ಸಂಸತ್‌ ಅವಲೋಕನ: ರೈತರ ಪ್ರತಿಭಟನೆ, ನ್ಯಾಯಮೂರ್ತಿಗಳ ಖಾಲಿ ಹುದ್ದೆ ಮುಂತಾದ ಹಲವು ವಿಚಾರಗಳಿಗೆ ಕೇಂದ್ರದ ಪ್ರತಿಕ್ರಿಯೆ

ಸಂಸತ್‌ ಬಜೆಟ್‌ ಅಧಿವೇಶನದಲ್ಲಿ ಎದ್ದಿರುವ ಪ್ರಮುಖ ಸಂಸದೀಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಯತ್ನ ಈ ಸಂಸತ್ ಅವಲೋಕನದ್ದು.
ಸಂಸತ್‌ ಅವಲೋಕನ: ರೈತರ ಪ್ರತಿಭಟನೆ, ನ್ಯಾಯಮೂರ್ತಿಗಳ ಖಾಲಿ ಹುದ್ದೆ ಮುಂತಾದ ಹಲವು ವಿಚಾರಗಳಿಗೆ ಕೇಂದ್ರದ ಪ್ರತಿಕ್ರಿಯೆ
Parliament Watch

ಹಾಲಿ ನಡೆಯುತ್ತಿರುವ ಬಜೆಟ್‌ ಸಂಸತ್‌ ಅಧಿವೇಶನದಲ್ಲಿ ಎತ್ತಲಾದ ಪ್ರಮುಖ ಪ್ರಶ್ನೆಗಳು, ಚರ್ಚೆಗೊಳಪಟ್ಟ ಮಹತ್ವದ ಸಂಗತಿಗಳ ಸುತ್ತ 'ಸಂಸತ್‌ ಅವಲೋಕನ' ಬೆಳಕು ಚೆಲ್ಲುತ್ತದೆ.

ಕೃಷಿ ಕಾನೂನಗಳಿಗೆ ಬೆಂಬಲ

ಭಾರತೀಯ ಸಂಜಾತರು ಸೇರಿದಂತೆ ಕೆಲವು ರಾಷ್ಟ್ರಗಳು ಸಂಸತ್ ಜಾರಿಗೊಳಿಸಿದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರ ಆಂದೋಲನಕ್ಕೆ ಬೆಂಬಲ ನೀಡಿವೆಯೇ ಎಂದು ಸಂಸದರಾದ ಸಯ್ಯದ್‌ ಇಮ್ತಿಯಾಜ್‌ ಜಲೀಲ್‌ ಮತ್ತು ಅಸಾದುದ್ದೀನ್‌ ಓವೈಸಿ ಪ್ರಶ್ನಿಸಿದ್ದಾರೆ. “ಭಾರತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸದಂತೆ ಈ ರಾಷ್ಟ್ರಗಳಿಗೆ ಭಾರತವು ಎಚ್ಚರಿಕೆ ನೀಡಿದೆಯೇ?"ಎಂಬ ಪ್ರಶ್ನೆಯನ್ನೂ ಕೇಳಲಾಗಿದೆ.

ಇದಕ್ಕೆ ಸಂಸತ್‌ನಲ್ಲಿ ಉತ್ತರಿಸಿರುವ ವಿದೇಶಾಂಗ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಮುರಳೀಧರನ್‌ ಅವರು “ಕೆನಡಾ, ಇಂಗ್ಲೆಂಡ್‌, ಅಮೆರಿಕಾ ಮತ್ತು ಹಲವು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕೆಲವು ಭಾರತೀಯ ಸಂಜಾತರು ಭಾರತದಲ್ಲಿ ಜಾರಿಗೊಳಿಸಲಾಗಿರುವ ಕೃಷಿ ಕಾಯಿದೆಗಳ ಬಗ್ಗೆ ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್‌ ಟ್ರೂಡೋ ಅವರು ಕೃಷಿ ಕಾಯಿದೆಗಳ ಕುರಿತು ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಿದ್ದಾರೆ.

ಎಚ್ಚರಿಕೆ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಸರ್ಕಾರವು “ಈ ವಿಚಾರವನ್ನು ಒಟ್ಟಾವ ಮತ್ತು ದೆಹಲಿಯಲ್ಲಿರುವ ಕೆನಡಾದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಭಾರತದ ಆಂತರಿಕ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವುದು ಅನಗತ್ಯ, ಇದು ಸ್ವೀಕಾರ್ಹವಲ್ಲ. ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಕ್ಕೆ ಇದರಿಂದ ಹಾನಿಯಾಗುತ್ತದೆ ಎಂದು ತಿಳಿಸಲಾಗಿದೆ. ರೈತರ ಜೊತೆಗಿನ ಸಂವಾದಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ಪ್ರಯತ್ನವನ್ನು ಕೆನಡಾ ಸರ್ಕಾರ ಸ್ವಾಗತಿಸಿದೆ,” ಎಂದು ಹೇಳಿದ್ದಾರೆ.

ನ್ಯಾಯಮೂರ್ತಿಗಳ ಖಾಲಿ ಹುದ್ದೆ

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳ ಖಾಲಿ ಹುದ್ದೆ ಮತ್ತು ನ್ಯಾಯಮೂರ್ತಿಗಳ ನೇಮಕಾತಿಯ ಸಂಬಂಧ ಸಂಸದ ಕಲ್ಯಾಣ್‌ ಬ್ಯಾನರ್ಜಿ ಅವರು ಕೇಳಿದ್ದ ಪ್ರಶ್ನೆಗೆ ಕೇಂದ್ರ ಕಾನೂನು ಸಚಿವ ರವಿ ಶಂಕರ್‌ ಪ್ರಸಾದ್‌ ಉತ್ತರಿಸಿದ್ದಾರೆ. “01.02.2021ರ ವರೆಗೆ ಸುಪ್ರೀಂ ಕೋರ್ಟ್‌ನಲ್ಲಿ 4 ಮತ್ತು 25 ಹೈಕೋರ್ಟ್‌ಗಳಲ್ಲಿ 419 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇವೆ. ದೆಹಲಿ, ಬಾಂಬೆ ಮತ್ತು ಕಲ್ಕತ್ತಾ ಹೈಕೋರ್ಟ್‌ಗಳಲ್ಲಿ ಕ್ರಮವಾಗಿ 31, 30 ಮತ್ತು 40 ಹುದ್ದೆಗಳು ಖಾಲಿ ಇವೆ” ಎಂದು ಉತ್ತರಿಸಿದ್ದಾರೆ.

2014ರಿಂದ 2021ರ ಜನವರಿ 25ರ ವರೆಗೆ ಮಾಡಲಾಗಿರುವ ನ್ಯಾಯಮೂರ್ತಿಗಳ ನೇಮಕಾತಿ ವಿವರವನ್ನು ಕಾನೂನು ಮಂತ್ರಿಗಳು ನೀಡಿದ್ದಾರೆ. ವಿವರ ಇಂತಿದೆ:

  • ಸುಪ್ರೀಂ ಕೋರ್ಟ್‌ಗೆ 35 ನ್ಯಾಯಮೂರ್ತಿಗಳನ್ನು ನೇಮಿಸಲಾಗಿದೆ.

  • ವಿವಿಧ ಹೈಕೋರ್ಟ್‌ಗಳಿಗೆ ನೂತನವಾಗಿ 570 ನ್ಯಾಯಮೂರ್ತಿಗಳ ನೇಮಕ ಮಾಡಲಾಗಿದೆ.

  • ವಿವಿಧ ಹೈಕೋರ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 520ಕ್ಕೂ ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಕಾಯಂಗೊಳಿಸಲಾಗಿದೆ.

ಡಿಜಿಟಲ್‌ ಸಾಕ್ಷರತೆ ಮತ್ತು ಹೈಸ್ಪೀಡ್‌ ಇಂಟರ್ನೆಟ್

ಗುಜರಾತ್‌ ಸೇರಿದಂತೆ ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿನ ಗ್ರಾಮಗಳಲ್ಲಿ ಹೈಸ್ಪೀಡ್‌ ಇಂಟರ್‌ನೆಟ್‌ ಸೌಲಭ್ಯ ಇಲ್ಲದೆ ಇರುವ ಗ್ರಾಮಗಳು ಹಾಗೂ ಡಿಜಿಟಲ್‌ ಸಾಕ್ಷರತೆ ಬಗ್ಗೆ ಕೇಳಲಾದ ಪ್ರಶ್ನೆಗೆ ಸಂವಹನ, ಕಾನೂನು ಮತ್ತು ನ್ಯಾಯಿಕ, ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್‌ ಪ್ರಸಾದ್‌ ಅವರು ಉತ್ತರಿಸಿದ್ದಾರೆ. ಸುಮಾರು 37,439 ಜನಗಣತಿ ಗ್ರಾಮಗಳಿಗೆ ಹೈಸ್ಪೀಡ್‌ 3ಜಿ/4ಜಿ ಮೊಬೈಲ್‌ ಸಂಪರ್ಕ ಕಲ್ಪಿಸಲಾಗಿಲ್ಲ. ಗುಜರಾತ್‌ನಲ್ಲಿ 775 ಗ್ರಾಮಗಳಿಗೆ 3ಜಿ/4ಜಿ ಮೊಬೈಲ್‌ ಸಂಪರ್ಕ ಕಲ್ಪಿಸಲಾಗಿಲ್ಲ ಎಂದಿದ್ದಾರೆ.

ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಬಾಕಿ ಇರುವ ಸಿವಿಲ್‌ ಮತ್ತು ಕ್ರಿಮಿನಲ್‌ ಪ್ರಕರಣಗಳು

ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಿವಿಲ್‌ ಮತ್ತು ಕ್ರಿಮಿನಲ್‌ ಪ್ರಕರಣಗಳ ಕುರಿತು ಕೇಳಲಾದ ಪ್ರಶ್ನೆಗೆ ರವಿ ಶಂಕರ್‌ ಪ್ರಸಾದ್‌ ಅವರು 2020ರ ವರೆಗೆ ಮಹಾರಾಷ್ಟ್ರದಲ್ಲಿ 13,63,965 ಸಿವಿಲ್‌ ಮತ್ತು 31,40,608 ಕ್ರಿಮಿನಲ್‌ ಪ್ರಕರಣಗಳು ಬಾಕಿ ಇದ್ದು, ಉತ್ತರ ಪ್ರದೇಶದಲ್ಲಿ 18,05,336 ಸಿವಿಲ್‌ 69,75,768 ಕ್ರಿಮಿನಲ್‌ ಪ್ರಕರಣಗಳು ಬಾಕಿ ಇವೆ ಎಂದಿದ್ದಾರೆ.

ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಕೆಳಹಂತದ ನ್ಯಾಯಾಲಯಗಳಲ್ಲಿ ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳು ಮತ್ತು 2020 ಮತ್ತು 2021ರ ವರ್ಷದಲ್ಲಿ ತುಂಬಲಾದ ಹುದ್ದೆಗಳ ವಿವರ ಕುರಿತಾದ ಪ್ರಶ್ನೆಗೆ ಮಹಾರಾಷ್ಟ್ರದ ಕೆಳಹಂತದ ನ್ಯಾಯಾಲಯಗಳಲ್ಲಿ 292 ಹುದ್ದೆಗಳ ಪೈಕಿ 7 ಹುದ್ದೆಗಳನ್ನು, ಉತ್ತರ ಪ್ರದೇಶದಲ್ಲಿ 1046 ಹುದ್ದೆಗಳ ಪೈಕಿ 84 ಅನ್ನು ಕಳೆದ ವರ್ಷ ಭರ್ತಿ ಮಾಡಲಾಗಿದೆ ಎಂದು ಉತ್ತರಿಸಿದ್ದಾರೆ.

ಮಹಿಳಾ ನ್ಯಾಯಮೂರ್ತಿಗಳು

ವಿವಿಧ ಹೈಕೋರ್ಟ್‌ಗಳಲ್ಲಿ ಕರ್ತವ್ಯ ನಿರತ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆಗೆ ಸಂಬಂಧಿಸಿದ ಪ್ರಶ್ನೆಗೆ ರವಿ ಶಂಕರ್‌ ಪ್ರಸಾದ್‌ ಅವರು 2021ರ ಜನವರಿ 20ರ ವರೆಗೆ 77 ಮಹಿಳಾ ನ್ಯಾಯಮೂರ್ತಿಗಳು ಇದ್ದಾರೆ ಎಂದು ಉತ್ತರಿಸಿದ್ದಾರೆ.

ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿಸುವ ಸಂಬಂಧ ಕಾನೂನು ಇಲಾಖೆ ಕೈಗೊಂಡಿರುವ ಕ್ರಮದ ಕುರಿತಾದ ಪ್ರಶ್ನೆಗೆ ಪ್ರಸಾದ್‌ ಅವರು ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಕೇಂದ್ರ ಸರ್ಕಾರದ ಪಾತ್ರ ಸೀಮಿತವಾಗಿದೆ ಎಂದಿದ್ದಾರೆ. “ಭಾರತ ಸಂವಿಧಾನದ 124 ಮತ್ತು 217ನೇ ವಿಧಿಯ ಅನ್ವಯ ಕ್ರಮವಾಗಿ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸಲಾಗುತ್ತದೆ. ಈ ವಿಧಿಗಳ ಅಡಿ ಯಾವುದೇ ಜಾತಿ ಅಥವಾ ವರ್ಗದ ವ್ಯಕ್ತಿಗೆ ಮೀಸಲಾತಿ ಇರುವುದಿಲ್ಲ. ಅದಾಗ್ಯೂ, ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಕಳುಹಿಸುವಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗೆ ಅವಕಾಶ ಕಲ್ಪಿಸುವಂತೆ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡುತ್ತದೆ” ಎಂದು ಹೇಳಿದ್ದಾರೆ.

ಗ್ರಾಮೀಣ ನ್ಯಾಯಾಲಯಗಳ ಸಂರಚನೆ ಮತ್ತು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ನ್ಯಾಯಾಲಯಗಳ ಸಂಖ್ಯೆಯ ಕುರಿತಾದ ಪ್ರಶ್ನೆಗೆ ಉತ್ತರ ಪ್ರದೇಶದಲ್ಲಿ 113 ಅಧಿಸೂಚಿತ ನ್ಯಾಯಾಲಯಗಳ ಪೈಕಿ ಸದ್ಯ 14 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಒಟ್ಟಾರೆ 402 ಅಧಿಸೂಚಿತ ನ್ಯಾಯಾಲಯಗಳ ಪೈಕಿ 225 ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ಸರ್ಕಾರ ಉತ್ತರಿಸಿದೆ.

ಇ-ನ್ಯಾಯಾಲಯಗಳು

ವರ್ಚುವಲ್‌ ನ್ಯಾಯಾಲಯಗಳಿಗೆ ಮೂಲಸೌಕರ್ಯ ಕಲ್ಪಿಸುವ ಕೆಲಸಗಳು ಚಾಲನೆಯಲ್ಲಿದ್ದು, ಇ-ಮಿಷನ್‌ ಮೋಡ್‌ ಪ್ರಗತಿಯಲ್ಲಿದೆ ಎಂದು ಕಾನೂನು ಸಚಿವರು ತಿಳಿಸಿದ್ದಾರೆ. ಇ-ನ್ಯಾಯಾಲಯಗಳ ಮಿಷನ್‌ ಮೋಡ್‌ ಯೋಜನೆಯ ಎರಡನೇ ಹಂತ, 18,735 ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ಕಂಪ್ಯೂಟರೀಕರಣ ಪೂರ್ಣಗೊಂಡಿದೆ ಎಂದಿದ್ದಾರೆ.

ಭಾರತ ಸರ್ಕಾರದ “ಆತ್ಮನಿರ್ಭರ್‌ ಭಾರತ್‌” ಯೋಜನೆಯಡಿ ಎಲೆಕ್ಟ್ರಾನಿಕ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೌಲ್ಯಮಾಪನ ನಡೆಸಿ ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ವಿಸಿ ಸಲ್ಯೂಷನ್‌ ಅನ್ನು ಅಂತಿಮಗೊಳಿಸಿದ್ದು, ಅದರ ಪರೀಕ್ಷೆ ನಡೆಯುತ್ತಿದೆ ಎಂದಿದ್ದಾರೆ.

ಮೊಬೈಲ್‌ ಅಪ್ಲಿಕೇಶನ್‌ಗಳ ಮೇಲೆ ನಿಷೇಧ

ಅಲಿ ಸಪ್ಲೈಯರ್‌, ಅಲಿ ಎಕ್ಸ್‌ಪ್ರೆಸ್‌, ಅಲಿ ಪೇ ಕ್ಯಾಷಿಯರ್‌ ಇತ್ಯಾದಿ ಸೇರಿದಂತೆ 43ಕ್ಕೂ ಹೆಚ್ಚು ಪ್ರಮುಖ ಚೀನಾ‌ ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರವು ರಾಷ್ಟ್ರೀಯ ಭದ್ರತೆ, ಸಾರ್ವಭೌಮತೆ ಮತ್ತು ಸಮಗ್ರತೆಯ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ 69ಎ ಅಡಿ ನಿರ್ಬಂಧಿಸಿದೆಯೇ ಎಂಬ ಪ್ರಶ್ನೆಗೆ ದೇಶದ ಸಮಗ್ರತೆ ಮತ್ತು ಸಾರ್ವಭೌಮತೆ ಮತ್ತು ರಕ್ಷಣೆಯ ಹಿನ್ನೆಲೆಯಲ್ಲಿ ನಿರ್ಬಂಧಿಸಲಾಗಿದೆ ಎಂದು ಸರ್ಕಾರ ಉತ್ತರಿಸಿದೆ.

ಆರೋಗ್ಯ ಸೇತು ಅಪ್ಲಿಕೇಶನ್‌

ಆರೋಗ್ಯ ಸೇತು ಅಪ್ಲಿಕೇಶನ್‌ ಅನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆಯೇ ಎಂಬ ಪ್ರಶ್ನೆಗೆ ಸರ್ಕಾರವು “ಸ್ವಯಂ ಸೇವಕರು, ಶೈಕ್ಷಣಿಕ ಕ್ಷೇತ್ರದ ತಜ್ಞರ ಜೊತೆಗೂಡಿ ನ್ಯಾಷನಲ್‌ ಇನ್ಫರ್ಮ್ಯಾಟಿಕ್ಸ್‌ ಕೇಂದ್ರವು ಆರೋಗ್ಯ ಸೇತು ಅಭಿವೃದ್ಧಿಪಡಿಸಿದೆ” ಎಂದು ಉತ್ತರಿಸಿದೆ.

Also Read
ಸಂಸತ್ ಅವಲೋಕನ: ಮೃತ ರೈತರಿಗಿಲ್ಲ ಪರಿಹಾರ, ತೃತೀಯ ಲಿಂಗಿಗಳಿಗಿಲ್ಲ ಮೀಸಲಾತಿ; ಸಿದ್ಧಗೊಳ್ಳುತ್ತಿವೆ ಸಿಎಎ ನಿಯಮಗಳು

ಸುಪ್ರೀಂ ಕೋರ್ಟ್‌ನಲ್ಲಿ ಆಯ್ದ ಪ್ರಕರಣಗಳ ವಿಚಾರಣೆ

ನೂರಾರು ಜಾಮೀನು ಅರ್ಜಿಗಳು ಬಾಕಿ ಇರುವಾಗ ಗೌರವಾನ್ವಿತ ಸುಪ್ರೀಂ ಕೋರ್ಟ್‌ನಲ್ಲಿ ಆಯ್ದ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂಬ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆಯೇ ಎಂಬ ಪ್ರಶ್ನೆಗೆ 'ಇಲ್ಲ' ಎಂದು ಉತ್ತರಿಸಿರುವ ಕಾನೂನು ಸಚಿವರು, “ನ್ಯಾಯಾಂಗದ ಸ್ವಾತಂತ್ರ್ಯ ಕಾಪಾಡಲು ಸರ್ಕಾರ ಬದ್ಧವಾಗಿದೆ. ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸುವ ವಿಚಾರವು ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಗೆ ಒಳಪಡುವುದರಿಂದ ಇದರಲ್ಲಿ ಸರ್ಕಾರದ ಪಾತ್ರ ಇರುವುದಿಲ್ಲ,” ಎಂದಿದೆ.

ಮಧ್ಯಸ್ಥಿಕೆ ಮತ್ತು ಸಂಧಾನ ಸುಗ್ರೀವಾಜ್ಞೆ-2020

ಮಧ್ಯಸ್ಥಿಕೆ ಮತ್ತು ಸಂಧಾನ ಸುಗ್ರೀವಾಜ್ಞೆ-2020ಯ ಅನ್ವಯಿಸುವಿಕೆ ಮತ್ತು ಪರಿಣಾಮಗಳ ಕುರಿತು ಹಲವು ಜನಪ್ರತಿನಿಧಿಗಳು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಕೇಂದ್ರ ಸರ್ಕಾರವು, “ಸುಗ್ರೀವಾಜ್ಞೆಯಿಂದ ಗುತ್ತಿಗೆ ವ್ಯವಸ್ಥೆ ಜಾರಿ ಬಲಗೊಳ್ಳಲಿದ್ದು, ಇದರಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರನ್ನು ಸೆಳೆಯುವ ಉದ್ದೇಶ ಹೊಂದಲಾಗಿದೆ. ಕಾಲಮಿತಿಯ ಒಳಗೆ ತಮ್ಮ ವಿವಾದಗಳನ್ನು ಬಗೆಹರಿಸಿಕೊಳ್ಳಲು ಭಾರತವನ್ನು ಸೂಕ್ತ ಸ್ಥಳವನ್ನಾಗಿ ಆಯ್ಕೆ ಮಾಡಿಕೊಳ್ಳುವಂತೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ” ಎಂದಿದೆ.

Related Stories

No stories found.
Kannada Bar & Bench
kannada.barandbench.com