ಮಾನಸಿಕ ಮತ್ತು ದೈಹಿಕ ವಿಕಲತೆಗೆ ತುತ್ತಾಗಿರುವ 22 ವರ್ಷದ ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಅನುಮತಿಸಲು ಒಡಿಶಾ ಹೈಕೋರ್ಟ್ ನಿರಾಕರಿಸಿದೆ. ಅತ್ಯಾಚಾರ ಸಂತ್ರಸ್ತೆಯರು ಗರ್ಭ ಧರಿಸುವ ಸಂದರ್ಭ ನಿರ್ಮಾಣವಾಗುವ ಪ್ರಕರಣಗಳು ಬಂದರೆ ಅನುಸರಿಸಬೇಕಾದ ಕ್ರಮಗಳನ್ನು ಹೈಕೋರ್ಟ್ ಜಾರಿಗೊಳಿಸಿದೆ.
ಮಾರ್ಗಸೂಚಿಗಳು ಈ ಕೆಳಗಿನಂತಿವೆ:
ಎಂಟು ವಾರಗಳ ಅವಧಿಯಲ್ಲಿ ಪೊಲೀಸ್ ಮತ್ತು ಮುಖ್ಯ ಜಿಲ್ಲಾ ವೈದ್ಯಾಧಿಕಾರಿ ಅತ್ಯಾಚಾರ ಸಂತ್ರಸ್ತೆ ಗರ್ಭ ಧರಿಸುವುದನ್ನು ಮುಂದುವರಿಸುವ ಬಯಕೆಯ ಕುರಿತು ಪ್ರಶ್ನಿಸಬೇಕು. ಸಂತ್ರಸ್ತೆಯು ಅಂಗವಿಕಲೆ ಅಥವಾ ಅಪ್ರಾಪ್ತೆಯಾಗಿದ್ದರೆ ಆಕೆಯ ತಾಯಿ ನಿರ್ಧಾರ ತಿಳಿಸಬೇಕು.
ಸಂತ್ರಸ್ತೆ ಅಥವಾ ಆಕೆಯ ತಾಯಿ ಗರ್ಭಪಾತ ಮಾಡಿಸುವ ನಿರ್ಧಾರ ತಿಳಿಸಿದರೆ ವೈದ್ಯಕೀಯ ಗರ್ಭಪಾತ ಕಾಯಿದೆ-1971ರ ಅನ್ವಯ ತುರ್ತಾಗಿ ಅದನ್ನು ಸಿಎಂಡಿಒ ಮಾಡಬೇಕು.
ತನಿಖೆಯ ಭಾಗವಾಗಿ ಶಿಶುವಿನ ವಂಶವಾಹಿ (ಡಿಎನ್‌ಎ) ಸಂಗ್ರಹಿಸಬೇಕು.
ಅತ್ಯಾಚಾರ ಸಂತ್ರಸ್ತೆ ಗರ್ಭಧಾರಣೆಯನ್ನು ಮುಂದುವರಿಸಲು ಬಯಸಿದಲ್ಲಿ ಆಕೆಯ ಅನುಮತಿಯ ಮೇರೆಗೆ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಬೇಕು. ರಾಜ್ಯ ಸರ್ಕಾರವು ಸಂತ್ರಸ್ತೆ ಮಗುವಿಗೆ ಜನ್ಮ ನೀಡಿದ ಒಂದು ವರ್ಷದವರೆಗೆ ಅಗತ್ಯ ಬೆಂಬಲ ನೀಡಬೇಕು.
ಸಂತ್ರಸ್ತೆ ಮಗುವಿನ ಆರೈಕೆ ಮಾಡಲು ಆಗದಿದ್ದರೆ ಮತ್ತು ಆಕೆಯ ಕುಟುಂಬ ಅದನ್ನು ಸ್ವೀಕರಿಸಲು ಒಪ್ಪದಿದ್ದರೆ ಮಗುವನ್ನು ರಾಜ್ಯ ಸರ್ಕಾರವು ಬಾಲಾಪರಾಧಿ ಕೇಂದ್ರದಲ್ಲಿಟ್ಟು ಆರೈಕೆ ಮಾಡಬೇಕು.
ಮಗು ಜನಿಸಿದ ಒಂದು ವರ್ಷದ ಒಳಗೆ ದತ್ತು ನೀಡುವಂತಿಲ್ಲ.
ಸಂತ್ರಸ್ತರ ಪರಿಹಾರ ಕಾಯಿದೆಯ ಅನ್ವಯ ಹೆಚ್ಚುವರಿ ಪರಿಹಾರದ ಜೊತೆಗೆ ರಾಜ್ಯ ಸರ್ಕಾರವು ಸಂತ್ರಸ್ತೆ ಮತ್ತು ಮಗುವಿಗೆ ಸಮರ್ಪಕವಾಗಿ ಪರಿಹಾರ ನೀಡಬೇಕು.
ಪೋಕ್ಸೊ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ತುರ್ತಾಗಿ ಕ್ರಮಕೈಗೊಳ್ಳಲಾಗುತ್ತಿದೆಯೇ ಎಂಬುದನ್ನು ರಾಜ್ಯ ಸರ್ಕಾರ ಖಾತರಿಪಡಿಸಿಕೊಳ್ಳಬೇಕು. ಅಗತ್ಯ ಕ್ರಮಕೈಗೊಳ್ಳಲು ವಿಫಲವಾದರೆ ದಂಡ ವಿಧಿಸಲಾಗುವುದು.
ಸದರಿ ಪ್ರಕರಣದಲ್ಲಿ ಸಂತ್ರಸ್ತೆಯ ಬೌದ್ಧಿಕ ಮತ್ತು ದೈಹಿಕ ದೌರ್ಬಲ್ಯವನ್ನು ಪರಿಗಣಿಸಿ, ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ 16 ವಾರಗಳ ಗರ್ಭಿಣಿ ಎಂಬ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಕುರಿತು ನ್ಯಾ. ಬಿಸ್ವನಾಥ್ ರಥ್ ಹೀಗೆ ಹೇಳಿದ್ದಾರೆ.
“1971ರ ಕಾಯಿದೆಯ ನಿಬಂಧನೆಗಳ ಅನ್ವಯ ಸರಿಯಾದ ರೀತಿಯಲ್ಲಿ ಆರೈಕೆ ಮಾಡಿದ್ದರೆ ಆ ಸಂದರ್ಭದಲ್ಲಿ 16 ವಾರಗಳಾಗಿದ್ದರಿಂದ ಅನವಶ್ಯಕವಾದ ಗರ್ಭಧಾರಣೆಯನ್ನು ತಪ್ಪಿಸಬಹುದಿತ್ತು. ಸರ್ಕಾರದ ನಿರ್ಲಕ್ಷ್ಯಕ್ಕೆ ಉದ್ದೇಶಪೂರ್ವಕವಲ್ಲದ ಅಥವಾ ಅಸಡ್ಡೆಯಲ್ಲದಿದ್ದರೂ ಜೀವನಪರ್ಯಂತ ಸಂತ್ರಸ್ತೆ ಮತ್ತು ಮಗು ಅಸಾಮಾನ್ಯವಾದ ಮಾನಸಿಕ ಮತ್ತು ಸಾಮಾಜಿಕ ವೇದನೆಯನ್ನು ಅನುಭವಿಸಬೇಕಿದೆ. ಸಂತ್ರಸ್ತೆಯ ಮಾನಸಿಕ ಸ್ಥಿತಿ ಮತ್ತು ಅವಿವಾಹಿತ ಅತ್ಯಾಚಾರ ಸಂತ್ರಸ್ತೆ ಗರ್ಭಧರಿಸಿರುವ ಕುರಿತು ಸಂತ್ರಸ್ತೆಯ ತಾಯಿಯ ಬಳಿ ಸರ್ಕಾರಿ ಅಧಿಕಾರಿಗಳು ವಿಚಾರಿಸಲು ಅವರನ್ನು ಯಾರೂ ತಡೆದಿರಲಿಲ್ಲ” ಎಂದು ನ್ಯಾಯಪೀಠ ಹೇಳಿದೆ.
ಇದರ ಜೊತೆಗೆ ಸಂತ್ರಸ್ತೆ ಹಾಗೂ ಇನ್ನಷ್ಟೇ ಜನಿಸಬೇಕಿರುವ ಮಗುವಿನ ರಕ್ಷಣೆಯ ಕುರಿತು ನ್ಯಾಯಾಲಯವು ಕೆಳಗಿನ ನಿರ್ದೇಶನಗಳನ್ನು ಹೊರಡಿಸಿದೆ.
ವೈದ್ಯಕೀಯ ಸೌಲಭ್ಯ, ವಸತಿ, ಸಾರಿಗೆ ವೆಚ್ಚವನ್ನು ಸರ್ಕಾರ ಭರಿಸಬೇಕು.
ಅರ್ಜಿದಾರ ಹಾಗೂ ಆಕೆಯ ಪತಿ ಕೂಲಿಕಾರ್ಮಿಕರಾಗಿದ್ದು, ಅವರಿಗೆ ಸರ್ಕಾರವು ನೆರವು ನೀಡಬೇಕು.
ಮಗುವಿನ ಪೌಷ್ಟಿಕತೆ ಮತ್ತು ಶೈಕ್ಷಣಿಕ ಅವಶ್ಯಕತೆಗಳ ಜವಾಬ್ದಾರಿಯನ್ನು ಸರ್ಕಾರ ನಿಭಾಯಿಸಬೇಕು.
ಮಹಿಳೆಯ ಜೀವನೋಪಾಯಕ್ಕಾಗಿ ₹5 ಲಕ್ಷವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇಡಬೇಕು. ಈ ಖಾತೆಯನ್ನು ಅರ್ಜಿದಾರರ ತಾಯಿ ನಿರ್ವಹಿಸಬೇಕು.
ಗಂಡು ಮಗುವಿಗೆ ಜನನ ನೀಡಿದರೆ ₹3 ಲಕ್ಷ, ಹೆಣ್ಣು ಮಗು ಜನಿಸಿದರೆ ₹5 ಲಕ್ಷ ನೀಡಬೇಕು. ಈ ಹಣವನ್ನೂ ಮಗುವಿನ ಹೆಸರಿನಲ್ಲಿ ನಿಶ್ಚಿತ ಠೇವಣಿ ಇಡಬೇಕು. ಇದನ್ನು ಮಗುವಿನ ಶ್ರೇಯೋಭಿವೃದ್ಧಿಗೆ ಬಳಸಲು ಅರ್ಜಿದಾರರಿಗೆ ಅವಕಾಶ ಮಾಡಬೇಕು.
ಹಣಕಾಸನ್ನು ಅರ್ಜಿದಾರರ ತಾಯಿ ದುರ್ಬಳಕೆ ಮಾಡಿಕೊಳ್ಳದಂತೆ ನಿಗಾ ಇಡುವ ಜವಾಬ್ದಾರಿಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೀಡಬೇಕು.
ಈ ಮೂಲಕ ಭಾಗಶಃ ಮೇಲ್ಮನವಿಗೆ ನ್ಯಾಯಾಲಯ ಒಪ್ಪಿಗೆ ನೀಡಿತು. ನ್ಯಾ. ರಥ್ ಅವರು ಸಹಾಯಕ್ಕಾಗಿ ಮೊರೆ ಇಟ್ಟಿದ್ದ ಮಹಿಳೆಯ ಪರವಾಗಿ ವಾದಿಸಿದ ವಕೀಲರನ್ನು ಶ್ಲಾಘಿಸಿದರು. ಅರ್ಜಿದಾರರನ್ನು ಸುಭಾಷ್ ಚಂದ್ರ ಪುಷ್ಪಲಕಾ, ಎ ಕೆ ತರೈ, ಟಿ ಪ್ರಿಯದರ್ಶಿನಿ ಮತ್ತು ಟಿ ಬಾರಿಕ್ ಪ್ರತಿನಿಧಿಸಿದ್ದರು. ರಾಜ್ಯ ಸರ್ಕಾರವನ್ನು ಹೆಚ್ಚುವರಿ ಸಲಹಾ ವಕೀಲ ಬಿ ಆರ್ ಬೆಹರಾ ಮತ್ತು ಸರ್ಕಾರಿ ವಕೀಲ ಜ್ಯೋತಿ ಪ್ರಕಾಶ್ ಪ್ರತಿನಿಧಿಸಿದ್ದರು.