ಏಕ ರಾಷ್ಟ್ರ ಏಕ ಚುನಾವಣಾ ಮಸೂದೆ ಸಂವಿಧಾನಬಾಹಿರವಲ್ಲ, ಆದರೆ ಇನ್ನಷ್ಟು ಸುಧಾರಣೆ ಆಗಬೇಕು: ನಿವೃತ್ತ ಸಿಜೆಐ ಚಂದ್ರಚೂಡ್

ಮಸೂದೆಯಲ್ಲಿ ಚುನಾವಣಾ ಆಯೋಗಕ್ಕೆ ಅನಿಯಂತ್ರಿತವಾದ ಅಧಿಕಾರ ನೀಡಿರುವುದು ಮತ್ತು ಮಸೂದೆಯಲ್ಲಿನ ಸಾಂವಿಧಾನಿಕ ನ್ಯೂನತೆಗಳ ಬಗ್ಗೆ ಅವರು ಎಚ್ಚರಿಕೆ ನೀಡಿದ್ದಾರೆ.
CJI DY Chandrachud
CJI DY Chandrachud
Published on

ಒಂದು ರಾಷ್ಟ್ರ ಒಂದು ಚುನಾವಣಾ ಮಸೂದೆಯಲ್ಲಿರುವ ಸಾಂವಿಧಾನಿಕ ನ್ಯೂನತೆಗಳ ಬಗ್ಗೆ ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು ಜಂಟಿ ಸಂಸದೀಯ ಸಮಿತಿಯನ್ನು ಎಚ್ಚರಿಸಿದ್ದಾರೆ.

ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿಯೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಕುರಿತು  ಚರ್ಚಿಸಿರುವ ಅವರು ಸಂವಿಧಾನದ (ನೂರ ಇಪ್ಪತ್ತೊಂಬತ್ತನೇ ತಿದ್ದುಪಡಿ) ಮಸೂದೆ- 2024 ಸಂವಿಧಾನದ ಮೂಲ ರಚನೆ ಉಲ್ಲಂಘಿಸದಿದ್ದರೂ, ಅದು ಗಂಭೀರ ನ್ಯೂನತೆಗಳಿಂದ ಕೂಡಿದ್ದು  ಮಸೂದೆ ಮಂಡಿಸುವ ಮೊದಲು ಅದನ್ನು ಸರಿಪಡಿಸುವುದು ಅಗತ್ಯವೆಂದು ಎಂದು ಚಂದ್ರಚೂಡ್‌ ತಿಳಿಸಿದ್ದಾರೆ ಎಂಬುದಾಗಿ ಸಭೆಯಲ್ಲಿ ಹಾಜರಿದ್ದ ಮೂಲಗಳು ʼಬಾರ್ ಅಂಡ್‌ ಬೆಂಚ್‌ʼಗೆ ತಿಳಿಸಿವೆ.

ಸಭೆಯಲ್ಲಿ 38 ಸಂಸದರು ಮತ್ತು ಸಂಸತ್‌ ಸಚಿವಾಲಯದ ಅಧಿಕಾರಿಗಳು ಭಾಗವಹಿಸಿದ್ದರು. ಮತ್ತೊಬ್ಬ ನಿವೃತ್ತ ಸಿಜೆಐ ಜೆ ಎಸ್ ಖೇಹರ್ ಅವರು ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

ನ್ಯಾ. ಚಂದ್ರಚೂಡ್‌ ಅವರ ಅವಲೋಕನಗಳ ಪ್ರಮುಖಾಂಶಗಳು

  • ಮಸೂದೆ ಸಂವಿಧಾನದ ಮೂಲ ರಚನಾ ಸಿದ್ಧಾಂತಕ್ಕೆ ಧಕ್ಕೆ ತರುವುದಿಲ್ಲ.

  • ಕೇಂದ್ರ ಹಾಗೂ ರಾಜ್ಯಗಳಿಗೆ ಒಗ್ಗೂಡಿ ನಡೆಸುವ ಚುನಾವಣೆ ಸಂವಿಧಾನ ಬಾಹಿರವಲ್ಲ.

  • 1950- 60ರ ದಶಕದಲ್ಲಿ ಸಂಸತ್ತು ಹಾಗೂ ವಿಧಾನಸಭೆಗಳಿಗೆ ಚುನಾವಣೆಗಳು ಏಕಕಾಲಕ್ಕೆ ನಡೆದಿದ್ದವು. 1957ರಲ್ಲಿ ರಾಷ್ಟ್ರೀಯ ಚುನಾವಣೆಗಳೊಂದಿಗೆ ಹೊಂದಾಣಿಕೆ ಮಾಡಲು ಹಲವಾರು ವಿಧಾನಸಭೆಗಳನ್ನು ಮೊದಲೇ ವಿಸರ್ಜಿಸಲಾಗಿತ್ತು.

  • ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆ ಮೂಲಭೂತ ರಚನೆಯ ಭಾಗವಾಗಿದ್ದರೂ, ಚುನಾವಣೆಗಳನ್ನು ಪ್ರತ್ಯೇಕವಾಗಿ ನಡೆಸುವ ಅಗತ್ಯವಿಲ್ಲ.

  • ಆದರೆ ಮಸೂದೆಯಲ್ಲಿ  ಚುನಾವಣಾ ಆಯೋಗಕ್ಕೆ ಅತಿಯಾದ ಅಧಿಕಾರ ನೀಡಿರುವುದು ಸರಿಯಲ್ಲ. ಅದನ್ನು ಸೀಮಿತಗೊಳಿಸಬೇಕು.

  • ಸಾಂವಿಧಾನಿಕ ಸಮತೋಲನ ಸಾಧಿಸುವುದಕ್ಕಾಗಿ ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಸಂದರ್ಭಗಳಲ್ಲಿ ಮಾತ್ರ ಚುನಾವಣೆ ವಿಳಂಬಕ್ಕೆ ಆಯೋಗ ಅವಕಾಶ ನೀಡಬೇಕು. ಈ ಶಿಫಾರಸನ್ನು ಸಂಸತ್ತಿನ ಎರಡೂ ಸದನಗಳು ಅನುಮೋದಿಸಿರಬೇಕು. ನಿಗದಿತ ಅವಧಿಯವರೆಗೆ ಮಾತ್ರ ಚುನಾವಣೆ ಮುಂದೂಡಬೇಕು ಎಂಬ ಮೂರು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.

  • ತುರ್ತ ಪರಿಸ್ಥಿತಿ ಸಂದರ್ಭದಲ್ಲಿ ಚುನಾವಣೆಯನ್ನು ಒಂದು ವರ್ಷದಷ್ಟು ದೀರ್ಘಕಾಲ ವಿಳಂಬ ಮಾಡಲು ಅನುವುಮಾಡಿಕೊಡುವುದರಿಂದ ಅದು ಏಕ ಚುನಾವಣೆ ವ್ಯವಸ್ಥೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಮಸೂದೆ ವಿವರಿಸುವುದಿಲ್ಲ.

  • ಬಹುಮತ ಕಳೆದುಕೊಂಡ ಕಾರಣ ರಾಜ್ಯ ವಿಧಾನಸಭೆಯನ್ನು ಅವಧಿ ಪೂರ್ವವಾಗಿ ವಿಸರ್ಜಿಸಿದರೆ ಏನಾಗಲಿದೆ? ಸಂಸತ್‌ ಚುನಾವಣೆಯೊಂದಿಗೆ ಹೊಂದಾಣಿಕೆ ಮಾಡಲು ಅಂತಹ ಸಂದರ್ಭಗಳಲ್ಲಿ ಚುನಾವಣೆಗಳನ್ನು ಮುಂದೂಡಬಹುದೇ ಎಂಬುದರ ಕುರಿತು ಮಸೂದೆ ಸ್ಪಷ್ಟತೆ ಒದಗಿಸಿಲ್ಲ. ಈ ಅಂಶಗಳನ್ನು ನಿಭಾಯಿಸಬೇಕು.

Kannada Bar & Bench
kannada.barandbench.com