ಪಂಚಮಸಾಲಿ ಮೀಸಲಾತಿ: ಆಯೋಗದ ಮಧ್ಯಂತರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ ಸರ್ಕಾರ

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು ಆಯೋಗದ ಮಧ್ಯಂತರ ವರದಿ ನೀಡುವಂತೆ ಕೋರಿದರು. ಆಗ ಸಿಜೆ ವರಾಳೆ “ಮೊದಲಿಗೆ ಮಧ್ಯಂತರ ನ್ಯಾಯಾಲಯ ಪರಿಶೀಲಿಸಬೇಕಿದೆ. ಅಗತ್ಯಬಿದ್ದರೆ ಅದನ್ನು ನಿಮಗೆ ನೀಡಲು ಅನುಮತಿಸುತ್ತೇವೆ” ಎಂದು ಮೌಖಿಕವಾಗಿ ಹೇಳಿದರು.
High Court of Karnataka
High Court of Karnataka

ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರ್ಪಡೆ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಈಚೆಗೆ ಸಲ್ಲಿಸಿರುವ ಮಧ್ಯಂತರ ವರದಿಯನ್ನು ರಾಜ್ಯ ಸರ್ಕಾರವು ಮುಚ್ಚಿದ ಲಕೋಟೆಯಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಶುಕ್ರವಾರ ಸಲ್ಲಿಸಿದೆ.

ಬೆಂಗಳೂರಿನ ಡಿ ಜಿ ರಾಘವೇಂದ್ರ ಅವರು ಹಿಂದುಳಿದ ವರ್ಗಗಳ ಪಟ್ಟಿಯ ಪರಿಷ್ಕರಣೆ ನಡೆಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಪೀಠದ ಮುಂದೆ ಹಾಜರಾದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ಹಿಂದುಳಿದ ವರ್ಗದ ಆಯೋಗವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ಮಧ್ಯಂತರ ವರದಿಯನ್ನು ಪೀಠಕ್ಕೆ ಒಪ್ಪಿಸಿದರು. ಅಲ್ಲದೇ, ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಇದನ್ನು ಪರಿಗಣಿಸಿದ ಪೀಠವು ಏಕಸದಸ್ಯ ಪೀಠವು 27.12.2022ರಂದು ಮಾಡಿರುವ ಆದೇಶದಂತೆ ಅಡ್ವೊಕೇಟ್‌ ಜನರಲ್‌ ಅವರು ಮಧ್ಯಂತರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದು, ಅದನ್ನು ಅಧಿಕೃತವಾಗಿ ದಾಖಲಿಸಲಾಗಿದೆ. ಮುಂದುವರಿದು, ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ಕೋರಿರುವುದಕ್ಕೆ ಅನುಮತಿಸಲಾಗಿದೆ ಎಂದು ಆದೇಶದಲ್ಲಿ ದಾಖಲಿಸಿ, ನ್ಯಾಯಾಲಯವು ವಿಚಾರಣೆ ಮುಂದೂಡಿತು.

Also Read
ಪಂಚಮಸಾಲಿ ಸಮುದಾಯ ಮೀಸಲಾತಿ ಪ್ರಕರಣ: ಯಥಾಸ್ಥಿತಿ ಕಾಪಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ ಹೈಕೋರ್ಟ್

ಈ ಸಂದರ್ಭದಲ್ಲಿ ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು ಆಯೋಗದ ಮಧ್ಯಂತರ ವರದಿಯನ್ನು ನೀಡುವಂತೆ ಕೋರಿದರು. ಆಗ ಮುಖ್ಯ ನ್ಯಾಯಮೂರ್ತಿ ವರಾಳೆ ಅವರು “ಮೊದಲಿಗೆ ಮಧ್ಯಂತರ ವರದಿಯನ್ನು ನ್ಯಾಯಾಲಯ ಪರಿಶೀಲಿಸಬೇಕಿದೆ. ಅಗತ್ಯಬಿದ್ದರೆ ಅದನ್ನು ನಿಮಗೆ ನೀಡಲು ಅನುಮತಿಸುತ್ತೇವೆ” ಎಂದು ಮೌಖಿಕವಾಗಿ ಹೇಳಿದರು.

Related Stories

No stories found.
Kannada Bar & Bench
kannada.barandbench.com