ಹಿಂದೂ ದೇವಾಲಯದ ಮೇಲೆ ದಾಳಿ: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪಾಕಿಸ್ತಾನ ಸುಪ್ರೀಂಕೋರ್ಟ್

ಸ್ಥಳೀಯ ಮದರಸಾದಲ್ಲಿ ಮೂತ್ರ ವಿಸರ್ಜಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಒಂಬತ್ತು ವರ್ಷದ ಹಿಂದೂ ಹುಡುಗನಿಗೆ ಜಾಮೀನು ನೀಡಿದ್ದು, ಪಾಕಿಸ್ತಾನದ ರಹೀಮ್ ಯಾರ್ ಖಾನ್‌ ಭೋಂಗ್ ಹಳ್ಳಿಯ ದೇಗುಲದ ಮೇಲೆ ದಾಳಿ ನಡೆಸಲು ಕಾರಣವಾಗಿತ್ತು.
ಹಿಂದೂ ದೇವಾಲಯದ ಮೇಲೆ ದಾಳಿ: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪಾಕಿಸ್ತಾನ ಸುಪ್ರೀಂಕೋರ್ಟ್
Published on

ಪಾಕಿಸ್ತಾನದ ರಹೀಮ್ ಯಾರ್ ಖಾನ್ ಭೋಂಗ್ ಹಳ್ಳಿಯ ಹಿಂದೂ ದೇವಾಲಯದ ಮೇಲೆ ನಡೆದ ದಾಳಿ ಸಂಬಂಧ ಪಾಕಿಸ್ತಾನ ಸರ್ವೋಚ್ಚ ನ್ಯಾಯಾಲಯ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ಘಟನೆಯ ಕುರಿತಂತೆ ರಾಷ್ಟ್ರೀಯ ಸಂಸತ್‌ನ ಸದಸ್ಯ ಮತ್ತು ಹಿಂದೂ ಪರಿಷತ್ತಿನ ಮಹಾ ಪೋಷಕರಾದ ಡಾ. ರಮೇಶ್‌ ಕುಮಾರ್‌ ಅವರು ಪಾಕಿಸ್ತಾನ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಅವರನ್ನು ಆಗಸ್ಟ್‌ 5ರಂದು ಭೇಟಿಯಾಗಿ ಅವರ ಗಮನ ಸೆಳೆದಿದ್ದರು. ಭೇಟಿಯ ವೇಳೆ ಮುಖ್ಯ ನ್ಯಾಯಮೂರ್ತಿಗಳು ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು ಎಂದು ಈ ಕುರಿತು ಬಿಡುಗಡೆ ಮಾಡಲಾದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ನ್ಯಾಯಾಲಯ ಆಗಸ್ಟ್ 6ಕ್ಕೆ ಪ್ರಕರಣದ ವಿಚಾರಣೆ ನಿಗದಿಪಡಿಸಿತ್ತು. ಈ ವೇಳೆ, ವರದಿಯೊಂದಿಗೆ ಹಾಜರಾಗುವಂತೆ ಅಲ್ಲಿನ ಪಂಜಾಬ್‌ ಪ್ರಾಂತ್ಯದ ಮುಖ್ಯ ಕಾರ್ಯದರ್ಶಿ ಮತ್ತು ಐಜಿಪಿ ಅವರಿಗೆ ಸೂಚಿಸಿತ್ತು.

Also Read
ಧಾರ್ಮಿಕ ಕೇಂದ್ರಗಳಿಗೆ ತೆರಳಲು ಅವಕಾಶವಿರುವಾಗ ಮತಗಟ್ಟೆಗೆ ತೆರಳಲು ಏಕೆ ನಿರ್ಬಂಧ: ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನೆ

ದಾಳಿ ತಡೆಯಲು ವಿಫಲರಾದ ಕರ್ತವ್ಯ ನಿರತ ಪೊಲೀಸ್‌ ಅಧಿಕಾರಿಗಳನ್ನು ಆಗಸ್ಟ್ 6 ರಂದು ನಡೆದ ವಿಚಾರಣೆ ವೇಳೆ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು. ಆಗ ಮಧ್ಯಪ್ರವೇಶಿಸಿದ ಹೆಚ್ಚುವರಿ ಅಟಾರ್ನಿ ಜನರಲ್ ಸೊಹೈಲ್ ಮಹಮೂದ್ ಪ್ರಧಾನಿ ಇಮ್ರಾನ್ ಖಾನ್ ಘಟನೆಯನ್ನು ಬಲವಾಗಿ ಖಂಡಿಸಿದ್ದಾರೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ ಎಂದು ವಿವರಿಸಿದರು.

ಆದರೆ ಕಾನೂನಿನ ಅಂಶಗಳ ಮೇಲೆ ಪ್ರಕರಣದ ವಿಚಾರಣೆ ಮುಂದುವರೆಸಲಿರುವ ನ್ಯಾಯಾಲಯ ಆಗಸ್ಟ್ 13ಕ್ಕೆ ವಿಚಾರಣೆ ಮುಂದೂಡಿದೆ.

ಪಿಟಿಐ ಪ್ರಕಾರ, ಸ್ಥಳೀಯ ಮದರಸಾದಲ್ಲಿ ಮೂತ್ರ ವಿಸರ್ಜಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಒಂಬತ್ತು ವರ್ಷದ ಹಿಂದೂ ಹುಡುಗನಿಗೆ ಜಾಮೀನು ನೀಡಲಾಗಿತ್ತು. ಘಟನೆಯಿಂದ ಉದ್ರಿಕ್ತರಾದ ಸ್ಥಳೀಯರು ಪಾಕಿಸ್ತಾನದ ರಹೀಮ್‌ ಯಾರ್‌ ಖಾನ್‌ನ ಭೋಂಗ್‌ ಹಳ್ಳಿಯ ದೇಗುಲದ ಮೇಲೆ ದಾಳಿ ನಡೆಸಿ ಹಾನಿ ಮಾಡಿದ್ದರು.

Kannada Bar & Bench
kannada.barandbench.com