ಪ್ರತಿ ಹಿಂದೂಗಳು ಅನುಸರಿಸಬೇಕಾದ ಮೂಲತತ್ವಗಳಲ್ಲಿ ಸಹಿಷ್ಣುತೆ ಕೂಡ ಒಂದು ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕಳೆದ ತಿಂಗಳು ಮನೆಯೊಂದನ್ನು ಚರ್ಚ್ ಆಗಿ ಪರಿವರ್ತಿಸಲು ಕನ್ಯಾಕುಮಾರಿಯ ಜಿಲ್ಲಾಧಿಕಾರಿಗಳು ನೀಡಿದ್ದ ಅನುಮತಿಯನ್ನು ಎತ್ತಿ ಹಿಡಿದ ನ್ಯಾ. ಸಿ ವಿ ಕಾರ್ತಿಕೇಯನ್ ಅವರಿದ್ದ ಏಕಸದಸ್ಯ ಪೀಠ “ಭಾರತವು ಜಾತ್ಯತೀತ ರಾಷ್ಟ್ರವಾಗಿದ್ದು, ವಿವಿಧತೆಯಲ್ಲಿ ಏಕತೆ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡುತ್ತದೆ” ಎಂದಿತು.
ಅಲ್ಲದೆ “ಅರ್ಜಿದಾರರು ತಮ್ಮ ಸುತ್ತಲಿನ ಎಲ್ಲರೊಂದಿಗೆ ಬದುಕಲು ಕಲಿಯಬೇಕು. ವಿವಿಧತೆಯಲ್ಲಿ ಏಕತೆ ಈ ದೇಶದ ಹೆಮ್ಮೆಯಾಗಿದೆ. ಏಕತೆಯಲ್ಲಿ ವಿವಿಧತೆ ಇರಬಾರದು. ಅರ್ಜಿದಾರ ತನ್ನ ಸುತ್ತಲೂ ವಾಸಿಸುವ ಜನರ ಗುಂಪನ್ನು ಸ್ವೀಕರಿಸಬೇಕು. ಮತ್ತು ವಿವಿಧ ನಂಬಿಕೆ, ಜಾತಿ ಧರ್ಮದ ಜನರು ಮತ್ತು ಅವರಿಗೆ ಸಂವಿಧಾನದ ಅಡಿಯಲ್ಲಿ ನೀಡಲಾದ ಹಕ್ಕುಗಳನ್ನು ಒಪ್ಪಿಕೊಳ್ಳಬೇಕು. ದೇಶವು ಧರ್ಮದ ಆಚರಣೆಯನ್ನು ಗುರುತಿಸುವ ಜಾತ್ಯತೀತ ರಾಷ್ಟ್ರವಾಗಿದೆ. ಅರ್ಜಿದಾರರು ಅದರ ವಿರುದ್ಧ ದೂರು ನೀಡಲು ಸಾಧ್ಯವಿಲ್ಲ ಎಂದಿತು.
ವಸತಿ ಪ್ರದೇಶದಲ್ಲಿ ಚರ್ಚ್ ನಿರ್ಮಿಸಲಾಗಿದೆ ಎಂಬ ಅರ್ಜಿದಾರರ ಪರ ವಕೀಲರ ವಾದವನ್ನು ಒಪ್ಪಲು ನಿರಾಕರಿಸಿದ ನ್ಯಾಯಾಲಯ ಅದೇ ವಸತಿ ಪ್ರದೇಶದಲ್ಲಿ ಹಿಂದೂ ದೇವಾಲಯ ಇರುವುದನ್ನು ಗಮನಿಸಿತು.
ಇದೇ ವೇಳೆ ʼಚರ್ಚ್‌ನಲ್ಲಿ ಧ್ವನಿವರ್ಧಕ ಬಳಸಬಾರದು. ಸಿಸಿಟಿವಿಯನ್ನು ತೆಗೆದುಹಾಕಬೇಕು ಇಲ್ಲವೇ ಅದರ ಕ್ಯಾಮೆರಾ ದಿಕ್ಕನ್ನು ಬದಲಿಸಬೇಕು ಎಂದ ನ್ಯಾಯಾಲಯ ಪ್ರಾರ್ಥನೆಗೆ ನಕಾರ ವ್ಯಕ್ತಪಡಿಸಿತು. “ಪ್ರಾರ್ಥನೆಗೆ ಅನುಮತಿ ಕೇಳಿ ಅರ್ಜಿ ಸಲ್ಲಿಸುವ ವ್ಯಕ್ತಿಗೆ ಮಾತ್ರ ಕಟ್ಟಡದ ಅನುಮತಿ ನೀಡಲಾಗುತ್ತದೆ. ಅರ್ಜಿದಾರರು ನಿವಾಸಿಯಾಗಿರುವುದರಿಂದ ನೇರವಾಗಿ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿಲ್ಲ. ಅವರು ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ಅಥವಾ ಕಟ್ಟಡ ಬಳಸುವುದಕ್ಕೆ ಅವರಿಗೆ ತಕರಾರುಗಳಿರಬಹುದು” ಎಂದು ಅದು ಅಭಿಪ್ರಾಯಪಟ್ಟಿತು.