಮಾಧ್ಯಮಗೋಷ್ಠಿಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಮತ್ತು ಅಸ್ಸಾಂ ಪೊಲೀಸರು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಅದಾನಿ-ಹಿಂಡೆನ್‌ಬರ್ಗ್ ವಿವಾದದ ಬಗ್ಗೆ ಜಂಟಿ ಸಂಸದೀಯ ತನಿಖೆ ನಡೆಸುವಂತೆ ಖೇರಾ ಅವರು ಒತ್ತಾಯಿಸಿದ್ದರು. ಆಗ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಗೆ ಉದ್ದೇಶಪೂರ್ವಕವಾಗಿ ಅವಮಾನ ಉಂಟುಮಾಡುವಂತಹ ಮಾತುಗಳನ್ನಾಡಿದ ಆರೋಪ ಅವರ ವಿರುದ್ಧ ಕೇಳಿಬಂದಿತ್ತು.

ಪತ್ರಿಕಾಗೋಷ್ಠಿಯ ವೇಳೆ ಖೇರಾ ಅವರು, "(ಮಾಜಿ ಪ್ರಧಾನಿ) ನರಸಿಂಹರಾವ್ ಅವರು ಜೆಪಿಸಿ (ಜಂಟಿ ಸಂಸದೀಯ ಸಮಿತಿ) ರಚಿಸುವುದಾದರೆ, ಅಟಲ್ ಬಿಹಾರಿ ವಾಜಪೇಯಿ ಅವರು ಜೆಪಿಸಿ ರಚನೆ ಮಾಡುವುದಾದರೆ, ನರೇಂದ್ರ ಗೌತಮ್ ದಾಸ್... ಕ್ಷಮಿಸಿ ದಾಮೋದರ ದಾಸ್ ಮೋದಿ ಅವರಿಗೆ ಜೆಪಿಸಿ ರಚಿಸಲು ಏನು ಸಮಸ್ಯೆ " ಎಂದು ಕೇಳಿದ್ದರು.

ಖೇರಾ ಅವರು ಉದ್ದೇಶಪೂರ್ವಕವಾಗಿ ಹೆಸರನ್ನು ತಿರುಚಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಖೇರಾ ಅವರ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಾಗ ಅವರು ತಮ್ಮ ಸಹೋದ್ಯೋಗಿಯೊಬ್ಬರ ಹೆಸರನ್ನು ಬಾಯ್ತಪ್ಪಿ ಹೇಳಿದ್ದಾಗಿ ತಿಳಿಸಿದ್ದರು. ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿ ದೆಹಲಿಯಿಂದ ಕರೆದೊಯ್ಯುವ ವೇಳೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಮಧ್ಯಂತರ ಜಾಮೀನು ನೀಡಿತ್ತು.

Also Read
ಪ್ರಧಾನಿ ಮೋದಿ ಅವಮಾನಿಸಿದ ಪ್ರಕರಣ: ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು

ಪವನ್‌ ಖೇರಾ ವಿರುದ್ಧ ಪ್ರಸ್ತುತ ಮೂರು ಎಫ್‌ಐಆರ್‌ಗಳು ದಾಖಲಾಗಿದ್ದು. ಅವುಗಳಲ್ಲಿ ಎರಡು ಉತ್ತರ ಪ್ರದೇಶದ ಲಖನೌ ಮತ್ತು ವಾರಾಣಸಿಯಲ್ಲಿ ದಾಖಲಾಗಿದ್ದರೆ ಮತ್ತೊಂದು ಅಸ್ಸಾಂ ರಾಜ್ಯದಲ್ಲಿ ದಾಖಲಾಗಿದೆ. ಖೇರಾ ವಿರುದ್ಧ ದಾಖಲ

ಐಪಿಸಿ ಸೆಕ್ಷನ್‌ 153ಎ: ವಿವಿಧ ಗುಂಪುಗಳ ನಡುವೆ ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದಲ್ಲಿ ದ್ವೇಷ ಉಂಟು ಮಾಡುವ ಮತ್ತು ಸೌಹಾರ್ದತೆಗೆ ಧಕ್ಕೆ ತರುವಂತಹ ಕೃತ್ಯಗಳಿಗೆ ಈ ಸೆಕ್ಷನ್‌ನಡಿ ಶಿಕ್ಷೆ ವಿಧಿಸಲಾಗುತ್ತದೆ.

ಐಪಿಸಿ ಸೆಕ್ಷನ್ 295ಎ: ಇದು ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದನ್ನು ಅಪರಾಧೀಕರಿಸುತ್ತದೆ.

“ಯಾರೇ ವ್ಯಕ್ತಿಯು, ಭಾರತದ ಯಾವುದೇ ನಾಗರಿಕ ವರ್ಗದ ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶದಿಂದ ಆಘಾತ ಉಂಟುಮಾಡುವ ಸಲುವಾಗಿ ಮೌಖಿಕ ಅಥವಾ ಲಿಖಿತ ಶಬ್ಧಗಳಿಂದ ಅಥವಾ ಚಿಹ್ನೆಗಳಿಂದ ಅಥವಾ ದೃಶ್ಯ ನಿರೂಪಣೆಗಳಿಂದ ಅಥವಾ ಅನ್ಯಥಾ ಆ ವರ್ಗದ ಧರ್ಮಕ್ಕೆ ಅಥವಾ ಧಾರ್ಮಿಕ ನಂಬಿಕೆಗಳಿಗೆ ಅಪಮಾನ ಮಾಡಿದರೆ ಅಥವಾ ಅಪಮಾನ ಮಾಡಲು ಪ್ರಯತ್ನಿಸಿದರೆ, ಅವನಿಗೆ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ ಎನ್ನುತ್ತದೆ ಈ ನಿಬಂಧನೆ.

ಐಪಿಸಿ ಸೆಕ್ಷನ್ 500: ಒಬ್ಬ ವ್ಯಕ್ತಿಯ ಮಾನಹಾನಿಯುಂಟು ಮಾಡುವ ವ್ಯಕ್ತಿಗೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಸಾದಾ ಸೆರೆವಾಸ ಅಥವಾ ಜುಲ್ಮಾನೆ ಇಲ್ಲವೇ ಎರಡನ್ನೂ ವಿಧಿಸಬಹುದು ಎನ್ನುತ್ತದೆ ಈ ನಿಯಮ.

ಐಪಿಸಿ 504: ಶಾಂತಿಯನ್ನು ಭಂಗಗೊಳಿಸುವ ಸಲುವಾಗಿ ಮಾಡಲಾದ ಉದ್ದೇಶಪೂರ್ವಕ ಅವಮಾನ ಈ ನಿಯಮದ ಪ್ರಕಾರ ಅಪರಾಧವಾಗುತ್ತದೆ.

“ಯಾವುದೇ ವ್ಯಕ್ತಿಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಿ ಆ ಮೂಲಕ ಆ ವ್ಯಕ್ತಿಯನ್ನು ಕೆರಳಿಸಿ ಹಾಗೆ ಕೆರಳಿಸುವಿಕೆಯಿಂದ ಸಾರ್ವಜನಿಕ ಶಾಂತಿ ಭಂಗವಾಗುವ ಸಾಧ್ಯತೆ ಇದೆ ಎಂದು ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಆ ವ್ಯಕ್ತಿಯನ್ನು ಅವಮಾನಿಸಿದರೆ ಅಂತಹವರು ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ಕಾರಾಗೃಹವಾಸ ಅಥವಾ ದಂಡ ಇಲ್ಲವೇ ಅವೆರಡರಿಂದಲೂ ದಂಡಿತನಾಗಬೇಕು” ಎಂದು ಅದು ವಿವರಿಸುತ್ತದೆ.

ಐಪಿಸಿ ಸೆಕ್ಷನ್‌ 505: ಸಾರ್ವಜನಿಕ ತೊಂದರೆಗೆ ಕಾರಣವಾಗುವಂತಹ ಹೇಳಿಕೆ ನೀಡುವುದು ಅಪರಾಧ ಎನ್ನುತ್ತದೆ ಈ ನಿಯಮ.

ಐಪಿಸಿ ಸೆಕ್ಷನ್ 505 (2): ಇದು ಸೆಕ್ಷನ್‌ 505 ರ ಭಾಗವಾಗಿದ್ದು ನಿರ್ದಿಷ್ಟವಾಗಿ ವರ್ಗಗಳ ನಡುವೆ ವೈರತ್ವ, ದ್ವೇಷ ಅಥವಾ ದುರುದ್ದೇಶಕ್ಕೆ ಪ್ರಚೋದನೆ ನೀಡುವಂತಹ ಹೇಳಿಕೆಗಳನ್ನು ಅಪರಾಧೀಕರಿಸುತ್ತದೆ.

“ಯಾರೇ ವ್ಯಕ್ತಿ ಬೇರೆ ಬೇರೆ ಧರ್ಮ, ಜನಾಂಗ, ಭಾಷೆ ಅಥವಾ ಪ್ರಾದೇಶಿಕ ಗುಂಪು ಅಥವಾ ಜಾತಿಗಳು ಇಲ್ಲವೇ ಜನಸಮುದಾಯಗಳ ನಡುವೆ ಧಾರ್ಮಿಕ, ಜನಾಂಗೀಯ, ಜನ್ಮ ಸ್ಥಳದ, ವಾಸಸ್ಥಳದ, ಭಾಷೆಯ, ಜಾತಿಯ ಅಥವಾ ಸಮುದಾಯದ ಆಧಾರದ ಮೇಲೆ ಅಥವಾ ಯಾವುದೇ ಇತರ ಬಗೆಯ ಆಧಾರದ ಮೇಲೆ ವೈರ, ದ್ವೇಷ ಅಥವಾ ವೈಮನಸ್ಯದ ಭಾವನೆಗಳನ್ನು ಉಂಟುಮಾಡಿದರೆ ಅಥವಾ ಬೆಳೆಸಿದರೆ ಅಥವಾ ಉಂಟುಮಾಡುವ ಅಥವಾ ಬೆಳೆಸುವ ಸಂಭವವಿರುವ ವದಂತಿಯನ್ನು ಅಥವಾ ಅಪಾಯದ ಭೀತಿಯನ್ನು ಹುಟ್ಟಿಸುವ ಸುದ್ದಿಯನ್ನು ಒಳಗೊಂಡ ಯಾವುದೇ ಹೇಳಿಕೆಯನ್ನು ಕೊಟ್ಟರೆ ಅಥವಾ ವರದಿಯನ್ನು ಪ್ರಕಟಿಸಿದರೆ ಅಥವಾ ಪ್ರಸಾರ ಮಾಡಿದರೆ ಆ ವ್ಯಕ್ತಿಗೆ  ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ಜುಲ್ಮಾನೆ ಇಲ್ಲವೇ ಇವೆರಡನ್ನೂ ವಿಧಿಸಲಾಗುತ್ತದೆ” ಎನ್ನುತ್ತದೆ.

Related Stories

No stories found.
Kannada Bar & Bench
kannada.barandbench.com