
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರ ಮಾರಣಹೋಮ ನಡೆದಿರುವುದು ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿದೆ.
ಎರಡೂ ದೇಶಗಳ ನಡುವಿನ ಸಂಬಂಧಗಳು ವರ್ಷಗಳಿಂದ ಹದಗೆಟ್ಟಿದ್ದರೂ, ಇತ್ತೀಚಿನ ಭಯೋತ್ಪಾದಕ ದಾಳಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಪಾಕಿಸ್ತಾನ ತೆಗೆದುಕೊಂಡ ಕ್ರಮಗಳಲ್ಲಿ 1972ರ ಶಿಮ್ಲಾ ಒಪ್ಪಂದವನ್ನು ಅಮಾನತುಗೊಳಿಸುವುದು ಒಂದು.
ಎರಡೂ ನೆರೆಯ ರಾಷ್ಟ್ರಗಳ ನಡುವೆ ದುರ್ಬಲಗೊಳ್ಳುತ್ತಿದ್ದ ಶಾಂತಿಯನ್ನು ಹಿಡಿದಿಡಲು ಯತ್ನಿಸಿದ ಈ 53 ವರ್ಷಗಳ ಪ್ರಾಯದ ದಾಖಲೆ ಯಾವುದು? ಭಾರತ ಮತ್ತು ಪಾಕಿಸ್ತಾನ ಈ ಒಪ್ಪಂದಕ್ಕೆ ಸಹಿ ಹಾಕಿದ್ದು ಏಕೆ ಮತ್ತು ಅದು ರದ್ದಾದರೆ ದ್ವಿಪಕ್ಷೀಯ ಸಂಬಂಧಗಳ ಮೇಲೆ ಉಂಟಾಗುವ ಪರಿಣಾಮ ಎಂತಹುದು ಎಂಬುದರ ಕುರಿತಾದ ವಿವರಗಳು ಇಲ್ಲಿವೆ:
ಶಿಮ್ಲಾ ಒಪ್ಪಂದ ಎಂದರೇನು?
ಶಿಮ್ಲಾ ಒಪ್ಪಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಒಪ್ಪಂದವಾಗಿದ್ದು, ಜುಲೈ 2, 1972 ರಂದು ಶಿಮ್ಲಾದಲ್ಲಿ ಆಗಿನ ಭಾರತದ ಪ್ರಧಾನಿ ಇಂದಿರಾ ಗಾಂಧಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಜುಲ್ಫಿಕರ್ ಅಲಿ ಭುಟ್ಟೋ ಅವರು ಸಹಿ ಹಾಕಿದರು.
ಭಾರತದಿಂದ ಪಾಕಿಸ್ತಾನವು ಅತ್ಯಂತ ಕೆಟ್ಟ ಸೋಲನುಭವಿಸಿ, ಪಾಕಿಸ್ತಾನ ಎರಡು ಭಾಗಗಳಾಗಿ ವಿಭಜನೆಯಾದ ಕೆಲವೇ ತಿಂಗಳುಗಳ ನಂತರ ಒಪ್ಪಂದ ಜಾರಿಗೆ ಬಂದಿತ್ತು. ಎರಡೂ ದೇಶಗಳ ನಡುವಿನ 13 ದಿನಗಳ ಪೂರ್ಣ ಪ್ರಮಾಣದ ಯುದ್ಧದಿಂದಾಗಿ ಬಾಂಗ್ಲಾದೇಶ ಉದಯವಾಗಿ 90,000ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಶರಣಾಗಿದ್ದರು.
"ಇಲ್ಲಿಯವರೆಗೆ ತಮ್ಮ ಸಂಬಂಧ ಹಾಳುಮಾಡಿರುವ ಸಂಘರ್ಷ ಮತ್ತು ವೈರತ್ವ ಕೊನೆಗೊಳಿಸಲು ಸ್ನೇಹಪರ ಮತ್ತು ಸಾಮರಸ್ಯದ ಸಂಬಂಧವನ್ನು ಉತ್ತೇಜಿಸಲು ಹಾಗೂ ಉಪಖಂಡದಲ್ಲಿ ಶಾಶ್ವತ ಶಾಂತಿ ಸ್ಥಾಪಿಸಲು ಕೆಲಸ ಮಾಡಲು ಭಾರತ ಮತ್ತು ಪಾಕಿಸ್ತಾನ ನಿರ್ಧರಿಸಿದ್ದು ಇದರಿಂದಾಗಿ ಎರಡೂ ದೇಶಗಳು ಇನ್ನು ಮುಂದೆ ತಮ್ಮ ಸಂಪನ್ಮೂಲ ಮತ್ತು ಶಕ್ತಿಯನ್ನು ಜನರ ಕಲ್ಯಾಣದ ತುರ್ತು ಕಾರ್ಯಕ್ಕೆ ವಿನಿಯೋಗಿಸಬಹುದು" ಎಂದು ಒಪ್ಪಂದ ಹೇಳುತ್ತದೆ.
ಪ್ರಧಾನಿ ಇಂದಿರಾ ಗಾಂಧಿ ಈ ಒಪ್ಪಂದವನ್ನು ಭಾರತ-ಪಾಕ್ ಸಂಬಂಧಗಳಲ್ಲಿ "ಬಹಳ ಮುಖ್ಯವಾದ ನಾಂದಿ" ಎಂದು ಕರೆದಿದ್ದರು. 1972 ರಿಂದ, ಈ ಮೂರು ಪುಟಗಳ ದಾಖಲೆ ಭಾರತ-ಪಾಕ್ ದ್ವಿಪಕ್ಷೀಯ ಸಂಬಂಧಗಳಿಗೆ ಮಾರ್ಗದರ್ಶನ ನೀಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕಳೆದ ಐದು ದಶಕಗಳಲ್ಲಿ ಒಪ್ಪಂದವನ್ನು ಉಲ್ಲಂಘಿಸುತ್ತಲೇ ಬರಲಾಗಿದೆ.
ಒಪ್ಪಂದದಿಂದ ಆದ ಬದಲಾವಣೆ ಏನು?
ಒಪ್ಪಂದದ ಭಾಗವಾಗಿ, ಬಾಂಗ್ಲಾದೇಶ ಯುದ್ಧದ ಸಮಯದಲ್ಲಿ ಅಂತರರಾಷ್ಟ್ರೀಯ ಗಡಿ ದಾಟಿದ್ದ ತಮ್ಮ ಯೋಧರನ್ನು ವಾಪಸ್ ಕರೆಸಿಕೊಳ್ಳಲು ಭಾರತ ಮತ್ತು ಪಾಕಿಸ್ತಾನ ಒಪ್ಪಿಕೊಂಡವು. ಪರಸ್ಪರರ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಗೌರವಿಸುವುದಾಗಿ ಮತ್ತು ಇನ್ನೊಂದು ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದೆ ಇರುವುದಾಗಿ ಪ್ರತಿಜ್ಞೆ ಮಾಡಿದವು.
ಜಮ್ಮು ಕಾಶ್ಮೀರದಲ್ಲಿ, ಡಿಸೆಂಬರ್ 17, 1971 ರ ಕದನ ವಿರಾಮ ರೇಖೆಯನ್ನು ನಿಯಂತ್ರಣ ರೇಖೆ (LOC) ಎಂದು ಘೋಷಿಸಲಾಯಿತು ಮತ್ತು ಎರಡೂ ದೇಶಗಳು "ಎರಡೂ ಕಡೆಯ ಮಾನ್ಯತೆ ಪಡೆದ ಸ್ಥಾನಕ್ಕೆ ಪೂರ್ವಾಗ್ರಹವಿಲ್ಲದೆ" ಅದನ್ನು ಗೌರವಿಸಲು ಒಪ್ಪಿಕೊಂಡವು.
"ಪರಸ್ಪರ ಭಿನ್ನಾಭಿಪ್ರಾಯಗಳು ಮತ್ತು ಕಾನೂನು ವ್ಯಾಖ್ಯಾನಗಳನ್ನು ಲೆಕ್ಕಿಸದೆ, ಎರಡೂ ಕಡೆಯವರು ಏಕಪಕ್ಷೀಯವಾಗಿ ನಿಯಂತ್ರಣ ರೇಖೆಯನ್ನು ಬದಲಾಯಿಸಲು ಪ್ರಯತ್ನಿಸಬಾರದು. ಈ ರೇಖೆಯನ್ನು ಉಲ್ಲಂಘಿಸುವ ಬೆದರಿಕೆ ಅಥವಾ ಬಲಪ್ರಯೋಗದಿಂದ ದೂರವಿರಲು ಎರಡೂ ಕಡೆಯವರು ಮತ್ತಷ್ಟು ಕ್ರಮ ಕೈಗೊಳ್ಳಬೇಕು" ಎಂದು ಒಪ್ಪಂದ ಹೇಳುತ್ತದೆ.
ಸಂಬಂಧಗಳನ್ನು ಹದಗೊಳಿಸಲು ಭಾರತ ಮತ್ತು ಪಾಕಿಸ್ತಾನ ವ್ಯಾಪಾರ, ಗಡಿ ಕೇಂದ್ರಗಳನ್ನು ತೆರೆಯಲು ಮತ್ತು ಪ್ರಯಾಣ ಸೌಲಭ್ಯಗಳನ್ನು ಉತ್ತೇಜಿಸಲು ನಿರ್ಧರಿಸಿದವು. ಆದರೂ, ಪಹಲ್ಗಾಮ್ ದಾಳಿಯ ನಂತರ, ಗಡಿ ಮುಚ್ಚಲಾಗಿದ್ದು, ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿದ್ದು ಪಾಕಿಸ್ತಾನಿಯರು ಭಾರತ ತೊರೆಯುವಂತೆ ಸೂಚಿಸಲಾಗಿದೆ.
ಎರಡೂ ದೇಶಗಳು "ದ್ವಿಪಕ್ಷೀಯ ಮಾತುಕತೆಗಳ ಮೂಲಕ ಶಾಂತಿಯುತ ವಿಧಾನಗಳಿಂದ ಅಥವಾ ಪರಸ್ಪರ ಒಪ್ಪಿಗೆಯಾದ ಯಾವುದೇ ಇತರ ಶಾಂತಿಯುತ ವಿಧಾನಗಳಿಂದ" ತಮ್ಮ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ನಿರ್ಧರಿಸಿದ್ದವು. ಒಪ್ಪಂದದಲ್ಲಿನ ಇತರ ಭರವಸೆ ಹೊರತುಪಡಿಸಿ, ಈ ಭರವಸೆಗಳನ್ನು ಇದೀಗ ಅಮಾನತುಗೊಳಿಸಲಾಗಿದೆ.
ಮುಂದೇನು?
ಶಿಮ್ಲಾ ಒಪ್ಪಂದ ಭಾರತ ಮತ್ತು ಪಾಕಿಸ್ತಾನಗಳು ಪರಸ್ಪರ ಮಾಡಿಕೊಂಡ ರಾಜಕೀಯ ಬದ್ಧತೆಯಾಗಿದ್ದು, ಅದನ್ನು ಕಾನೂನುಬದ್ಧವಾಗಿ ಜಾರಿಗೊಳಿಸಲು ಯಾವುದೇ ಕಾರ್ಯವಿಧಾನ ಇಲ್ಲ. ಬಹುತೇಕ ಅದು ಜಾರಿಯಲ್ಲಿರುವುದು ಎರಡೂ ಕಡೆಯ ರಾಜಕೀಯ ಸದ್ಭಾವನೆಯನ್ನು ಅವಲಂಬಿಸಿದೆ.
ಕಾಶ್ಮೀರ ದ್ವಿಪಕ್ಷೀಯ ವಿಷಯವಾಗಿದ್ದು, ವಿಶ್ವಸಂಸ್ಥೆ ಅಥವಾ ಯಾವುದೇ ಇತರ ದೇಶದಂತಹ ಮೂರನೇ ವ್ಯಕ್ತಿಯ ಒಳಗೊಳ್ಳುವಿಕೆಯ ಅಗತ್ಯವಿಲ್ಲ ಎಂದು ವಾದಿಸಲು ಭಾರತ ಶಿಮ್ಲಾ ಒಪ್ಪಂದವನ್ನು ಉಲ್ಲೇಖಿಸಿದೆ.
ಆದರೂ, ಪಾಕಿಸ್ತಾನದ ಈ ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರ ಎರಡೂ ದೇಶಗಳ ರಾಜತಾಂತ್ರಿಕ ಸಂಬಂಧಗಳಲ್ಲಿ ಉಂಟಾದ ಹೊಸ ಬಿರುಕನ್ನು ಸೂಚಿಸುತ್ತಿದ್ದು ಭವಿಷ್ಯದಲ್ಲಿ ಈ ಒಪ್ಪಂದ ಮರುಜಾರಿಯಾಗಲಿದೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.