'ಮ್ಯಾಕ್ಸ್ ಮುಲ್ಲರ್' ವಾಣಿಜ್ಯ ಚಿಹ್ನೆ ಸಮರ: ಜರ್ಮನ್‌ ಸಂಸ್ಥೆಗೆ ದೆಹಲಿ ಹೈಕೋರ್ಟ್‌ ಮಧ್ಯಂತರ ಪರಿಹಾರ

ಗೊಯತೆ ಇನ್ಸ್ಟಿಟ್ಯೂಟ್, 1957ರಲ್ಲಿ ಕೋಲ್ಕತ್ತಾದಲ್ಲಿ ಮ್ಯಾಕ್ಸ್ ಮುಲ್ಲರ್ ಭವನ್ ಹೆಸರಿನಲ್ಲಿ ತನ್ನ ಮೊದಲ ಕೇಂದ್ರ ಸ್ಥಾಪಿಸಿತು. ಇಂದು, ಬೆಂಗಳೂರು ಸೇರಿದಂತೆ ದೇಶಾದ್ಯಂತ ಆರು ಕೇಂದ್ರಗಳು ಅದೇ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿವೆ.
Delhi High Court
Delhi High Court
Published on

ಜರ್ಮನ್ ಭಾಷಾ ಕೋರ್ಸ್‌ಗಳನ್ನು ನೀಡುವಾಗ "ಮ್ಯಾಕ್ಸ್ ಮುಲ್ಲರ್" ಹೆಸರನ್ನು ಬಳಸಿದ್ದಕ್ಕಾಗಿ ಭಾರತೀಯ ಸಂಸ್ಥೆಯೊಂದರ ವಿರುದ್ಧ ಹೂಡಿದ್ದ ವಾಣಿಜ್ಯ ಚಿಹ್ನೆ ಪ್ರಕರಣದಲ್ಲಿ ಜರ್ಮನ್ ಸಾಂಸ್ಕೃತಿಕ ಸಂಸ್ಥೆ ಗೊಯತೆ-ಇನ್ಸ್ಟಿಟ್ಯೂಟ್‌ಗೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಮಧ್ಯಂತರ ಪರಿಹಾರ ನೀಡಿದೆ.

ಗೊಯತೆ-ಇನ್ಸ್ಟಿಟ್ಯೂಟ್ ಜರ್ಮನ್ ಮೂಲದ ಸಂಸ್ಥೆಯಾಗಿದ್ದು, ವಿವಿಧ ದೇಶಗಳಲ್ಲಿ ಜರ್ಮನ್ ಭಾಷಾ ಕೋರ್ಸ್‌ಗಳನ್ನು ಕಲಿಸುತ್ತಿದೆ. ಭಾರತದಲ್ಲಿ, ಈ ಸೇವೆಗಳನ್ನು ಮ್ಯಾಕ್ಸ್ ಮುಲ್ಲರ್ ಭವನ್ ಎಂಬ ಕೇಂದ್ರಗಳ ಮೂಲಕ ನೀಡಲಾಗುತ್ತಿದೆ.

Also Read
ಅಲ್ಲಮಪ್ರಭು, ವಿಠ್ಠಲ ದೇವಸ್ಥಾನಗಳನ್ನು ಪಾರಂಪರಿಕ ಸ್ಮಾರಕವೆಂದು ಘೋಷಿಸಲು ಕೋರಿಕೆ: ಕೇಂದ್ರ, ರಾಜ್ಯಕ್ಕೆ ನೋಟಿಸ್‌

ಮೇ 6 ರಂದು, ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರು, ಖಾಸಗಿ ಭಾರತೀಯ ಸಂಸ್ಥೆಯು ಜರ್ಮನ್ ಭಾಷಾ ತರಬೇತಿ ಸೇವೆಗಳಿಗೆ "ಮ್ಯಾಕ್ಸ್ ಮುಲ್ಲರ್" ಮತ್ತು "ಮ್ಯಾಕ್ಸ್ ಮುಲ್ಲರ್ ಇನ್ಸ್ಟಿಟ್ಯೂಟ್" ಅಥವಾ ಅಂತಹುದೇ ಹೆಸರುಗಳನ್ನು ಬಳಸುವುದನ್ನು ತಡೆಯುವ ಮಧ್ಯಂತರ ಆದೇಶ  ಹೊರಡಿಸಿದರು.

ಗೊಯತೆ ಇನ್ಸ್ಟಿಟ್ಯೂಟ್ ಭಾರತದಾದ್ಯಂತ ಜರ್ಮನ್ ಭಾಷಾ ಬೋಧನಾ ಸೇವೆಗಳನ್ನು ಪ್ರತ್ಯೇಕಿಸುವ "ಮ್ಯಾಕ್ಸ್ ಮುಲ್ಲರ್ ಭವನ" ಎಂಬ ಬ್ರಾಂಡ್‌ನ ಪೂರ್ವ ಬಳಕೆ, ಸದ್ಭಾವನೆ ಮತ್ತು ಸಾರ್ವಜನಿಕ ಮನ್ನಣೆಯನ್ನು ಸ್ಪಷ್ಟವಾಗಿ ಸಾಬೀತುಪಡಿಸಿದೆ ಎಂದು ನ್ಯಾಯಾಲಯ ಪ್ರಾಥಮಿಕವಾಗಿ ತೀರ್ಪು ನೀಡಿತು.

ಮೇಲ್ನೋಟಕ್ಕೆ, ಪ್ರತಿವಾದಿಗಳಾದ ಅಭಿಷೇಕ್ ಯಾದವ್ ಮತ್ತಿತರರು, "ಮ್ಯಾಕ್ಸ್ ಮುಲ್ಲರ್ ಇನ್ಸ್ಟಿಟ್ಯೂಟ್" ಚಿಹ್ನೆ ಬಳಸಿ ಗೊಯತೆ-ಇನ್ಸ್ಟಿಟ್ಯೂಟ್ ಅಥವಾ ಮ್ಯಾಕ್ಸ್ ಮುಲ್ಲರ್ ಭವನವೇ ಸೇವೆ ಒದಗಿಸುತ್ತಿರುವಂತೆ ದುರುದ್ದೇಶಪೂರ್ವಕವಾಗಿ ಬಳಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.  

Also Read
ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ಆಯೋಜನೆಗೆ ಹೈಕೋರ್ಟ್‌ ಅಸ್ತು

ಜರ್ಮನಿಯ ಫೆಡರಲ್ ರಿಪಬ್ಲಿಕ್‌ನ ಒಂದು ಘಟಕವಾದ ಗೊಯತೆ-ಇನ್ಸ್ಟಿಟ್ಯೂಟ್, 1957 ರಲ್ಲಿ ಕೋಲ್ಕತ್ತಾದಲ್ಲಿ ಮ್ಯಾಕ್ಸ್ ಮುಲ್ಲರ್ ಭವನ್ ಎಂಬ ಹೆಸರಿನಲ್ಲಿ ತನ್ನ ಮೊದಲ ಕೇಂದ್ರವನ್ನು ಸ್ಥಾಪಿಸುವ ಮೂಲಕ ಭಾರತದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇಂದು, ಬೆಂಗಳೂರು ಸೇರಿ ಅಂತಹ ಆರು ಸಂಸ್ಥೆಗಳು ಭಾರತದಾದ್ಯಂತ ಅದೇ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿವೆ.

" 1957 ರಿಂದ ಮ್ಯಾಕ್ಸ್ ಮುಲ್ಲರ್ ಭವನ್ ಬಳಕೆಯಲ್ಲಿತ್ತು ಎಂಬುದಕ್ಕೆ ವಾದಿ ಸಾಕಷ್ಟು ದಾಖಲೆಗಳನ್ನು ಸಲ್ಲಿಸಿದ್ದಾರೆ. ಆದರೆ ಪ್ರತಿವಾದಿಗಳು 2018 ರಲ್ಲಿಯಷ್ಟೇ ಈ ಚಿಹ್ನೆ ಅಳವಡಿಸಿಕೊಂಡಿದ್ದಾರೆ ಎಂದು ನ್ಯಾಯಾಲಯ ತಿಳಿಸಿತು. ಪ್ರಕರಣದ ಮುಂದಿನ ವಿಚಾರಣೆ ನಾಳೆ (ಮೇ 13 ರಂದು) ರೋಸ್ಟರ್‌ ಪೀಠದೆದುರು ನಡೆಯಲಿದೆ.

Kannada Bar & Bench
kannada.barandbench.com