ಬೆಂಗಳೂರಿನ ಪಾದಚಾರಿ ಮಾರ್ಗ, ರಾಜಕಾಲುವೆ ಮತ್ತು ಇತರೆ ಜನವಸತಿ ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಿಸುವ ಸಂಬಂಧ ಕ್ರಿಯಾ ಯೋಜನೆ ಸಲ್ಲಿಸಬೇಕು. ಈ ಮಧ್ಯೆ, ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಿಸುವ ಕೆಲಸವನ್ನು ಆರಂಭಿಸಬೇಕು ಎಂದು ಗುರುವಾರ ಬೆಸ್ಕಾಂಗೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
ಪಾದಚಾರಿ ಮಾರ್ಗಗಳಲ್ಲಿ ಹಾಗೂ ರಾಜಕಾಲುವೆಗಳ ಅಂಚಿನಲ್ಲಿ ಅಳವಡಿಸಿರುವ ಅಪಾಯಕಾರಿ ಟ್ರಾನ್ಸ್‌ಫಾರ್ಮರ್‌ಗಳನ್ನು ತೆರವು ಮಾಡಲು ನಿರ್ದೇಶನ ಕೋರಿ ನಿವೃತ್ತ ವಿಂಗ್ ಕಮಾಂಡರ್ ಜಿ ಬಿ ಅತ್ರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.
“ಬೆಸ್ಕಾಂ ಮತ್ತು ಬಿಬಿಎಂಪಿ ಉನ್ನತ ಮಟ್ಟದ ಸಮಿತಿ ರಚಿಸಿದ್ದು ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರ ಮಾಡಲು ಮತ್ತು ಅವುಗಳನ್ನು ಪತ್ತೆ ಹಚ್ಚಲು ಹಾಗೂ ಯಾವೆಲ್ಲಾ ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಿಸಬೇಕಿದೆ ಎಂಬುದರ ಕುರಿತು ವರದಿ ಸಿದ್ಧಪಡಿಸಲಾಗಿದೆ. ಒಟ್ಟು 5,245 ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಿಸಬೇಕಿದ್ದು, ಅದಕ್ಕೆ ಹೆಚ್ಚಿನ ಸಮಯಬೇಕಿದೆ. ಈ ಸಂಬಂಧ ಎರಡು ಏಜೆನ್ಸಿಗಳನ್ನು ಗುರುತಿಸಲಾಗಿದ್ದು, ತಕ್ಷಣ ಕಾರ್ಯಾದೇಶ ನೀಡಲಾಗುವುದು” ಎಂದು ಬೆಸ್ಕಾಂ ವಕೀಲರು ತಿಳಿಸಿದ್ದಾರೆ ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.
ಮುಂದುವರಿದು, “ಬೆಸ್ಕಾಂ ಟ್ರಾನ್ಸ್‌ಫಾರ್ಮರ್ ಸ್ಥಳಾಂತರಿಸುವುದಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಸಲ್ಲಿಸಬೇಕು. ಇದರಲ್ಲಿ ಸ್ಥಳದ ಮಾಹಿತಿ ಮತ್ತು ಅವುಗಳನ್ನು ಸ್ಥಳಾಂತರಿಸಲು ಬೇಕಿರುವ ಸಮಯವನ್ನು ಉಲ್ಲೇಖಿಸಬೇಕು. ಇದನ್ನು ಕಾಲಾನುಕ್ರಮದಲ್ಲಿ ಮಾಡಬೇಕು. ಕ್ರಿಯಾ ಯೋಜನೆಯನ್ನು ಮುಂದಿನ ವಿಚಾರಣೆಯ ಒಳಗೆ ಸಲ್ಲಿಸಬೇಕು. ಮುಂದಿನ ವಿಚಾರಣೆಯ ಒಳಗೆ ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಿಸುವ ಕೆಲಸ ಆರಂಭವಾಗಬೇಕು” ಎಂದು ಆದೇಶಿಸಿದ್ದು, ವಿಚಾರಣೆಯನ್ನು ಫೆಬ್ರವರಿ 4ಕ್ಕೆ ಪೀಠವು ಮುಂದೂಡಿದೆ.
ಇದಕ್ಕೂ ಮುನ್ನ, ವಿಚಾರಣೆ ವೇಳೆ ಬೆಸ್ಕಾಂ ಪರ ವಕೀಲರನ್ನು ಪೀಠವು “ಟ್ರಾನ್ಸ್‌ಫಾರ್ಮರ್ ಗಳನ್ನು ತೆರವುಗೊಳಿಸಲಾಗಿದೆಯೇ” ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಬೆಸ್ಕಾಂ ವಕೀಲರು “ಈ ಸಂಬಂಧ ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸಿದ್ದೇವೆ. ಬೆಸ್ಕಾಂ ಹಾಗೂ ಬಿಬಿಎಂಪಿ ಅಧಿಕಾರಿಗಳ ಉನ್ನತ ಸಮಿತಿ ಸ್ಥಳಾಂತರಿಸಬೇಕಾದ ಟ್ರಾನ್ಸ್‌ಫಾರ್ಮರ್‌ಗಳನ್ನು ಗುರುತಿಸಿದೆ. ಅವುಗಳನ್ನು ಸ್ಥಳಾಂತರಿಸಲು ಏಜೆನ್ಸಿಗಳನ್ನು ಗುರುತಿಸಲಾಗಿದೆ. ಸದ್ಯದಲ್ಲೇ ಟೆಂಡರ್ ಪೂರ್ಣಗೊಳಿಸಿ ಕಾರ್ಯಾದೇಶ ನೀಡಲಾಗುವುದು” ಎಂದರು.
ಇದಕ್ಕೆ ಕೆರಳಿದ ಪೀಠವು “ನಿಮ್ಮ ಟೆಂಡರ್, ಕಾರ್ಯಾದೇಶ ವಿಚಾರಗಳು ನಮಗೆ ಬೇಕಿಲ್ಲ. ಟ್ರಾನ್ಸ್‌ಫಾರ್ಮರ್ ಗಳನ್ನು ತೆರವು ಮಾಡಲಾಗಿದೆಯೇ ಎಂಬುದಷ್ಟೇ ಮುಖ್ಯ. ಹೀಗಾಗಿ, ಎಷ್ಟು ದಿನದಲ್ಲಿ ಸ್ಥಳಾಂತರಿಸುತ್ತೀರಿ” ಎಂದು ಪ್ರಶ್ನಿಸಿತು.
ಬೆಸ್ಕಾ ಪರ ವಕೀಲರು “ಅಂದಾಜು ಒಂದು ವರ್ಷ ಬೇಕಾಗಬಹುದು” ಎಂದರು. ಇದಕ್ಕೆ ಕೆರಳಿದ ಪೀಠವು “ಮೊದಲಿಗೆ ಪಾದಚಾರಿ ಮಾರ್ಗಗಳಲ್ಲಿ ಟ್ರಾನ್ಸ್‌ಫಾರ್ಮರ್ ಗಳನ್ನು ಅಳವಡಿಸಿದ್ದೇ ತಪ್ಪು. ಈಗ ಒಂದು ವರ್ಷ ಕಾಲಾವಕಾಶ ಕೇಳುತ್ತಿದ್ದೀರಿ. ಹೀಗೆ ಹೇಳಿದರೆ ಅದರ ಪರಿಣಾಮವನ್ನ ನೀವು ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿತು. “ಯಾವ ನಿಯಮಗಳ ಆಧಾರದಲ್ಲಿ ಪಾದಚಾರಿ ಮಾರ್ಗದಲ್ಲಿ ಟ್ರಾನ್ಸ್‌ಫಾರ್ಮರ್ ಅಳವಡಿಸಿದ್ದೀರಿ” ಎಂದು ಪ್ರಶ್ನಿಸಿತು.
ಇದಕ್ಕೆ ಬೆಸ್ಕಾಂ ಪರ ವಕೀಲರು “ಟೆಲಿಗ್ರಾಪ್ ಕಾಯಿದೆ ಅನ್ವಯ ಅಳವಡಿಸಲಾಗಿದೆ” ಎಂದರು. ಇದಕ್ಕೆ ಆಕ್ಷೇಪಿಸಿದ ಮುಖ್ಯ ನ್ಯಾಯಮೂರ್ತಿ ಅವರು “ನೀವು ಸರಿಯಿದ್ದಿದ್ದರೆ ಅವುಗಳನ್ನು ಸ್ಥಳಾಂತರಿಸಬೇಕಾದ ಸ್ಥಿತಿ ಏಕೆ ನಿರ್ಮಾಣವಾಗುತ್ತಿತ್ತು” ಎಂದು ಗಂಭೀರವಾಗಿ ಹೇಳಿತು.