Ramya alias Divya Spandana and Bengaluru's City Civil and Sessions Court
Ramya alias Divya Spandana and Bengaluru's City Civil and Sessions Court

ಆನ್‌ಲೈನ್‌ನಲ್ಲಿ ಅತ್ಯಾಚಾರ, ಕೊಲೆ ಬೆದರಿಕೆ ಪ್ರಕರಣ: ಬೆಂಗಳೂರು ನ್ಯಾಯಾಲಯದಲ್ಲಿ ಸಾಕ್ಷ್ಯ ದಾಖಲಿಸಿದ ನಟಿ ರಮ್ಯಾ

ನ್ಯಾಯಾಲಯವು ಗೌಪ್ಯ ವಿಚಾರಣೆ ನಡೆಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ ನಟಿ ರಮ್ಯಾ, ಆರೋಪಿಗಳು ಮತ್ತವರಿಗೆ ಸಂಬಂಧಪಟ್ಟ ವಕೀಲರನ್ನು ಹೊರತುಪಡಿಸಿ ಉಳಿದವರನ್ನು ನ್ಯಾಯಾಲಯದಿಂದ ಹೊರಗೆ ಕಳುಹಿಸಿದ ಬಳಿಕ ರಮ್ಯಾ ಸಾಕ್ಷ್ಯ ದಾಖಲಿಸಲಾಯಿತು.
Published on

ಅಶ್ಲೀಲ ಸಂದೇಶ ಕಳುಹಿಸಿ, ಅತ್ಯಾಚಾರ ಹಾಗೂ ಜೀವ ಬೆದರಿಕೆ ಹಾಕಿದವರ ವಿರುದ್ಧ ತಾವು ದಾಖಲಿಸಿದ್ದ ದೂರು ಸಂಬಂಧ ನಟಿ ದಿವ್ಯಾ ಸ್ಪಂದನಾ ಅಲಿಯಾಸ್‌ ರಮ್ಯಾ ಅವರು ಮಂಗಳವಾರ ಬೆಂಗಳೂರಿನ ಸತ್ರ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ದಾಖಲಿಸಿದರು.

ಪ್ರಕರಣ ಸಂಬಂಧ ರಮ್ಯಾ ದಾಖಲಿಸಿರುವ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ 46ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಜೀವ್ ಗೌಡ ವಿಚಾರಣೆ ನಡೆಸಿದರು. 

ಸಾಕ್ಷ್ಯ ನುಡಿಯಲು ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿದ ಹಿನ್ನೆಲೆಯಲ್ಲಿ ನಟಿ ರಮ್ಯಾ ಅವರು ಮಂಗಳವಾರ ಕೋರ್ಟ್‌ಗೆ ಹಾಜರಾಗಿದ್ದರು. ಜೊತೆಗೆ ಪ್ರಕರಣದ 12 ಆರೋಪಿಗಳು ಸಹ ವಿಚಾರಣೆಗೆ ಹಾಜರಾಗಿದ್ದರು.

ಪ್ರಕರಣದಲ್ಲಿ ಆರೋಪಿಗಳಿಂದ ಅತ್ಯಾಚಾರ ಮತ್ತು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಗೌಪ್ಯ ವಿಚಾರಣೆ ನಡೆಸಲು ನ್ಯಾಯಾಧೀಶರು ನಿರ್ಧರಿಸಿದರು. ಅದರಂತೆ ನಟಿ ರಮ್ಯಾ, ಆರೋಪಿಗಳು ಮತ್ತವರಿಗೆ ಸಂಬಂಧಪಟ್ಟ ವಕೀಲರನ್ನು ಹೊರತುಪಡಿಸಿ ಉಳಿದವರನ್ನು ನ್ಯಾಯಾಲಯದಿಂದ ಹೊರಗೆ ಕಳುಹಿಸಿದ ಬಳಿಕ ನಟಿ ರಮ್ಯಾ ಸಾಕ್ಷ್ಯವನ್ನು ದಾಖಲಿಸಿಕೊಂಡರು.

ನಟಿ ರಮ್ಯಾ ಅವರು ಕಟೆಕಟೆಯಲ್ಲಿ ನಿಂತು, ನಾನು ನಟಿ. 2014ರವರೆಗೆ 40ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದೇನೆ. ಒಂದು ಚಿತ್ರವನ್ನ ಸಹ ನಿರ್ಮಾಣ ಮಾಡಿದ್ದೇನೆ. 2014ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿದ್ದೆ. 2012ರಲ್ಲಿ ರಮ್ಯಾ/ದಿವ್ಯಾ ಸ್ವಂದನ ಎಂಬ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆ ಆರಂಭಿಸಿದ್ದೆ. ಅದರಲ್ಲಿ ನನಗೆ 12 ಲಕ್ಷ ಅಭಿಮಾನಿಗಳಿದ್ದಾರೆ. ಇನ್ನೂ ಟ್ವಿಟ್ಟರ್ ಖಾತೆಯನ್ನು 8 ಲಕ್ಷ ಜನ ಫಾಲೋ ಮಾಡುತ್ತಿದ್ದಾರೆ. ಆರೋಪಿಗಳು ನನಗೆ ಸಾಮಾಜಿಕ ಜಾಲತಾಣದ ಮೂಲಕ ಅಶ್ಲೀಲ ಸಂದೇಶ ಕಳುಹಿಸಿದ್ದು, ಹಲವು ರೀತಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿಕೆ ದಾಖಿಸಿದರು.

ರಮ್ಯಾ ಅವರ ಸಾಕ್ಷ್ಯ ದಾಖಲಿಸಿಕೊಂಡ ನ್ಯಾಯಾಧೀಶರು ವಿಚಾರಣೆಯನ್ನು ಮಾರ್ಚ್‌ 26ಕ್ಕೆ ಮುಂದೂಡಿದರು.

Also Read
ನಟಿ ರಮ್ಯಾಗೆ ಆನ್‌ಲೈನ್‌ನಲ್ಲಿ ಅತ್ಯಾಚಾರ, ಕೊಲೆ ಬೆದರಿಕೆ: ಇಬ್ಬರು ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ

ತಮಗೆ ಅಶ್ಲೀಲ ಸಂದೇಶ ಕಳುಹಿಸಿದ ಮತ್ತು ಬೆದರಿಕೆ ಹಾಕಿದ ಆರೋಪ ಸಂಬಂಧ ಸೈಬರ್‌ ಠಾಣಾ ಪೊಲೀಸರಿಗೆ ರಮ್ಯಾ 2025ರಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಬೆಂಗಳೂರಿನ ಸೈಬರ್ ಪೊಲೀಸರು 11 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಆ ಎಲ್ಲಾ ಆರೋಪಿಗಳ ವಿರುದ್ಧ ಆರೋಪ ನಿಗದಿ ಮಾಡಿದ್ದ ನ್ಯಾಯಾಲಯವು ಪ್ರಕರಣ ಕುರಿತು ಸಾಕ್ಷ್ಯ ದಾಖಲಿಸಲು ಸೂಚಿಸಿ ರಮ್ಯಾಗೆ ಸಮನ್ಸ್‌ ಜಾರಿ ಮಾಡಿತ್ತು. ಅದರಂತೆ ರಮ್ಯಾ ಮಂಗಳವಾರ ಕೋರ್ಟ್‌ಗೆ ಹಾಜರಾಗಿ ಸಾಕ್ಷ್ಯ ದಾಖಲಿಸಿದ್ದಾರೆ.

Kannada Bar & Bench
kannada.barandbench.com