ಸ್ಥಳೀಯ ಸಂಸ್ಥೆಗಳ ಎಲ್ಲಾ ನಿಗದಿತ ಚುನಾವಣೆಗಳನ್ನು ಡಿಸೆಂಬರ್ 31ರವರೆಗೆ ಮುಂದೂಡಿರುವ ರಾಜ್ಯ ಸಂಪುಟ ಸಭೆಯ ನಿರ್ಧಾರವನ್ನು ಸಮರ್ಥಿಸಿ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಬುಧವಾರ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಜಿಲ್ಲಾ, ತಾಲ್ಲೂಕು ಮತ್ತು ಇತರೆ ಮಹಾನಗರ ಪಾಲಿಕೆ ಚುನಾವಣೆಗಳನ್ನು ಮುಂದೂಡುವ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡುವ ಕುರಿತು ಮೇ 17ರಂದು ಸಂಪುಟ ಸಭೆಯು ನಿರ್ಣಯ ಕೈಗೊಂಡಿತ್ತು.
ಈಗಾಗಲೇ ವಿಳಂಬವಾಗಿರುವ ಚುನಾವಣೆಯನ್ನು ಮುಂದೂಡಲು ಸಂಪುಟ ಸಭೆಯ ನಿರ್ಣಯವು ರಾಜ್ಯ ಚುನಾವಣಾ ಆಯೋಗಕ್ಕೆ ಕಟ್ಟಳೆಯಾಗದು ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಹೇಳಿದೆ. “ಧಾರ್ಮಿಕ ಕೇಂದ್ರಗಳಿಗೆ ತೆರಳಲು ಜನರಿಗೆ ಅವಕಾಶ ಮಾಡಿಕೊಟ್ಟಿರುವಾಗ ಮತಗಟ್ಟೆಗೆ ಭೇಟಿ ನೀಡಲು ನಿರ್ಬಂಧ ಏಕೆ” ಎಂದು ಸರ್ಕಾರದ ಪರ ವಕೀಲರಿಗೆ ಪೀಠ ಪ್ರಶ್ನೆ ಹಾಕಿತು.
ಭಾರತ ಸಂವಿಧಾನದ 243 (ಯು) ಕಲಂ (3)ರ ಪ್ರಕಾರ ಚುನಾವಣೆಗಳನ್ನು ನಡೆಸಲಾಗುತ್ತಿಲ್ಲ ಎಂದು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣದ ವಿಚಾರಣೆಯನ್ನು ಪೀಠ ನಡೆಸಿತು. ಸಂಪುಟ ಸಭೆಯ ನಿರ್ಣಯದ ನಂತರ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸಿದೆ. ಸಾಂಕ್ರಾಮಿಕದ ಸಂದರ್ಭದಲ್ಲೇ ವಿಧಾನ ಸಭೆ ಚುನಾವಣೆಗಳನ್ನು ನಡೆಸಲಾಗಿದೆ ಎಂದು ಪೀಠವು ಬೆರಳು ಮಾಡಿತು.
ರಾಜ್ಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “ಜುಲೈ 28ರಂದು ಚುನಾವಣೆ ನಡೆಸುವ ಸಂಬಂಧ ಸಭೆ ನಡೆಸಲಾಗಿದೆ. ಬೆಳಗಾವಿ, ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ದೊಡ್ಡಬಳ್ಳಾಪುರ ಮತ್ತು ತರೀಕೆರೆ ನಗರ ಸಭೆಗಳಿಗೆ ಚುನಾವಣಾ ನಡೆಸುವ ಸಂಬಂಧ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಹೇಳಿದರು.
ಪ್ರಕರಣದ ವಿಚಾರಣೆಯನ್ನು ಆಗಸ್ಟ್ 13ಕ್ಕೆ ಮುಂದೂಡಲಾಯಿತು.