ಸಿವಿಲ್ ನ್ಯಾಯಾಧೀಶರ 94 ಹುದ್ದೆಗಳ ನೇರ ನೇಮಕಾತಿಗಾಗಿ ಕರ್ನಾಟಕ ಹೈಕೋರ್ಟ್ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅಂಗೀಕೃತ ವಿಶ್ವವಿದ್ಯಾಲಯ ನೀಡಿದ ಕಾನೂನು ಪದವಿ ಪಡೆದಿರಬೇಕು ಮತ್ತು ಕಡ್ಡಾಯವಾಗಿ ವಕೀಲರಾಗಿ ನೋಂದಾಯಿಸಿಕೊಂಡಿರಬೇಕು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅರ್ಭರ್ಥಿಗಳಿಗೆ 38 ವರ್ಷ, ಇತರರಿಗೆ 35 ವರ್ಷ ವಯೋಮಿತಿ ಮೀರಿರಬಾರದು. ಮಾಜಿ ಸೈನಿಕ ಅಭ್ಯರ್ಥಿಗಳಿಗಾಗಿ ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆ ಮಾಡಲಾಗಿದೆ.
ಉಚ್ಚ ನ್ಯಾಯಾಲಯದಲ್ಲಿ ಮತ್ತು ಜಿಲ್ಲಾ ನ್ಯಾಯಿಕ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಗತ್ಯ ವಿದ್ಯಾರ್ಹತೆಯನ್ನು ಹೊಂದಿರುವ ಎಲ್ಲಾ ಸೇವಾನಿರತ ಅಭ್ಯರ್ಥಿಗಳು ವೃಂದ ತಾರತಮ್ಯವಿಲ್ಲದೆ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಪ್ರಾಸಿಕ್ಯೂಷನ್ಸ್ ಮತ್ತು ಸರ್ಕಾರಿ ವ್ಯಾಜ್ಯ ನಿರ್ವಹಣೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಕೂಡ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಜಾಲತಾಣ http://karnatakajudiciary.kar.nic.in/recruitment.php. ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ಹೊರತುಪಡಿಸಿ ಇತರ ಯಾವುದೇ ವಿಧಾನದಲ್ಲಿ ಕಳುಹಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ http://karnatakajudiciary.kar.nic.in/recruitment.php. ಲಿಂಕ್ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆನ್‍ಲೈನ್ ಪೇಮೆಂಟ್ ಗೇಟ್‍ವೇಯಿಂದ ಶುಲ್ಕವನ್ನು ಸಂದಾಯ ಮಾಡತಕ್ಕದ್ದು ಅಥವಾ http://karnatakajudiciary.kar.nic.in/recruitment.php. ಲಿಂಕ್ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆನ್‍ಲೈನ್ ಪೇಮೆಂಟ್ ಗೇಟ್‍ವೇಯಿಂದ ಪಿ.ಡಿ.ಎಫ್ ನಮೂನೆಯಲ್ಲಿ ಚಲನ್ ಡೌನ್‍ಲೋಡ್ ಮಾಡಿಕೊಳ್ಳತಕ್ಕದ್ದು ಮತ್ತು ನಿಗದಿಪಡಿಸಿದ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಶಾಖೆಯಲ್ಲಿ ಪಾವತಿ ಮಾಡಬಬಹುದು ಎಂದು ತಿಳಿಸಲಾಗಿದೆ.
ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 27ರಾತ್ರಿ 11.59 ಗಂಟೆ, ಆನ್‍ಲೈನ್ ಮೂಲಕ ಶುಲ್ಕ ಸಂದಾಯ ಮಾಡಲು ಏಪ್ರಿಲ್ 30 ರಾತ್ರಿ 11.59 ಗಂಟೆ ಹಾಗೂ ಚಲನ್ ಮೂಲಕ ಶುಲ್ಕ ಸಂದಾಯ ಮಾಡಲು ಏಪ್ರಿಲ್ 30 ಕೊನೆಯ ದಿನ ಎಂದು ಅಧಿಕೃತ ಪ್ರಕಟಣೆಯಲ್ಲಿ ವಿವರಿಸಲಾಗಿದೆ.