ಓಲಾ, ಉಬರ್ ಆಟೊ ಸೇವೆ: ನಿಯಮ ಏಕೆ ರೂಪಿಸಿಲ್ಲ ಎಂದು ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ
ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ ಕಂಪೆನಿಗಳು ಕಲ್ಪಿಸಿರುವ ಆಟೋರಿಕ್ಷಾ ಸೇವೆಗೆ ಸಂಬಂಧಿಸಿದಂತೆ ಇನ್ನೂ ನಿಯಮಗಳನ್ನು ಏಕೆ ರೂಪಿಸಿಲ್ಲ ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಬುಧವಾರ ಪ್ರಶ್ನಿಸಿತು.
ಆ್ಯಪ್ ಆಧರಿತ ಓಲಾ ಮತ್ತು ಉಬರ್ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸಬೇಕು ಎಂಬ ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ರೊಪ್ಪೆನ್ ಟ್ರಾನ್ಸ್‌ಪೋರ್ಟೇಶನ್ ಸರ್ವೀಸಸ್ ಅರ್ಜಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಆಟೊ ಟ್ಯಾಕ್ಸಿಗೆ ಪರವಾನಗಿ ಪಡೆಯದೇ ದರ ನಿಗದಿಪಡಿಸಲಾಗದು. ಈ ಸಂಬಂಧ ರಾಜ್ಯ ಸರ್ಕಾರವು ನಿಯಮಗಳನ್ನು ರೂಪಿಸಲಿದೆ. ಆನಂತರ ಪರವಾನಗಿ ಪಡೆದು ಸೇವೆ ನೀಡಬೇಕು. ಆಟೊ ಟ್ಯಾಕ್ಸಿ ಸೇವೆಗೆ ಓಲಾ ಮನವಿ ಸಲ್ಲಿಸಿದೆ. ಆದರೆ, ಉಬರ್ ಮನವಿಯನ್ನೂ ನೀಡಿಲ್ಲ” ಎಂದರು.
ಆಗ ಪೀಠವು “ಇನ್ನು ಏಕೆ ನಿಯಮ ರೂಪಿಸಿಲ್ಲ. ಶೇ. 5ರಷ್ಟು ಸೇವಾ ಶುಲ್ಕವನ್ನು ಯಾವ ಆಧಾರದಲ್ಲಿ ನಿಗದಿಪಡಿಸಲಾಗಿದೆ” ಎಂದು ಪ್ರಶ್ನಿಸಿತು. ಇದಕ್ಕೆ ಎಜಿ ಅವರು “ನಿಯಮ ರೂಪಿಸುವ ಪ್ರಕ್ರಿಯೆ ಪರಿಗಣನೆಯಲ್ಲಿದೆ. ಮೋಟಾರು ವಾಹನ ಕಾಯಿದೆ ಸೆಕ್ಷನ್ 167ರ ಅಡಿ ದರ ನಿಗದಿ ಮಾಡುವ ಹಕ್ಕು ರಾಜ್ಯ ಸರ್ಕಾರಕ್ಕೆ ಇದೆ. ಸಂಬಂಧಿತ ಎಲ್ಲರ ಜೊತೆ ಚರ್ಚಿಸಿ ದರ ನಿಗದಿಪಡಿಸಲಾಗಿದೆ” ಎಂದರು.
ಮುಂದುವರಿದು, ಎಜಿ ಅವರು “ನೀತಿ ರೂಪಿಸುವವರೆಗೆ ಕಾರ್ಯನಿರ್ವಹಿಸಲು ಓಲಾ, ಉಬರ್‌ಗೆ ಅವಕಾಶ ನೀಡಲಾಗದು. ಪರವಾನಗಿ ಕೋರಿ ಅರ್ಜಿ ಸಲ್ಲಿಸಲು ಯಾವುದೇ ನೀತಿ ಇಲ್ಲ. ಪರವಾನಗಿ ಪಡೆಯದೇ ಆಟೊ ಸೇವೆ ನೀಡಲಾಗದು. ಅನುಮತಿ ಇಲ್ಲದಿರುವುದು ಮತ್ತು ಪರವಾನಗಿಯೇ ಇಲ್ಲದಿರುವಾಗ ದರ ನಿಗದಿಪಡಿಸುವ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದು ಸಮರ್ಥಿಸಿದರು. ಸುದೀರ್ಘ ವಾದ ಆಲಿಸಿದ ಪೀಠವು ವಿಚಾರಣೆಯನ್ನು ಆಗಸ್ಟ್ 23ಕ್ಕೆ ಮುಂದೂಡಿದೆ.


