ಮತದಾರರಿಗೆ ಇರುವ ಚುನಾಯಿಸುವ ಹಕ್ಕನ್ನು ಅವಿರೋಧ ಆಯ್ಕೆ ಕಸಿದುಕೊಳ್ಳಲಿದ್ದು, ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಉದ್ದೇಶಿಸಿರುವ ಭಂಗೋರ್ ಜಿಲ್ಲೆಯ ಅಭ್ಯರ್ಥಿಗಳ ಹೆಸರನ್ನು ಅಂತಿಮ ಪಟ್ಟಿಯಿಂದ ಏಕಾಏಕಿ ತೆಗೆದುಹಾಕಲಾಗಿದೆ ಎಂಬ ಆರೋಪ ಕುರಿತು ಪರಿಶೀಲಿಸುವಂತೆ ಪಶ್ಚಿಮ ಬಂಗಾಳ ರಾಜ್ಯ ಚುನಾವಣಾ ಆಯೋಗಕ್ಕೆ (ಎಸ್‌ಇಸಿ) ಕಲ್ಕತ್ತಾ ಹೈಕೋರ್ಟ್ ಸೋಮವಾರ ಆದೇಶಿಸಿದೆ [ಬೆಶಾಕ ಮೊಂಡಲ್ ಮತ್ತಿತರರು ಹಾಗೂ ಪಶ್ಚಿಮ ಬಂಗಾಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಭಾರತವು ಪ್ರಜಾಪ್ರಭುತ್ವ ಹೊಂದಿರುವ ದೇಶವಾಗಿರುವುದರಿಂದ ಜನರಿಗೆ ತಾವು ಬಯಸಿದ ಪ್ರತಿನಿಧಿ ಅಥವಾ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಹಕ್ಕು ಇದೆ ಎಂದು ನ್ಯಾಯಮೂರ್ತಿ ಅಮೃತಾ ಸಿನ್ಹಾ ಒತ್ತಿ ಹೇಳಿದರು. ಚುನಾವಣಾ ಸ್ಪರ್ಧೆಯಲ್ಲಿ ಯಾವುದೇ ಪ್ರತಿಸ್ಪರ್ಧಿ ಅಭ್ಯರ್ಥಿ ಇಲ್ಲವೆಂದಾದರೆ ಆಗ "ಎಲ್ಲವೂ ಸರಿ ಇಲ್ಲ" ಎಂದು ಅರ್ಥ ಎಂಬುದಾಗಿ ಅವರು ತಿಳಿಸಿದರು.
“ಅವಿರೋಧ ಆಯ್ಕೆಯಾಗುವುದು ಮತದಾರರಿಗೆ ಇರುವ ಚುನಾಯಿಸುವ ಹಕ್ಕನ್ನು ಕಸಿದುಕೊಳ್ಳುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತ ಅಭ್ಯರ್ಥಿ ಇದ್ದರೂ, ಸ್ಪರ್ಧಿಸಲು ನಿರಾಕರಿಸಿರುವುದು, (ಚುನಾವಣಾ) ಪ್ರಕ್ರಿಯೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ತೋರಿಸುತ್ತದೆ. ಪ್ರಕ್ರಿಯೆಯಲ್ಲಿನ ಲೋಪದೋಷಗಳನ್ನು ತಕ್ಷಣವೇ ಪರಿಹರಿಸುವ ಅಗತ್ಯವಿದೆ ಎನ್ನುವುದನ್ನು ಸೂಚಿಸುತ್ತದೆ. ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕಾಗಿ ಎಲ್ಲಾ ಉದ್ದೇಶಿತ ಅಭ್ಯರ್ಥಿಗಳು ಮತದಾರರಿಗೆ ಎದುರಾಗುವ ಅವಕಾಶವನ್ನು ಕಲ್ಪಿಸಬೇಕು,” ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.
ಅಧಿಕಾರದಲ್ಲಿರುವವರು ಅಧಿಕಾರ ವಂಚಿತರಾಗದಂತೆ ಜನರನ್ನು ಆಳಲು ಒಲವು ಹೊಂದಿರುತ್ತಾರೆ. ಆದರೆ ಸ್ಪರ್ಧೆ ಬಯಸಿರುವ ಅಭ್ಯರ್ಥಿಯ ಎದುರು ಹಣಾಹಣಿ ಇಲ್ಲದೆಯೇ ಅಭ್ಯರ್ಥಿಯೊಬ್ಬ, ಗೆಲ್ಲಲು ಅನುಮತಿಸಬಾರದು” ಎಂದು ಕೂಡ ನ್ಯಾಯಾಲಯ ನುಡಿದಿದೆ.
ಅಭ್ಯರ್ಥಿಯನ್ನು ಬಲವಂತವಾಗಿ ತಡೆಯುವ, ಬೆದರಿಕೆ ಹಾಕುವ ಹಾಗೂ ಸಕಾಲದಲ್ಲಿ ನಾಮಪತ್ರ ಸಲ್ಲಿಸದಂತೆ ನಿರ್ಬಂಧಿಸುವಂತಹ ಹಿಂದೆಂದೂ ಕೇಳರಿಯದ ಸ್ಥಿತಿಗೆ ಹೈಕೋರ್ಟ್ ಮುಖಾಮುಖಿಯಾಗಿದೆ ಎಂದು ನ್ಯಾ. ಸಿನ್ಹಾ ತಿಳಿಸಿದ್ದಾರೆ.
ಅವಿರೋಧವಾಗಿ ಗೆಲ್ಲುವುದು ವಿಶ್ವಸನೀಯವಲ್ಲ ಎಂಬ ಕಾರಣಕ್ಕೆ ಅಭ್ಯರ್ಥಿಗಳು ಚುನಾವಣೆ ಎದುರಿಸಲು ಸಿದ್ಧರಾಗಿರಬೇಕು. (ಚುನಾವಣಾ) ಆಯೋಗ ತಟಸ್ಥ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಿದ್ದು ಪಕ್ಷಪಾತದಿಂದ ನಡೆದುಕೊಳ್ಳಬಾರದು… ಅಷ್ಟಕ್ಕೂ ಯಾವುದೇ ವ್ಯಕ್ತಿಗೆ ಅವಿರೋಧವಾಗಿ ಆಯ್ಕೆಯಾಗುವ ಹಕ್ಕು ಇಲ್ಲ. ಅಭ್ಯರ್ಥಿಯೊಬ್ಬರು ನಾಮಪತ್ರ ಸಲ್ಲಿಸುತ್ತಿದ್ದಂತೆ ಅವರು ನಿರ್ದಿಷ್ಟ ಸ್ಥಾನಕ್ಕೆ ಒಬ್ಬರು ಇಲ್ಲವೇ ಹೆಚ್ಚಿನ ಅಭ್ಯರ್ಥಿಗಳ ವಿರುದ್ಧ ತಾವು ಸ್ಪರ್ಧಿಸಬೇಕು ಎಂದು ತಿಳಿದಿರುತ್ತಾರೆ ಎಂಬುದಾಗಿ ನ್ಯಾಯಾಲಯ ಹೇಳಿದೆ.
ನಾಮಪತ್ರ ಸಲ್ಲಿಸಲು ಹೋಗುವಾಗ ಹಿಂಸಾಚಾರ ಎದುರಿಸಿದ್ದೇವೆ. ರಾಜ್ಯದ ಆಡಳಿತಾರೂಢ ರಾಜಕೀಯ ಪಕ್ಷದ (ತೃಣಮೂಲ ಕಾಂಗ್ರೆಸ್ ಪಕ್ಷ) ಏಜೆಂಟರು ಸೃಷ್ಟಿಸಿದ ಗದ್ದಲದಿಂದಾಗಿ ನಾಮಪತ್ರ ಸಲ್ಲಿಸುವಲ್ಲಿ ಸ್ವಲ್ಪ ವಿಳಂಬವಾಗಿದೆ ಎಂದು ನ್ಯಾಷನಲ್ ಸೆಕ್ಯುಲರ್ ಮಜ್ಲಿಸ್ ಪಾರ್ಟಿಗೆ (ಆರ್‌ಎಸ್‌ಎಂಪಿ) ಸೇರಿದ ಅರ್ಜಿದಾರರು ಮನವಿಯಲ್ಲಿ ವಿವರಿಸಲಾಗಿತ್ತು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]