ಪ್ರಸಕ್ತ ವರ್ಷ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಫೈನಲ್ ಪಂದ್ಯಕ್ಕೆ ತನ್ನನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿರುವ ಅರ್ಜಿಯನ್ನು ಪ್ಯಾರಿಸ್‌ನಲ್ಲಿರುವ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ನೋಂದಾಯಿಸಿಕೊಂಡಿದೆ.
ಆಸ್ಟ್ರೇಲಿಯಾದ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಾ. ಅನ್ನಾಬೆಲ್ಲೆ ಬೆನೆಟ್ ಅವರು ಪ್ರಕರಣವನ್ನು ನಿರ್ಧರಿಸುವ ಏಕ ಮಧ್ಯಸ್ಥಿಕೆದಾರರಾಗಿದ್ದಾರೆ. ಕ್ರೀಡಾಕೂಟ ಆಗಸ್ಟ್ 11ರಂದು ಮುಕ್ತಾಯಗೊಳ್ಳಲಿದ್ದು ಅದಕ್ಕೂ ಮುನ್ನ ಏಕ ಮಧ್ಯಸ್ಥಿಕೆದಾರರು ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ ಎಂದು ಸಿಎಎಸ್ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಅರ್ಜಿದಾರೆಯು (ವಿನೇಶ್) ಆಕ್ಷೇಪಿತ ಯುಡಬ್ಲ್ಯೂಡಬ್ಲ್ಯೂ ನಿರ್ಧಾರ ರದ್ದುಗೊಳಿಸಿ ತನಗೆ ಬೆಳ್ಳಿ ಪದಕವನ್ನು (ಸಹವಿಜೇತೆ ಎಂದು ಪರಿಗಣಿಸಿ) ನೀಡಬೇಕೆಂದು ವಿನಂತಿಸಿದ್ದಾರೆ ಎಂದು ಈ ಕುರಿತು ಸಿಎಎಸ್ ವೆಬ್‌ತಾಣದಲ್ಲಿ ಹೊರಡಿಸಲಾಗಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪೋಗಟ್ ಅವರು ಮಹಿಳೆಯರ 50 ಕೆಜಿ ಕುಸ್ತಿ ಸ್ಪರ್ಧೆಯ ಫೈನಲ್‌ನಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಸುಮಾರು 100 ಗ್ರಾಂ ಹೆಚ್ಚುವರಿ ದೈಹಿಕ ತೂಕ ಇಳಿಸಿಕೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಅವರನ್ನು ಅನರ್ಹಗೊಳಿಸಿ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (ಯುಡಬ್ಲ್ಯೂಡಬ್ಲ್ಯೂ) ನಿರ್ಧಾರ ಕೈಗೊಂಡಿತ್ತು.ಈ ಅನರ್ಹತೆ ಪ್ರಶ್ನಿಸಿ ಆಗಸ್ಟ್ 7ರಂದು ಪೋಗಟ್ ಅವರು ಸಿಎಎಸ್ ಮೆಟ್ಟಿಲೇರಿದ್ದರು.
ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿರುವಂತೆ ಪೋಗಟ್ ಅವರು ಯುಡಬ್ಲ್ಯೂಡಬ್ಲ್ಯೂ ನಿರ್ಧಾರವನ್ನು ರದ್ದುಗೊಳಿಸಬೇಕು. ಫೈನಲ್ ಪಂದ್ಯ ನಡೆಯುವ ಮುನ್ನ ಹೊಸದಾಗಿ ತೂಕ ನಿರ್ಧರಿಸಿ ತಾವು ಫೈನಲ್‌ನಲ್ಲಿ ಭಾಗವಹಿಸಲು ಅರ್ಹರೆಂದು ಘೋಷಿಸಬೇಕು ಎಂದು ಮನವಿ ಮಾಡಿದ್ದರು.
ಪ್ರಕಟಣೆಯಲ್ಲಿ "ಸಿಇಎಸ್ ಅಡ್ ಹಾಕ್ ವಿಭಾಗದ ಪ್ರಕ್ರಿಯೆಯು ವೇಗವಾಗಿದ್ದರೂ ಅರ್ಜಿಯ ಅರ್ಹತೆ ಕುರಿತು ಒಂದು ಗಂಟೆಯೊಳಗೆ ತೀರ್ಪು ನೀಡಲು ಸಾಧ್ಯವಾಗಿರುವುದಿಲ್ಲ, ಏಕೆಂದರೆ ಇದಕ್ಕೆ ಮೊದಲಿಗೆ ಪ್ರತಿವಾದಿ ಯುಡಬ್ಲ್ಯೂಡಬ್ಲ್ಯೂವನ್ನು ಆಲಿಸಬೇಕಾಗಿರುತ್ತಿತ್ತು. ಆದಾಗ್ಯೂ, ಪ್ರಕ್ರಿಯೆ ನಡೆಯುತ್ತಿದ್ದು ಅರ್ಜಿದಾರೆಯು ಆಕ್ಷೇಪಿತ ಯುಡಬ್ಲ್ಯೂಡಬ್ಲ್ಯೂ ನಿರ್ಧಾರ ರದ್ದುಗೊಳಿಸಿ ತನಗೆ ಬೆಳ್ಳಿ ಪದಕವನ್ನು (ಸಹವಿಜೇತೆ ಎಂದು ಪರಿಗಣಿಸಿ) ನೀಡಬೇಕೆಂದು ವಿನಂತಿಸಿದ್ದಾರೆ” ಎಂದು ತಿಳಿಸಲಾಗಿದೆ.