
ಎಲೆಕ್ಟ್ರಿಕ್ ವಾಹನ ಬ್ಯಾಟರಿ ಸೆಲ್‌ಗಳಿಗೆ 'ಭಾರತ್ ಸೆಲ್' ಎಂಬ ವಾಣಿಜ್ಯ ಚಿಹ್ನೆ ಬಳಸುವ ಸಂಬಂಧ ಲಿಥಿಯಂ-ಅಯಾನ್ ಬ್ಯಾಟರಿ ತಯಾರಕ ಕುಶ್ಮಾಂಡ ಪವರ್ ಲಿಮಿಟೆಡ್ (ಕೆಪಿಎಲ್) ಮತ್ತು ಓಲಾ ಎಲೆಕ್ಟ್ರಿಕ್ ನಡುವಿನ ವಿವಾದವನ್ನು ದೆಹಲಿ ಹೈಕೋರ್ಟ್ ಗುರುವಾರ ಮಧ್ಯಸ್ಥಿಕೆಗೆ ವಹಿಸಿದೆ.
ಪ್ರಕರಣವು ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಅವರ ಮುಂದೆ ಬಂದಾಗ, ಅವರು ದೆಹಲಿ ಹೈಕೋರ್ಟ್‌ನ ಮಧ್ಯಸ್ಥಿಕೆ ಮತ್ತು ಸಂಧಾನ ಕೇಂದ್ರದ ಆಶ್ರಯದಲ್ಲಿ ಮಧ್ಯಸ್ಥಿಕೆಯ ಮೂಲಕ ಸೌಹಾರ್ದಯುತವಾಗಿ ವ್ಯಾಜ್ಯವನ್ನು ಪರಿಹರಿಸಿಕೊಳ್ಳುವಂತೆ ಕಕ್ಷಿದಾರರಿಗೆ ನಿರ್ದೇಶನ ನೀಡಿದರು. ಪ್ರಕರಣ ಆಗಸ್ಟ್‌ನಲ್ಲಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿದೆ.
ತಾನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 4680-ಫಾರ್ಮ್ಯಾಟ್ ಬ್ಯಾಟರಿಯನ್ನು "ಭಾರತ್ ಸೆಲ್" ಎಂದು ಓಲಾ ಎಲೆಕ್ಟ್ರಿಕ್ ಬ್ರ್ಯಾಂಡಿಂಗ್ ಮಾಡುವುದು ವಾಣಿಜ್ಯ ಚಿಹ್ನೆ ಉಲ್ಲಂಘನೆಯಾಗಿದೆ ಎಂದು ಭಾರತ್ ಸೆಲ್ ಬ್ರಾಂಡ್ ಅಡಿಯಲ್ಲಿ ಪ್ಯಾಕ್ ಮಾಡುವ ಕುಶ್ಮಾಂಡ ಪವರ್ ದೂರಿದೆ.
ಓಲಾ ಎಲೆಕ್ಟ್ರಿಕ್‌ನ ಭಾರತ್ ಸೆಲ್ ದೇಶೀಯವಾಗಿ ಅಭಿವೃದ್ಧಿಪಡಿಸಲಾದ 4680-ಫಾರ್ಮ್ಯಾಟ್ ಲಿಥಿಯಂ-ಅಯಾನ್ ಬ್ಯಾಟರಿ ಸೆಲ್ ಆಗಿದ್ದು, ಇದನ್ನು ಆಗಸ್ಟ್ 2024ರಲ್ಲಿ ಅನಾವರಣಗೊಳಿಸಲಾಗಿತ್ತು.
ಗಮನಾರ್ಹ ಅಂಶವೆಂದರೆ, ಯಾವುದೇ ಕಕ್ಷಿದಾರರು ಪ್ರಸ್ತುತ "ಭಾರತ್ ಸೆಲ್" ಗಾಗಿ ನೋಂದಾಯಿತ ವಾಣಿಜ್ಯ ಚಿಹ್ನೆ ಹೊಂದಿಲ್ಲ.
ಪ್ರಾಥಮಿಕ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಬ್ಯಾನರ್ಜಿ ಅವರು, ವಾಣಿಜ್ಯ ಚಿಹ್ನೆ ಹಕ್ಕುಗಳು ಇನ್ನೂ ಮೂರ್ತರೂಪಕ್ಕೆ ಬಾರದ ಕಾರಣ, ಪ್ರಕರಣವನ್ನು ಮಧ್ಯಸ್ಥಿಕೆಗೆ ವಹಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.