ಆ್ಯಪ್ ಮೂಲಕ ನೀಡಲಾಗುತ್ತಿರುವ ಓಲಾ ಮತ್ತು ಉಬರ್ ಆಟೋರಿಕ್ಷಾ ಸೇವೆ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಸಲ್ಲಿಸಿರುವ ಮಧ್ಯಪ್ರವೇಶ ಮನವಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಬುಧವಾರ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದ್ದು, ಮಧ್ಯಂತರ ತಡೆಯಾಜ್ಞೆ ಮುಂದುವರಿಸಿದೆ.
ಓಲಾ ಮತ್ತು ಉಬರ್ ಇನ್ನು ಮುಂದೆ ತಮ್ಮ ಆ್ಯಪ್ ಮೂಲಕ ಆಟೋರಿಕ್ಷಾ ಸೇವೆ ನೀಡುವಂತಿಲ್ಲ. ತಕ್ಷಣ ಈ ಸೇವೆ ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸರ್ಕಾರ ಈಚೆಗೆ ನಿರ್ದೇಶಿಸಿರುವ ಆಕ್ಷೇಪಾರ್ಹ ಆದೇಶ ವಜಾ ಮಾಡುವಂತೆ ಕೋರಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ರೊಪ್ಪೆನ್ ಟ್ರಾನ್ಸ್‌ಪೊರ್ಟೇಷನ್ ಸರ್ವೀಸಸ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
“ದರ ಹೆಚ್ಚಳ ಕೋರಿ ಓಲಾ ಮತ್ತು ಉಬರ್ ಸಲ್ಲಿಸಿರುವ ಮಧ್ಯಪ್ರವೇಶ ಮನವಿಯಲ್ಲಿ ಕಚೇರಿ ಆಕ್ಷೇಪಣೆಗಳನ್ನು ಅರ್ಜಿದಾರರು ಸರಿಪಡಿಸಬೇಕು. ಸರ್ಕಾರದ ವಕೀಲರು ಸದರಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಇದಕ್ಕೆ ಅನುಮತಿಸಲಾಗಿದೆ” ಎಂದಿರುವ ಪೀಠವು ವಿಚಾರಣೆಯನ್ನು ನವೆಂಬರ್ 21ಕ್ಕೆ ಮುಂದೂಡಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಆದಿತ್ಯ ಸೋಂಧಿ ಹಾಗೂ ಸರ್ಕಾರದ ವಕೀಲರ ವಾದಗಳನ್ನು ಪೀಠವು ಅಲ್ಪಕಾಲ ಆಲಿಸಿತು. ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಸರ್ಕಾರದ ಪರ ವಕೀಲರು ಕೋರಿದರು.
ಆಗ ಪೀಠವು “ನೀವು ಆಕ್ಷೇಪಣೆ ಸಲ್ಲಿಸಿ, ಅರ್ಜಿದಾರರ ಪರ ವಕೀಲರು ಸೋಮವಾರ ವಾದ ಮಂಡಿಸಲಿ. ಮಂಗಳವಾರ ನೀವು ವಾದ ಮಂಡಿಸಬಹುದು” ಎಂದು ಹೇಳಿ ವಿಚಾರಣೆ ಮುಂದೂಡಿತು.