ಫುಟ್‌ಪಾತ್‌, ರಾಜಕಾಲುವೆಯಲ್ಲಿನ ಟ್ರಾನ್ಸ್‌ಫಾರ್ಮರ್‌ ಸ್ಥಳಾಂತರ: ಬೆಸ್ಕಾಂ ಕೋರಿಕೆಯಂತೆ ವಿಚಾರಣೆ ಮುಂದೂಡಿಕೆ

5,000 ಟ್ರಾನ್ಸ್‌ಫಾರ್ಮರ್‌ಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ 100 ಕೋಟಿ ರೂಪಾಯಿ ಟೆಂಡರ್‌ ಆಹ್ವಾನಿಸಿ, ಅದನ್ನು ಹಂಚಿಕೆ ಮಾಡಲಾಗಿದೆ. ಏಪ್ರಿಲ್‌ 1ರಿಂದ ಟ್ರಾನ್ಸ್‌ಫಾರ್ಮರ್‌ ಸ್ಥಳಾಂತರ ಕೆಲಸ ಆರಂಭವಾಗಿದೆ ಎಂದ ಬೆಸ್ಕಾಂ ವಕೀಲರು.
High Court of Karnataka
High Court of Karnataka
Published on

ಬೆಂಗಳೂರಿನ ಪಾದಚಾರಿ ಮಾರ್ಗ, ರಾಜಕಾಲುವೆ‌ ಮತ್ತು ಇತರೆ ಜನವಸತಿ ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಿಸುವುದಕ್ಕೆ ಸಂಬಂಧಿಸಿದಂತೆ ರಜಾಕಾಲದ ಬಳಿಕ ಸ್ಥಿತಿಗತಿ ವರದಿ ಸಲ್ಲಿಸಲಾಗುವುದು ಎಂಬ ಬೆಸ್ಕಾಂ ಕೋರಿಕೆಯನ್ನು ಸೋಮವಾರ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್‌ ವಿಚಾರಣೆಯನ್ನು ಜುಲೈ ಮೊದಲ ವಾರಕ್ಕೆ ಮುಂದೂಡಿತು.

ಪಾದಚಾರಿ ಮಾರ್ಗಗಳಲ್ಲಿ ಹಾಗೂ ರಾಜಕಾಲುವೆಗಳ ಅಂಚಿನಲ್ಲಿ ಅಳವಡಿಸಿರುವ ಅಪಾಯಕಾರಿ ಟ್ರಾನ್ಸ್‌ಫಾರ್ಮರ್‌ಗಳನ್ನು ತೆರವು ಮಾಡಲು ನಿರ್ದೇಶನ ಕೋರಿ ನಿವೃತ್ತ ವಿಂಗ್ ಕಮಾಂಡರ್ ಜಿ ಬಿ ಅತ್ರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಬೆಸ್ಕಾಂ ಪ್ರತಿನಿಧಿಸಿದ್ದ ವಕೀಲ ಶ್ರೀರಂಗ ಸುಬ್ಬಣ್ಣ ಅವರು “ಬೆಂಗಳೂರಿನ ಪಾದಚಾರಿ ಮಾರ್ಗ, ರಾಜಕಾಲುವೆ‌ ಮತ್ತು ಇತರೆ ಜನವಸತಿ ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ 8,659 ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಿಸಲು ಗುರುತಿಸಲಾಗಿದೆ. 3,000ಕ್ಕೂ ಹೆಚ್ಚು ಟ್ರಾನ್ಸ್‌ಫಾರ್ಮರ್‌ಗಳನ್ನು ಉನ್ನತೀಕರಿಸಿ, ಸ್ಥಳಾಂತರಿಸಲಾಗಿದೆ. 5,000 ಟ್ರಾನ್ಸ್‌ಫಾರ್ಮರ್‌ಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ ನೇತೃತ್ವದ ಜಂಟಿ ಸಮಿತಿಯು ಅಧ್ಯಯನ ನಡೆಸಿ, ಯೋಜನೆ ರೂಪಿಸಿದೆ. ಈ ಸಂಬಂಧ 100 ಕೋಟಿ ರೂಪಾಯಿ ಟೆಂಡರ್‌ ಆಹ್ವಾನಿಸಿ, ಅದನ್ನು ಹಂಚಿಕೆ ಮಾಡಲಾಗಿದೆ. ಏಪ್ರಿಲ್‌ 1ರಿಂದ ಟ್ರಾನ್ಸ್‌ಫಾರ್ಮರ್‌ ಸ್ಥಳಾಂತರ ಕೆಲಸ ಆರಂಭವಾಗಿದೆ. ಟ್ರಾನ್ಸ್‌ಫಾರ್ಮರ್‌ ಸ್ಥಳಾಂತರ ಕುರಿತು ಪ್ರಗತಿಯ ವರದಿಯನ್ನು ಸಲ್ಲಿಸಲಾಗುವುದು. ಹೀಗಾಗಿ, ರಜೆಯ ಬಳಿಮ ಪ್ರಕರಣವನ್ನು ಆಲಿಸಬೇಕು” ಎಂದು ಪೀಠವನ್ನು ಕೋರಿದರು.

Also Read
ಫುಟ್‌ಪಾತ್‌, ರಾಜಕಾಲುವೆಯಲ್ಲಿ 5,245 ಟ್ರಾನ್ಸ್‌ಫಾರ್ಮರ್‌: ಸ್ಥಳಾಂತರದ ಕ್ರಿಯಾಯೋಜನೆಗೆ ಬೆಸ್ಕಾಂಗೆ ಹೈಕೋರ್ಟ್‌ ಆದೇಶ

ಇದನ್ನು ಪುರಸ್ಕರಿಸಿದ ಪೀಠವು “ಏಪ್ರಿಲ್‌ ಒಂದರಿಂದ ಟ್ರಾನ್ಸ್‌ಫಾರ್ಮರ್‌ ಸ್ಥಳಾಂತರ ಕೆಲಸ ಆರಂಭವಾಗಿದೆ. ಟ್ರಾನ್ಸ್‌ಫಾರ್ಮರ್‌ಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಮುಂಗಾರು ಸೇರಿದಂತೆ ಒಂದೂವರೆ ವರ್ಷದ ಕಾಲಾವಧಿಯನ್ನು ಕರಾರಿನ ಪ್ರಕಾರ ಗುತ್ತಿಗೆದಾರರ ನೀಡಲಾಗಿದೆ. ಈ ಸಂಬಂಧ ಗುತ್ತಿಗೆದಾರರಿಗೆ ನೀಡಲಾಗಿರುವ ಲೆಟರ್‌ ಆಫ್‌ ಇಂಟೆಂಟ್‌ ಸಲ್ಲಿಸಲಾಗಿದೆ. ಟ್ರಾನ್ಸ್‌ಫಾರ್ಮರ್‌ಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಪ್ರಗತಿ ವರದಿಯನ್ನು ಸಲ್ಲಿಸಲಾಗುವುದು ಎಂಬ ಬೆಸ್ಕಾಂ ವಕೀಲ ವಾದವನ್ನು ದಾಖಲಿಸಿಕೊಳ್ಳಲಾಗಿದೆ” ಎಂದು ಆದೇಶದಲ್ಲಿ ಹೇಳಿರುವ ಪೀಠವು ಬೆಸ್ಕಾಂ ಕೋರಿಕೆಯಂತೆ ಜುಲೈ ಮೊದಲ ವಾರಕ್ಕೆ ವಿಚಾರಣೆ ಮುಂದೂಡಿತು.

ಕಳೆದ ವಿಚಾರಣೆಯಲ್ಲಿ ಪೀಠವು “ಬೆಸ್ಕಾಂ ಟ್ರಾನ್ಸ್‌ಫಾರ್ಮರ್‌ ಸ್ಥಳಾಂತರಿಸುವುದಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಸಲ್ಲಿಸಬೇಕು. ಇದರಲ್ಲಿ ಸ್ಥಳದ ಮಾಹಿತಿ ಮತ್ತು ಅವುಗಳನ್ನು ಸ್ಥಳಾಂತರಿಸಲು ಬೇಕಿರುವ ಸಮಯವನ್ನು ಉಲ್ಲೇಖಿಸಬೇಕು. ಇದನ್ನು ಕಾಲಾನುಕ್ರಮದಲ್ಲಿ ಮಾಡಬೇಕು. ಕ್ರಿಯಾ ಯೋಜನೆಯನ್ನು ಮುಂದಿನ ವಿಚಾರಣೆಯ ಒಳಗೆ ಸಲ್ಲಿಸಬೇಕು. ಮುಂದಿನ ವಿಚಾರಣೆಯ ಒಳಗೆ ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಿಸುವ ಕೆಲಸ ಆರಂಭವಾಗಬೇಕು” ಎಂದು ಆದೇಶಿಸಿತ್ತು.

Kannada Bar & Bench
kannada.barandbench.com