ಸಂವಿಧಾನದ ನಿರ್ಮಾತೃ ಶಾಸಕಾಂಗವಾಗಿದ್ದು ನ್ಯಾಯಾಂಗ ಅಥವಾ ಕಾರ್ಯಾಂಗ ಅದನ್ನು ತಿರುಚಲಾಗದು: ಉಪ ರಾಷ್ಟ್ರಪತಿ ಧನಕರ್‌

ಸಂಸತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಬರೆಯಲು ಸಾಧ್ಯವಿಲ್ಲ ಅಂತೆಯೇ, ಸುಪ್ರೀಂ ಕೋರ್ಟ್ ಶಾಸಕಾಂಗಕ್ಕಾಗಿ ಕಾನೂನು ರೂಪಿಸಲು ಸಾಧ್ಯವಿಲ್ಲ ಎಂದು ಉಪ ರಾಷ್ಟ್ರಪತಿ ವಿವರಿಸಿದರು.
ಸಂವಿಧಾನದ ನಿರ್ಮಾತೃ ಶಾಸಕಾಂಗವಾಗಿದ್ದು ನ್ಯಾಯಾಂಗ ಅಥವಾ ಕಾರ್ಯಾಂಗ ಅದನ್ನು ತಿರುಚಲಾಗದು: ಉಪ ರಾಷ್ಟ್ರಪತಿ ಧನಕರ್‌

ಸಂವಿಧಾನದ ಏಕೈಕ ನಿರ್ಮಾತೃ ಶಾಸಕಾಂಗವಾಗಿದ್ದು ನ್ಯಾಯಾಂಗ ಅಥವಾ ಕಾರ್ಯಾಂಗವು ಅದರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಭಾರತದ ಉಪ ರಾಷ್ಟ್ರಪತಿ ಜಗದೀಪ್ ಧನಕರ್‌ ಭಾನುವಾರ ಹೇಳಿದ್ದಾರೆ.

ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಭಾನುವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯ ಸರ್ವಸದಸ್ಯರ ಅಧಿವೇಶನದಲ್ಲಿ ಹಿರಿಯ ನ್ಯಾಯವಾದಿಗಳೂ ಆದ ಧನಕರ್‌ ಮಾತನಾಡಿದರು.

"ಸಂವಿಧಾನ ಸಭೆ ಸಂವಿಧಾನವನ್ನು ರೂಪಿಸಿದ ಸಂದರ್ಭದಲ್ಲಿ ಸಂದೇಶವು ಸ್ಪಷ್ಟ ಮತ್ತು ನಿಖರವಾಗಿತ್ತು... ಇದು (ಸಂವಿಧಾನ) ಸಂಸತ್ತಿನ ವಿಶೇಷ ವ್ಯಾಪ್ತಿಯಲ್ಲಿದೆ. ಸಂಸತ್ತು ಮಾತ್ರ ಸಂವಿಧಾನದ ಶಿಲ್ಪಿಯಾಗಿದ್ದು, ಅದು ಕಾರ್ಯಾಂಗವಾಗಿರಲಿ ಅಥವಾ ನ್ಯಾಯಾಂಗವಾಗಿರಲಿ ಬೇರಾವುದೇ ಸಂಸ್ಥೆಯ ಮಧ್ಯಪ್ರವೇಶಕ್ಕೆ ಆಸ್ಪದವಿಲ್ಲ" ಎಂದು ಅವರು ಹೇಳಿದರು.

Also Read
ಸಂವಿಧಾನದ 370ನೇ ವಿಧಿಯ ಕರಡು ರಚನೆಗೆ ಡಾ. ಅಂಬೇಡ್ಕರ್‌ ನಿರಾಕರಿಸಿದ್ದರು: ಉಪರಾಷ್ಟ್ರಪತಿ ಜಗದೀಪ್‌ ಧನಕರ್‌

ಉಪ ರಾಷ್ಟ್ರಪತಿಗಳ ಭಾಷಣದ ಪ್ರಮುಖಾಂಶಗಳು

 • ಸಂಸತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಬರೆಯಲು ಸಾಧ್ಯವಿಲ್ಲ ಅಂತೆಯೇ, ಸುಪ್ರೀಂ ಕೋರ್ಟ್ ಶಾಸಕಾಂಗಕ್ಕಾಗಿ ಕಾನೂನು ರೂಪಿಸಲು ಸಾಧ್ಯವಿಲ್ಲ.

 • ಸಂಸತ್ತು ಜನರ ಇಚ್ಛೆಯ ಪ್ರತಿಬಿಂಬವಾಗಿದ್ದು ಮತ್ತು ಕಾನೂನುಬದ್ಧ ಕಾರ್ಯವಿಧಾನದ ಮೂಲಕ ಜನ ಇದ್ದಾರೆ.

 • ಸಂಸತ್ತು ಪವಿತ್ರವಾಗಿ ಉಳಿದಾಗ ನ್ಯಾಯಾಂಗವೂ ಉಳಿಯುತ್ತದೆ. ಜನಾದೇಶ ಎಂಬುದು ಜನರ ಇಚ್ಛೆಯಲ್ಲಿ ಯಾವುದೇ ಅತಿಕ್ರಮಣಕ್ಕೆ ಅನುಮತಿ ನೀಡುವುದಿಲ್ಲ. ಅಂತಹ ಯಾವುದೇ ಅತಿಕ್ರಮಣ ಸಾಂವಿಧಾನಿಕ ವಿಪರ್ಯಾಸವಾಗುತ್ತದೆ.

 • ಡಾ. ಬಿ ಆರ್‌ ಅಂಬೇಡ್ಕರ್ ಅವರು ಸಂಸತ್ತಿನ ಅಧಿಕಾರಗಳಲ್ಲಿ ಅತಿಕ್ರಮಣವಾಗಬಹುದು ಎಂದು ಎಂದಿಗೂ ಊಹಿಸಿರಲಿಲ್ಲ ಮತ್ತು ಎರಡೂ ಅಂಗಗಳು ಅಂತಹ ಉಲ್ಲಂಘನೆ ಮಾಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ಅವಶ್ಯಕತೆಯಿದೆ.

 • ಆಡಳಿತ ಎಂಬುದು ಕ್ರಿಯಾತ್ಮಕವಾದುದಾಗಿದ್ದು ಅದಕ್ಕೆ ಸಹಯೋಗದ ಯತ್ನ ಅಗತ್ಯವಿದ್ದು ಉದ್ಭವವಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ನಡಾವಳಿಗಳ ಸಮ್ಮಿಲನ ಇರಬೇಕು. ನಾನು ನ್ಯಾಯಾಂಗದ ಕಾಲಾಳಾಗಿದ್ದು ಅದರ ಸ್ವಾತಂತ್ರ್ಯ ನನಗೆ ಮುಖ್ಯ... ಮತ್ತದು ಪ್ರಶ್ನಾತೀತವಾದುದಾಗಿದೆ.

 • ಆದರೆ ವಿಷಯಗಳು ಸಾರ್ವಜನಿಕ ವಲಯದಲ್ಲಿ ಬಹಿರಂಗಗೊಳ್ಳದಂತೆ ವ್ಯವಹಾರಗಳ ಮುಖ್ಯಸ್ಥರ ನಡುವೆ ರಚನಾತ್ಮಕ ಸಂವಹನಕ್ಕಾಗಿ ನಾವು ಕಾರ್ಯವಿಧಾನ ರೂಪಿಸಿಕೊಳ್ಳುವ ಸಮಯ ಬಂದಿದೆ.

 • ಶಾಸಕಾಂಗ ಕಾನೂನುಗಳನ್ನು ರೂಪಿಸಲು, ಕಾರ್ಯಾಂಗ ಅವುಗಳನ್ನು ಜಾರಿಗೆ ತರಲು ಹಾಗೂ ನ್ಯಾಯಾಂಗ ಆ ಕಾನೂನುಗಳನ್ನು ವ್ಯಾಖ್ಯಾನಿಸಲು ಮುಕ್ತವಾಗಿರಬೇಕು.

 • ಕಾನೂನಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ವ್ಯಾಖ್ಯಾನಾತ್ಮಕ ಅಧಿಕಾರ ಅನುಮತಿಸುವ ಸಾಂವಿಧಾನಿಕ ನಿಬಂಧನೆ ಒಂದು ಸಣ್ಣ ಬಿರುಕಾಗಿದ್ದು ಅದು ಕಟ್ಟೆಯೊಡೆಯಬಾರದು. ನಾವು ಈ ಬಗ್ಗೆ ತುಂಬಾ ಚಿಂತಿಸಬೇಕಾಗಿದೆ. ರಾಷ್ಟ್ರೀಯತೆ ಹೊಂದಿರುವ ಜನ, ಈ ಸಮಸ್ಯೆ ತೊಡೆಯುತ್ತಾರೆ ಎಂದು ನನಗೆ ಖಾತ್ರಿಯಿದೆ. ಇದರಿಂದ ಭಾರತ ಎದ್ದು ನಿಂತು ಉತ್ತುಂಗಕ್ಕೇರುತ್ತದೆ.

 • ನಮ್ಮ ಪ್ರಜಾಪ್ರಭುತ್ವದ ಕರಾಳ ಅವಧಿಯೆಂದರೆ ತುರ್ತು ಪರಿಸ್ಥಿತಿ ಘೋಷಣೆಯಾದದ್ದು. ಇದು ಸಂವಿಧಾನವನ್ನು ಬಿಟ್ಟುಕೊಟ್ಟದ್ದಕ್ಕಿಂತ ಕಡಿಮೆ ಅಲ್ಲ. ಇದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಸಂವಿಧಾನಕ್ಕೆ ಮಾಡಿದ ಅವಮಾನ. ಇಂತಹ ದುಷ್ಕೃತ್ಯವನ್ನು ಪ್ರಸ್ತುತ ಕಾಲದಲ್ಲಿ ಯೋಚಿಸಲೂ ಸಾಧ್ಯವಿಲ್ಲ.

 • ಸಂವಿಧಾನದ 370ನೇ ವಿಧಿ ಕಾಶ್ಮೀರದ ಸಾಮಾನ್ಯ ಜನರ ಜೀವನವನ್ನು ಹೇಗೆ ನರಕವಾಗಿಸಿತ್ತು ಎಂಬುದನ್ನು ಗಮನಿಸಿ. ಸಂವಿಧಾನದಿಂದ 370ನೇ ವಿಧಿಯನ್ನು ತೆಗೆದುಹಾಕಿದ್ದಕ್ಕೆ ನಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞರಾಗಿರುತ್ತೇವೆ.

 • (ಭಾರತ್‌ ವರ್ಸಸ್‌ ಇಂಡಿಯಾ ಕಲ್ಪನೆಯ ಕುರಿತು ಮಾತನಾಡುತ್ತಾ) ಭಾರತವನ್ನು ನಂಬುವುದು ಪ್ರತಿಯೊಬ್ಬ ಇಂಡಿಯನ್ನನ (ಭಾರತೀಯನ) ಕರ್ತವ್ಯ... ನೀವು ರಾಜಕೀಯ ಮಾಡಬಹುದು. ಆದರೆ ರಾಷ್ಟ್ರ ಮತ್ತು ಆಡಳಿತದ ವಿಷಯಕ್ಕೆ ಬಂದಾಗ ಹಾಗೆ ರಾಜಕಾರಣ ಮಾಡಲಾಗದು.

Kannada Bar & Bench
kannada.barandbench.com