ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗದು; ಗ್ರಾಮ ಪಂಚಾಯಿತಿ ಸದಸ್ಯೆ ಆಯ್ಕೆ ಅಸಿಂಧು ತೀರ್ಪು ಎತ್ತಿ ಹಿಡಿದ ಹೈಕೋರ್ಟ್‌

ಅರ್ಚನಾ ಹುಟ್ಟಿನಿಂದ ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲ. ಎಸ್‌ಟಿ ಸಮುದಾಯದ ವ್ಯಕ್ತಿಯನ್ನು ವಿವಾಹವಾಗಿದ್ದರು. ಎಸ್‌ಟಿಗೆ ಮೀಸಲಾಗಿದ್ದ ಕ್ಷೇತ್ರದಿಂದ ಕಳೆದ ವರ್ಷ ನಡೆದಿದ್ದ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿ ಜಯಗಳಿಸಿದ್ದರು.
ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗದು; ಗ್ರಾಮ ಪಂಚಾಯಿತಿ ಸದಸ್ಯೆ ಆಯ್ಕೆ ಅಸಿಂಧು ತೀರ್ಪು ಎತ್ತಿ ಹಿಡಿದ ಹೈಕೋರ್ಟ್‌
Justice Krishna S Dixit and Karnataka HC

ಮದುವೆಯ ನಂತರ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುವುದಿಲ್ಲ ಎಂದು ಈಚೆಗೆ ಆದೇಶಿಸಿರುವ ಕರ್ನಾಟಕ ಹೈಕೋರ್ಟ್, ತಂದೆ ಜಾತಿಯನ್ನು ಜನ್ಮದ ಆಧಾರ ಮೇಲೆ ಮಕ್ಕಳು ಪಡೆಯುತ್ತಾರೆ ಎಂದು ಸ್ಪಷ್ಟಪಡಿಸಿದೆ.

ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಮದುವೆಯಾಗಿರುವ ಆಧಾರದ ಮೇಲೆ ಗ್ರಾಮ ಪಂಚಾಯತಿ ಸದಸ್ಯ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಸ್ಥಾನದಿಂದ ಸ್ಪರ್ಧಿಸಿ ಜಯಗಳಿಸಿದ್ದ ಶಿವಮೊಗ್ಗದ ಬಾಳೆಕೊಪ್ಪ ನಿವಾಸಿ ಎಂ ಜಿ ಅರ್ಚನಾ ಅವರ ಆಯ್ಕೆಯನ್ನು ಅಸಿಂಧುಗೊಳಿಸಿದ್ದ ಅಧೀನ ನ್ಯಾಯಾಲಯದ ತೀರ್ಪನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ಪೀಠ ಎತ್ತಿ ಹಿಡಿದಿದೆ.

ಪರಿಶಿಷ್ಟ ಪಂಗಡದ ವ್ಯಕ್ತಿಯೊಂದಿಗೆ ಮದುವೆಯಾಗಿರುವ ಕಾರಣ ಆತನ ಸಾಮಾಜಿಕ ಸ್ಥಾನಮಾನವೇ ತನ್ನದಾಗಿರುತ್ತದೆ. ಅಂದರೆ ಪತಿಯ ಜಾತಿಯೇ ತನಗೆ ಅನ್ವಯಿಸುತ್ತದೆ ಎಂದು ಅರ್ಚನಾ ವಾದಿಸಿದ್ದಾರೆ. ಸಾಮಾನ್ಯವಾಗಿ, ವ್ಯಕ್ತಿಯ ಜನ್ಮದಿಂದ ಜಾತಿ ನಿರ್ಧರಿಸಲಾಗುತ್ತದೆ. ತಂದೆ ಜಾತಿಯನ್ನು ಜನ್ಮದ ಆಧಾರ ಮೇಲೆ ಮಕ್ಕಳು ಪಡೆಯುತ್ತಾರೆ. ಆದರೆ, ವಿವಾಹದ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುವುದಿಲ್ಲ. ಹೀಗಾಗಿ, ಪರಿಶಿಷ್ಟ ಜಾತಿ ಅಥವಾ ಪಂಗಡದಲ್ಲಿ ಹುಟ್ಟಿದವರು ಮಾತ್ರ ಆ ಜಾತಿಗೆ ಮೀಸಲು ಆಗಿರುವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ ಎಂದು ಆದೇಶದಲ್ಲಿ ಪೀಠ ಹೇಳಿದೆ.

ಅಪರೂಪದ ಸಂದರ್ಭದಲ್ಲಿ ಮಹಿಳೆಯೊಬ್ಬರು ಪತಿಯ ಜಾತಿಯೇ ತನಗೆ ಅನ್ವಯವಾಗುತ್ತದೆ ಎಂದು ಹೇಳುತ್ತಿದ್ದಾರೆ. ಇನ್ನೂ ಚುನಾವಣಾ ನ್ಯಾಯ ಮಂಡಳಿ ವಾದ ಮಂಡನೆಗೆ ತನಗೆ ಸೂಕ್ತ ಅವಕಾಶ ನೀಡಿಲ್ಲ ಎಂದು ಅರ್ಚನಾ ಆರೋಪಿಸುತ್ತಾರೆ. ಆದರೆ, ಸೂಕ್ತ ಅವಕಾಶ ನೀಡಿದ್ದರೂ ಗೈರಾಗುವ ಮೂಲಕ ವಿಚಾರಣೆಗೆ ಸಹಕರಿಸಿಲ್ಲ. ಅರ್ಚನಾ ಜನಪ್ರತಿನಿಧಿಯಾಗಿದ್ದಾರೆ ಹೊರತು ಉದಾರತೆ ತೋರಲು ಬಡ ರೈತ ಮಹಿಳೆ ಅಥವಾ ಕಾರ್ಮಿಕಳಲ್ಲ. ಚುನಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಮಾನತೆ ಮತ್ತು ಸಾಮಾನ್ಯ ಕಾನೂನು ತತ್ವಗಳಿಗೆ ಸ್ಥಳಾವಕಾಶವಿಲ್ಲ ಎಂಬ ಸರ್ಕಾರಿ ವಕೀಲರ ವಾದವು ನ್ಯಾಯಸಮ್ಮತವಾಗಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ಅರ್ಜಿ ತಿರಸ್ಕರಿಸಿದೆ.

Also Read
ಪಬ್ಲಿಕ್‌ ಟಿವಿಯ ರಂಗನಾಥ್‌, ಅರುಣ್‌ ಬಡಿಗೇರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲು ಶಹಾಪುರ ನ್ಯಾಯಾಲಯ ಆದೇಶ

ಪ್ರಕರಣದ ಹಿನ್ನೆಲೆ: ಅರ್ಚನಾ ಹುಟ್ಟಿನಿಂದ ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲ. ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ವಿವಾಹವಾಗಿದ್ದರು. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಕ್ಷೇತ್ರದಿಂದ ಕಳೆದ ವರ್ಷ ನಡೆದಿದ್ದ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿ ಜಯಗಳಿಸಿದ್ದರು. ಇದರಿಂದ ಅವರ ಆಯ್ಕೆ ಅಸಿಂಧುಗೊಳಿಸುವಂತೆ ಕೋರಿ ಚುನಾವಣಾ ತಕರಾರು ನ್ಯಾಯಾಧಿಕರಣಕ್ಕೆ ಅಭಿಲಾಷ ಎಂಬುವರು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಪುರಸ್ಕರಿಸಿದ ಶಿವಮೊಗ್ಗದ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು, ಅರ್ಚನಾ ಆಯ್ಕೆ ಅನೂರ್ಜಿತಗೊಳಿಸಿ 2022ರ ಫೆಬ್ರವರಿ 1ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಚನಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಮಹಾಭಾರತ ಉಲ್ಲೇಖ: ‘ದೈವಾ ಯತ್ನಂ ಕುಲೇ ಜನ್ಮ, ಪುರುಷಾ ಯತ್ನಂ ಪೌರುಷಂ’ ಎಂಬ ಮಹಾಭಾರತದ ಹೇಳಿಕೆಯನ್ನು ಪ್ರಕರಣದ ತೀರ್ಪಿನಲ್ಲಿ ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದಾರೆ. ‘ಯಾವ ಕುಲದಲ್ಲಿ ಜನಿಸಬೇಕು ಎಂಬುದು ದೈವ ನಿರ್ಣಯವಾಗಿರುತ್ತದೆ. ಅಧಿಕಾರ (ಶಕ್ತಿ) ಮತ್ತು ಪರಾಕ್ರಮವು ವ್ಯಕ್ತಿಯ ವೈಯಕ್ತಿಕ ಸಾಧನೆಯ ಫಲವಾಗಿರುತ್ತದೆ’ ಎಂಬುದು ಈ ಹೇಳಿಕೆಯ ಅರ್ಥವಾಗಿದೆ.

Attachment
PDF
Archana MG v Abhilasha and Ors.pdf
Preview

Related Stories

No stories found.
Kannada Bar & Bench
kannada.barandbench.com