ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯೋಮಿತಿ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಗುರುವಾರ ರಾಜ್ಯಸಭೆಗೆ ತಿಳಿಸಿದರು.
ಹೈಕೋರ್ಟ್ ನ್ಯಾಯಮೂತ್ತಿಗಳ ನಿವೃತ್ತಿ ವಯೋಮಿತಿಯನ್ನು 65 ವರ್ಷಕ್ಕೆ ಹೆಚ್ಚಿಸುವ ಸಲುವಾಗಿ ಸಂವಿಧಾನ (114 ನೇ ತಿದ್ದುಪಡಿ) ಮಸೂದೆಯನ್ನು ಮಂಡಿಸಲಾಯಿತು. ಆದರೆ ಅದನ್ನು ಅನುಮೋದನೆಗೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ, 15 ನೇ ಲೋಕಸಭೆಯ ವಿಸರ್ಜನೆಯೊಂದಿಗೆ ಅದರ ಅವಧಿ ಅಂತ್ಯಗೊಂಡಿತು ಎಂದು ರಿಜಿಜು ವಿವರಿಸಿದರು.
ತೆಲುಗು ದೇಶಂ ಪಕ್ಷದ ಸಂಸದ ಕನಕಮೇಡಲ ರವೀಂದ್ರ ಕುಮಾರ್ ಅವರು "ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇದೆಯೇ? ಇದ್ದರೆ ಅದರ ವಿವರಗಳು ಇಲ್ಲದೇ ಹೋದರೆ ಅದಕ್ಕೆ ಕಾರಣಗಳೇನು" ಎಂಬುದನ್ನು ತಿಳಿಸುವಂತೆ ಕೇಳಿದ್ದರು.
ಪ್ರಸ್ತುತ ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿಯ ವಯಸ್ಸು 62 ವರ್ಷ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65 ವರ್ಷವಾಗಿದೆ.