ಪಬ್ಲಿಕ್‌ ಟಿವಿಯ ರಂಗನಾಥ್‌, ಅರುಣ್‌ ಬಡಿಗೇರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲು ಶಹಾಪುರ ನ್ಯಾಯಾಲಯ ಆದೇಶ

ʼಬಿಗ್‌ ಬುಲೆಟಿನ್‌ʼನಲ್ಲಿ ವಿದ್ಯಾದೇಗುಲದಲ್ಲಿ ಧರ್ಮ ಯುದ್ದ ತಲೆಬರಹದಡಿ ಪ್ರಸಾರ ಮಾಡಲಾದ ಸುದ್ದಿ ವಾಚಿಸುವಾಗ ಇದು ʼಭಾರತ, ಭಾರತ ಸೃಷ್ಟಿಯಾಗಿದ್ದೇ ಹಿಂದೂ ರಾಷ್ಟ್ರದ ಆಧಾರದಲ್ಲಿʼ ಎಂಬ ಹೇಳಿಕೆಯನ್ನು ಆರೋಪಿಗಳು ನೀಡಿದ್ದಾರೆ ಎಂದು ದೂರಲಾಗಿದೆ.
Public TV Editor H R Ranganath and Anchor Arun Badiger

Public TV Editor H R Ranganath and Anchor Arun Badiger

ʼಇದು ಭಾರತ, ಭಾರತ ಸೃಷ್ಟಿಯಾಗಿದ್ದೇ ಹಿಂದೂ ರಾಷ್ಟ್ರದ ಆಧಾರದಲ್ಲಿʼ ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಪಬ್ಲಿಕ್‌ ಟಿವಿಯ ಪ್ರಧಾನ ಸಂಪಾದಕ ಎಚ್‌ ಆರ್‌ ರಂಗನಾಥ್‌ ಮತ್ತು ನಿರೂಪಕ ಅರುಣ್‌ ಬಡಿಗೇರ್‌ ಅವರ ವಿರುದ್ದ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಲು ಶಹಾಪುರದ ಗೋಗಿ ಠಾಣಾಧಿಕಾರಿಗೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಈಚೆಗೆ ಆದೇಶ ಮಾಡಿದೆ.

ಶಹಾಪುರದ ಗೋಗಿ ಪೇಟೆಯ ನಿವಾಸಿ ಬಂದೇನವಾಜ್‌ ಅವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ್ದ ಶಹಾಪುರದ ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಕಾಡಪ್ಪ ಹುಕ್ಕೇರಿ ಅವರು ಆದೇಶ ಮಾಡಿದ್ದಾರೆ.

ಆರೋಪಿಗಳಾದ ರಂಗನಾಥ್‌ ಮತ್ತು ಅರುಣ್‌ ಬಡಿಗೇರ್‌ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 153 (ಬಿ), 505 (1) (ಬಿ) (ಸಿ) ಮತ್ತು 505 (2) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಆದೇಶ ಮಾಡಿರುವ ನ್ಯಾಯಾಲಯವು ವಿಚಾರಣೆಯನ್ನು ಏಪ್ರಿಲ್‌ 21ಕ್ಕೆ ಮುಂದೂಡಿದೆ.

ದೂರಿನ ಹಿನ್ನೆಲೆ: ಹಿಜಾಬ್‌ ವಿವಾದ ತಾರಕಕ್ಕೇರಿದ್ದಾಗ ಫೆಬ್ರವರಿ 3ರಂದು ಪಬ್ಲಿಕ್‌ ಟಿವಿಯ ʼಬಿಗ್‌ ಬುಲೆಟಿನ್‌ʼ ಕಾರ್ಯಕ್ರಮದಲ್ಲಿ ವಿದ್ಯಾದೇಗುಲದಲ್ಲಿ ಧರ್ಮ ಯುದ್ದ ತಲೆಬರಹದಡಿ ಪ್ರಸಾರ ಮಾಡಲಾದ ಸುದ್ದಿ ವಾಚಿಸುವಾಗ ಇದು ʼಭಾರತ, ಭಾರತ ಸೃಷ್ಟಿಯಾಗಿದ್ದೇ ಹಿಂದೂ ರಾಷ್ಟ್ರದ ಆಧಾರದಲ್ಲಿʼ ಎಂಬ ಹೇಳಿಕೆಯನ್ನು ಆರೋಪಿಗಳು ನೀಡಿದ್ದರು.

Also Read
[ಹಿಜಾಬ್ ವಿವಾದ] ತುರ್ತು ವಿಚಾರಣೆಯ ಮನವಿಯನ್ನು ಮತ್ತೆ ನಿರಾಕರಿಸಿದ ಸುಪ್ರೀಂ ಕೋರ್ಟ್

ಈ ಮೂಲಕ ದೇಶದ ಸಮಗ್ರತೆಗೆ ವಿರುದ್ಧವಾದ ಪೂರ್ವಗ್ರಹ ಪೀಡಿತ ಮತ್ತು ಸಂವಿಧಾನಬಾಹಿರ ಹೇಳಿಕೆ ನೀಡಿದ್ದಾರೆ. ಎರಡು ಸಮುದಾಯಗಳ ನಡುವೆ ದ್ವೇಷ ಹರಡುವ, ಮುಸ್ಲಿಮ್‌ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಯನ್ನು ಆರೋಪಿಗಳು ನೀಡಿದ್ದಾರೆ ಎಂದು ಆಕ್ಷೇಪಿಸಿ ಗೋಗಿ ಠಾಣೆಯಲ್ಲಿ ಬಂದೇನವಾಜ್‌ ದೂರು ನೀಡಿದ್ದರು. ಇದನ್ನು ಠಾಣಾಧಿಕಾರಿ ಸ್ವೀಕರಿಸದ ಹಿನ್ನೆಲೆಯಲ್ಲಿ, ಯಾದಗಿರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಅಂಚೆ ಮೂಲಕ ದೂರು ಸಲ್ಲಿಸಲಾಗಿತ್ತು. ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಬಂದೇನವಾಜ್‌ ಅವರು ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡಿದ್ದರು. ಇದನ್ನು ಪರಿಗಣಿಸಿರುವ ನ್ಯಾಯಾಲಯವು ಮಾರ್ಚ್‌ 19ರಂದು ದೂರು ದಾಖಲಿಸುವಂತೆ ಗೋಗಿ ಪೊಲೀಸರಿಗೆ ನಿರ್ದೇಶಿಸಿದೆ.

Attachment
PDF
Bandenawaz V. H R Ranganath and others.pdf
Preview

Related Stories

No stories found.
Kannada Bar & Bench
kannada.barandbench.com