ವೈದ್ಯಕೀಯ ಕೋರ್ಸ್ ಕಾಯಿದೆ ಅಡಿ ಶಿಕ್ಷಣ ಪೂರೈಸಿರುವ ಸ್ನಾತಕೋತ್ತರ ಪದವೀಧರರು ಒಂದು ವರ್ಷ ಗ್ರಾಮೀಣ ಪ್ರದೇಶದಲ್ಲಿ ಸೇವೆ ಮಾಡುವುದನ್ನು ಕಡ್ಡಾಯಗೊಳಿಸಿರುವ ಕರ್ನಾಟಕ ಕಡ್ಡಾಯ ಸೇವೆ ತರಬೇತಿಯ ಸೆಕ್ಷನ್ 4 ಅನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬುಧವಾರ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಡಾ. ಕೀರ್ತಿ ಕರ್ನೂಲ್ ಹಾಗು ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
“ಸದರಿ ವಿಚಾರಕ್ಕೆ ಸಂಬಂಧಿಸಿದ ಬಾಕಿ ಇರುವ ಪ್ರಕರಣಗಳ ಜೊತೆ ಈ ಪ್ರಕರಣವನ್ನು ಸೇರಿಸಬೇಕು. ರಾಜ್ಯ ಸರ್ಕಾರವು ಸೂಚನೆ ಪಡೆದು ಆಕ್ಷೇಪಣೆ ಸಲ್ಲಿಸಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿದ್ದು, ವಿಚಾರಣೆಯನ್ನು ಫೆಬ್ರವರಿ 22ಕ್ಕೆ ಮುಂದೂಡಿದೆ.
“ಅರ್ಜಿದಾರರು ಸ್ನಾತಕೋತ್ತರ ಪದವೀಧರ ವೈದ್ಯರಾಗಿದ್ದು ಅವರು 2018-19 ಮತ್ತು 2019-20ರಲ್ಲಿ ಪ್ರತಿವಾದಿ ಕಾಲೇಜುಗಳಲ್ಲಿ ಶಿಕ್ಷಣ ಪೂರೈಸಿದ್ದಾರೆ. ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯು ಮಾಹಿತಿ ಪಟ್ಟಿಯಲ್ಲಿ ಕೆಸಿಎಸ್ ಕಾಯಿದೆ ಅಡಿ ಕಡ್ಡಾಯವಾಗಿ ಗ್ರಾಮೀಣ ಸೇವೆ ಸಲ್ಲಿಸಬೇಕು ಎಂದು ಉಲ್ಲೇಖಿಸಿರಲಿಲ್ಲ. ಹೀಗಾಗಿ, ಕಡ್ಡಾಯವಾಗಿ ಗ್ರಾಮೀಣ ಸೇವೆ ಮಾಡಬೇಕು ಎಂಬುದರಿಂದ ತಮಗೆ ವಿನಾಯಿತಿ ನೀಡಬೇಕು” ಎಂದು ಅರ್ಜಿದಾರರ ಪರ ವಕೀಲೆ ಅಕ್ಕಮಹಾದೇವಿ ಹಿರೇಮಠ ಕೋರಿದರು.
“2021ರ ಜುಲೈ ಮತ್ತು ಆಗಸ್ಟ್‌ನಲ್ಲಿ ಅರ್ಜಿದಾರರು ತಮ್ಮ ಕೋರ್ಸ್ ಪೂರ್ಣಗೊಳಿಸಿದ್ದು, ಕೆಸಿಎಸ್ ಕಾಯಿದೆ ಅಡಿ ಒಂದು ವರ್ಷ ಗ್ರಾಮೀಣ ಸೇವೆ ಮಾಡಬೇಕು ಎಂದು ಹೇಳಿದಾಗ ಆಘಾತವಾಯಿತು. ವೈದ್ಯಕೀಯ ಶಿಕ್ಷಣ ಪಡೆಯಲು ಕೋಟ್ಯಂತರ ರೂಪಾಯಿ ಬ್ಯಾಂಕ್ ಸಾಲ ಪಡೆದಿದ್ದೇವೆ. ಆದರೆ, ಪ್ರತಿವಾದಿಗಳು ಯಾವುದೇ ಸಂದರ್ಭದಲ್ಲೂ ಗ್ರಾಮೀಣ ಸೇವೆ ಕಡ್ಡಾಯ ಎಂಬುದನ್ನು ತಿಳಿಸಿಲ್ಲ” ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.
“2021ರ ಆಗಸ್ಟ್ 21ರಂದು ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದ್ದು, ಡೀಮ್ಡ್ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಸೇವೆ ಮಾಡಬೇಕು ಎಂದು ಕೆಸಿಎಸ್ ಕಾಯಿದೆಯಲ್ಲಿ ಹೇಳಿದೆ. ಆದರೆ, ಎಂಸಿಸಿ ಅಥವಾ ರಾಜ್ಯ ಸರ್ಕಾರವು ವಿದ್ಯಾರ್ಥಿಗಳು ಪ್ರವೇಶ ಪಡೆಯುವುದಕ್ಕೂ ಮುನ್ನ ಈ ಕುರಿತು ಮಾಹಿತಿ ನೀಡಿಲ್ಲ. ಹೀಗಾಗಿ, ತಮಗೆ ಗ್ರಾಮೀಣ ಸೇವೆ ಕಡ್ಡಾಯ ಮಾಡಿರುವುದರಿಂದ ವಿನಾಯಿತಿ ನೀಡಬೇಕು” ಎಂದು ಮನವಿಯಲ್ಲಿ ಕೋರಿದ್ದಾರೆ.