ಸಂಸತ್ ಅವಲೋಕನ: ಮೃತ ರೈತರಿಗಿಲ್ಲ ಪರಿಹಾರ, ತೃತೀಯ ಲಿಂಗಿಗಳಿಗಿಲ್ಲ ಮೀಸಲಾತಿ; ಸಿದ್ಧಗೊಳ್ಳುತ್ತಿವೆ ಸಿಎಎ ನಿಯಮಗಳು

ಸಂಸತ್‌ ಬಜೆಟ್‌ ಅಧಿವೇಶನದಲ್ಲಿ ಎದ್ದಿರುವ ಪ್ರಮುಖ ಸಂಸದೀಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಯತ್ನ ಈ ಸಂಸತ್ ಅವಲೋಕನದ್ದು.
ಸಂಸತ್ ಅವಲೋಕನ: ಮೃತ ರೈತರಿಗಿಲ್ಲ ಪರಿಹಾರ, ತೃತೀಯ ಲಿಂಗಿಗಳಿಗಿಲ್ಲ ಮೀಸಲಾತಿ; ಸಿದ್ಧಗೊಳ್ಳುತ್ತಿವೆ ಸಿಎಎ ನಿಯಮಗಳು

ಕೋವಿಡ್‌ ಬಳಿಕ ಶಾಸಕಾಂಗ ಕಾರ್ಯಗಳು ಸ್ಥಗಿತಗೊಂಡ ಬಹುಕಾಲದ ನಂತರ ಸಂಸತ್‌ನ ಬಜೆಟ್‌ ಅಧಿವೇಶನ ಆರಂಭಗೊಂಡಿದೆ. ಕೋವಿಡ್‌ ಕಾರಣಕ್ಕಾಗಿ ನನೆಗುದಿಗೆ ಬಿದ್ದಿದ್ದ ಬಿಸಿ ಬಿಸಿ ಚರ್ಚೆಯ ಸಂಗತಿಗಳು ಹಾಗೂ ಈಗಿನ ಕೆಲ ಸಮಸ್ಯೆಗಳು ಚರ್ಚೆಯ ಮುನ್ನೆಲೆಗೆ ಬಂದಿವೆ. ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಸಂಸದರು ಎತ್ತಿದ ಕೆಲವು ಪ್ರಮುಖ ಪ್ರಶ್ನೆಗಳ ಅವಲೋಕನ ಇಲ್ಲಿದೆ.

ಅಸ್ಸಾಂ ಎನ್‌ಆರ್‌ಸಿ, ಎನ್‌ಪಿಆರ್, ಸಿಎಎ

ಅಸ್ಸಾಂಗೆ ಮಾತ್ರ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಯನ್ನು ಏಕೆ ಅನ್ವಯಿಸಿಲ್ಲ ಎಂಬ ಪ್ರಶ್ನೆಗೆ ಈ ಕೆಳಗಿನ ಪ್ರತಿಕ್ರಿಯೆ ದೊರೆತಿದೆ:

"ಆಧಾರ್ ದತ್ತಾಂಶಕ್ಕಾಗಿ ಒದಗಿಸಲಾದ ಭದ್ರತಾ ವ್ಯವಸ್ತೆಯಂತೆಯೇ ಸೂಕ್ತ ಭದ್ರತಾ ವ್ಯವಸ್ಥೆ ಜಾರಿಗೆ ರೂಪಿಸಲು ಸುಪ್ರೀಂ ಕೋರ್ಟ್ ರಾಜ್ಯ ಸಂಯೋಜಕರಿಗೆ ನಿರ್ದೇಶನ ನೀಡಿದ್ದು ಅದರ ನಂತರ ಮಾತ್ರ (ನಾಗರಿಕರ) ಸೇರ್ಪಡೆ ಮತ್ತು ಹೊರಗಿಡುವಿಕೆ ಪಟ್ಟಿಯನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ರಿಜಿಸ್ಟ್ರಾರ್ ಜನರಲ್ ಇಂಡಿಯಾಕ್ಕೆ ಒದಗಿಸಲಾಗುವುದು.”

ಸಂಸದ ವಿ ಕೆ ಶ್ರೀಕಂಠನ್ ಅವರು ಎತ್ತಿದ ಮತ್ತೊಂದು ಪ್ರಶ್ನೆಯೆಂದರೆ “ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ (ಎನ್‌ಪಿಆರ್) ಅನುಸೂಚನೆಯನ್ನು ಅಂತಿಮಗೊಳಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು. ಇದಕ್ಕೆ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ್ ರೈ ಉತ್ತರಿಸುತ್ತಾ, “ಎನ್‌ಪಿಆರ್ ತಯಾರಿಕೆಗೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿರುವ ರಾಜ್ಯಗಳೊಂದಿಗೆ (ಕೇಂದ್ರ) ಸರ್ಕಾರ ಚರ್ಚಿಸುತ್ತಿತ್ತು. ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಮೊದಲ ಹಂತದ ಎನ್‌ಪಿಆರ್ ಗಣತಿ, ನವೀಕರಣ ಮತ್ತು ಸಂಬಂಧಪಟ್ಟ ಇತರೆ ಕ್ಷೇತ್ರ ಚಟುವಟಿಕೆಗಳನ್ನು ಮುಂದೂಡಲಾಗಿದೆ,” ಎಂದಿದ್ದಾರೆ.

2019ರ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆ ಎಂಬ ಬಗ್ಗೆ ರೈ ಪ್ರತಿಕ್ರಿಯಿಸಿದ್ದು ಹೀಗೆ: 2019ರ ಪೌರತ್ವ (ತಿದ್ದುಪಡಿ) ಕಾಯಿದೆ (ಸಿಎಎ) ಸಂಬಂಧ 12 ಡಿಸೆಂಬರ್‌ 2019 ರಂದು ಅಧಿಸೂಚನೆ ಹೊರಡಿಸಲಾಗಿದ್ದು 10 ಜನವರಿ 2020ರಿಂದ ಜಾರಿಗೆ ಬಂದಿದೆ. ಕಾಯಿದೆಯ ಅಡಿಯಲ್ಲಿ ರೂಪಿಸಬೇಕಾದ ನಿಯಮಗಳು ಸಿದ್ಧತೆಯ ಹಂತದಲ್ಲಿವೆ. ಅಧೀನ ಶಾಸನ ಸಮಿತಿಗಳು ಕಾಯಿದೆಯಡಿಯಲ್ಲಿ ನಿಯಮ ರೂಪಿಸಲು ಲೋಕಸಭೆ ಮತ್ತು ರಾಜ್ಯಸಭೆಗೆ ಕ್ರಮವಾಗಿ 09.04.2021 ಮತ್ತು 09.07.2021 ರವರೆಗೆ ಸಮಯ ವಿಸ್ತರಿಸಿವೆ.

Also Read
ಹಿನ್ನೋಟ: ಸಿಎಎ ಪ್ರತಿಭಟನೆ, ಎನ್‌ಎಲ್‌ಎಸ್‌ಐಯು ಸ್ಥಳೀಯ ಮೀಸಲಾತಿ - ಕರ್ನಾಟಕ ಹೈಕೋರ್ಟ್‌ ಹೊರಡಿಸಿದ ಮಹತ್ವದ ಆದೇಶಗಳು

ಕೃಷಿ ಕಾನೂನುಗಳ ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಇಲ್ಲ ಪರಿಹಾರ

ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಹಲವಾರು ಸಂಸದರು ಪ್ರಶ್ನೆಗಳನ್ನು ಕೇಳಿದ್ದಾರೆ. ಇವುಗಳನ್ನು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಮುಂದೆ ಇಡಲಾಯಿತು. ಪ್ರಶ್ನೆಗಳ ವಿವರ ಇಲ್ಲಿದೆ:

  • ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ನೀಡಲು ಸರ್ಕಾರ ಮುಂದಾಗಿದೆಯೇ?

  • ರೈತ ಸಂಘಗಳೊಂದಿಗೆ ನಡೆಸಿದ ಸಭೆಗಳು / ಮಾತುಕತೆಗಳ ಸಂಖ್ಯೆ ಮತ್ತು ವಿವರಗಳು ಮತ್ತು ಸಾಮರಸ್ಯದ ಪ್ರಯತ್ನಗಳ ಫಲಿತಾಂಶ.

  • ಇತ್ತೀಚೆಗೆ ಜಾರಿಗೆ ತಂದ ಕೃಷಿ ಕಾನೂನುಗಳನ್ನು ಹಿಂಪಡೆಯುವ / ರದ್ದುಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇದೆಯೇ? ಇಲ್ಲದಿದ್ದರೆ ಕೃಷಿ ಕಾನೂನುಗಳನ್ನು ರದ್ದುಗೊಳಿಸದಿರಲು ಕಾರಣಗಳು ಯಾವುವು?

  • ಪ್ರತಿಭಟನೆಯಲ್ಲಿ ಭಯೋತ್ಪಾದಕ ಸಂಘಟನೆಗಳು ಒಳನುಸುಳಿರುವ ಸಂಬಂಧ ಸರ್ಕಾರದ ಬಳಿ ಯಾವುದೇ ಪುರಾವೆಗಳಿವೆಯೇ?

ಸರ್ಕಾರದ ಪ್ರತಿಕ್ರಿಯೆ:

ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಯಾವುದೇ ಪರಿಹಾರ ನೀಡುವುದಿಲ್ಲ ಎಂಬ ಉತ್ತರ ಕೇಂದ್ರ ಸರ್ಕಾರದಿಂದ ದೊರೆತಿದೆ.

ಇದುವರೆಗೆ ಸಮಸ್ಯೆ ಪರಿಹರಿಸಲು ರೈತರು ಮತ್ತು ಸರ್ಕಾರದ ನಡುವೆ ಹನ್ನೊಂದು ಸುತ್ತಿನ ಮಾತುಕತೆಗಳು ನಡೆದಿವೆ. ಕೃಷಿ ಕಾನೂನುಗಳನ್ನು ತಿದ್ದುಪಡಿ ಮಾಡುವ ಸಂಬಂಧ ಸರ್ಕಾರ ಒಂದಾದ ನಂತರ ಒಂದರಂತೆ ಪ್ರಸ್ತಾಪವನ್ನು ರೈತರ ಮುಂದಿಟ್ಟಿದೆ ಎಂದು ತಿಳಿಸಲಾಗಿದೆ.

ಪ್ರತಿಭಟನಾಕಾರರ ಮೇಲೆ ಮಿತಿಮೀರಿದ ಬಲವನ್ನು ಬಳಸಿದ ಹಿಂದಿನ ಕಾರಣ ಕುರಿತು ಕೇಳಿದ ಪ್ರಶ್ನೆಗೆ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಅವರು ನೀಡಿದ ಉತ್ತರದ ಸಾರಾಂಶ ಹೀಗಿದೆ: ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಧ್ವಂಸಗೊಳಿಸಲು ಟ್ರಾಕ್ಟರ್‌ಗಳಲ್ಲಿದ್ದ ಪ್ರತಿಭಟನಾ ನಿರತರು ಯತ್ನಿಸಿದರು. ಸರ್ಕಾರಿ ಸ್ವತ್ತುಗಳನ್ನು ಧ್ವಂಸಗೊಳಿಸದರು, ಸಾರ್ವಜನಿಕ ಸೇವಕರ ವಿರುದ್ಧ ಕ್ರಿಮಿನಲ್‌ ಬಲ ಪ್ರಯೋಗಿಸಿದರು. ಕೋವಿಡ್‌ ಭೀತಿಯ ನಡುವೆಯೂ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಜನದಟ್ಟಣೆ ನಿಯಂತ್ರಿಸಲು ಅಶ್ರುವಾಯು, ಜಲಫಿರಂಗಿ ಮತ್ತು ಲಘು ಬಲಪ್ರಯೋಗ ಮಾಡದೇ ಬೇರೆ ದಾರಿ ಇರಲಿಲ್ಲ.

ಪ್ರತಿಭಟನೆಯಲ್ಲಿ ಭಯೋತ್ಪಾದಕ ಸಂಘಟನೆಗಳ ಒಳನುಸುಳಿರುವ ಸಂಬಂಧ ಸರ್ಕಾರದ ಬಳಿ ಯಾವುದೇ ಪುರಾವೆಗಳಿವೆಯೇ ಎಂಬ ಪ್ರಶ್ನಿಗೆ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Also Read
[ರೈತರ ಧರಣಿ] ಒಂದು ಹ್ಯಾಷ್‌ಟ್ಯಾಗ್‌, 257 ಯುಆರ್‌ಎಲ್‌ ನಿರ್ಬಂಧಕ್ಕೆ ಟ್ವಿಟರ್‌ ನಕಾರ; ಕೇಂದ್ರದ ಕೆಂಗಣ್ಣು

ಕಾರಾಗೃಹಗಳಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯ ಮತ್ತು ಸಿಸಿಟಿವಿ ಅಳವಡಿಕೆ

Number of CCTVs installed in Prisons
Number of CCTVs installed in Prisons

"ವೀಡಿಯೊ ಕಾನ್ಫರೆನ್ಸಿಂಗ್ ಮತ್ತು ಸಿಸಿಟಿವಿ ಕ್ಯಾಮೆರಾಗಳಿಗೆ ಸಂಬಂಧಿಸಿದ ಎಲ್ಲಾ ಉಪಕರಣಗಳನ್ನು ಕಾಲಕಾಲಕ್ಕೆ ನವೀಕರಿಸಲಾಗಿದೆಯೇ?” ಎಂದು ಕೇಳಲಾದ ಪ್ರಶ್ನೆಗೆ ರೆಡ್ಡಿ ಅವರು 2019 ರ ರಾಷ್ಟ್ರೀಯ ಅಪರಾಧ ಬ್ಯೂರೋ ರೆಕಾರ್ಡ್ (ಎನ್‌ಸಿಆರ್‌ಬಿ) ಅಂಕಿಅಂಶಗಳ ಪ್ರಕಾರ ದೇಶದ 808 ಜೈಲುಗಳಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯವಿದೆ. ಇದಲ್ಲದೆ, 2019 ರ ಡಿಸೆಂಬರ್ 31 ರ ವೇಳೆಗೆ ಒಟ್ಟು 22,456 ಸಿಸಿಟಿವಿಗಳನ್ನು ಕಾರಾಗೃಹಗಳಲ್ಲಿ ಅಳವಡಿಸಲಾಗಿದೆ. ಕಾರಾಗೃಹಗಳಲ್ಲಿ ಅತಿ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗಿರುವ ರಾಜ್ಯವೆಂದರೆ ಉತ್ತರ ಪ್ರದೇಶ (2,757). ಮಿಜೋರಾಂ ಮತ್ತು ಲಕ್ಷದ್ವೀಪ ಒಂದೂ ಸಿಸಿಟಿವಿ ಅಳವಡಿಸಿಲ್ಲ.

ನಾಗರಿಕ ಹಕ್ಕುಗಳ ಹೋರಾಟಗಾರರ ಬಂಧನ/ ವಶ

ಶಾಂತಿಯುತವಾಗಿ ಅಸಮ್ಮತಿ ವ್ಯಕ್ತಪಡಿಸಿದ್ದಕ್ಕಾಗಿ ದೇಶದಲ್ಲಿ ನಾಗರಿಕ ಹಕ್ಕುಗಳ ಕಾರ್ಯಕರ್ತರನ್ನು ಬಂಧಿಸಿದ್ದು/ವಶಕ್ಕೆ ಪಡೆದಿದ್ದಕ್ಕಾಗಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ವ್ಯಕ್ತಪಡಿಸಿದ ಕಳವಳದ ಅರಿವಿದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ರೆಡ್ಡಿ ಅವರು “ಆಯೋಗದ ಪತ್ರಿಕಾ ಪ್ರಕಟಣೆಗೆ ʼಸೂಕ್ತʼ ಪ್ರತಿಕ್ರಿಯೆ ನೀಡಲಾಗಿದೆ” ಎಂದಿದ್ದಾರೆ. "... ಭಾರತದ ಸಂವಿಧಾನದ ಅಡಿಯಲ್ಲಿ ಸಾಕಷ್ಟು ಸುರಕ್ಷತೆ ಲಭ್ಯವಿವೆ. 1993ರ ಮಾನವ ಹಕ್ಕುಗಳ ರಕ್ಷಣೆಗಾಗಿ ಮಾನವ ಹಕ್ಕುಗಳ ರಕ್ಷಣಾ ಕಾಯಿದೆ ಸೇರಿದಂತೆ ವಿವಿಧ ಕಾನೂನುಗಳಿವೆ." ಎಂದು ಪ್ರತಿಕ್ರಿಯಿಸಿದ್ದಾರೆ.

ಪತ್ರಕರ್ತರ ವಿರುದ್ಧ ದೋಷಾರೋಪ  ಮತ್ತು ಬಂಧನ

ಕೇರಳದ ಸಂಸದರು ಕೆ ಸುಧಾಕರನ್ ಮತ್ತು ಕೆ ಮುರಳೀಧರನ್ ಅವರು ಈ ಕೆಳಗಿನ ಪ್ರಶ್ನೆಗಳನ್ನು ಎತ್ತಿದ್ದಾರೆ:

(ಎ) ಭಾರತೀಯ ದಂಡ ಸಂಹಿತೆ, 1897ರ ಸಾಂಕ್ರಾಮಿಕ ರೋಗಗಳ ಕಾಯಿದೆ, ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ), 1967 ರಿಂದ 2014ರವರೆಗೆ ಬಂಧಿಸಲಾದ ಪತ್ರಕರ್ತರ ಸಂಖ್ಯೆ, ವರ್ಷವಾರು ವಿವರ ನೀಡಿ.

(ಬಿ) ಮೇಲೆ ತಿಳಿಸಲಾದ ಕಾನೂನುಗಳ ಪ್ರಕಾರ, ಯಾವುದೇ ಆರೋಪಕ್ಕಾಗಿ ಶಿಕ್ಷೆಗೊಳಗಾಗದ ಈಗಲೂ ಜೈಲಿನಲ್ಲಿರುವ ಪತ್ರಕರ್ತರ ಸಂಖ್ಯೆ, ರಾಜ್ಯವಾರು ವಿವರ?

ಅಸ್ಪಷ್ಟ ಮತ್ತು ತಪ್ಪಿಸಿಕೊಳ್ಳುವ ಉತ್ತರ ನೀಡಿರುವ ಕೇಂದ್ರ ಸರ್ಕಾರ "ಪತ್ರಕರ್ತರು ಸೇರಿದಂತೆ ದೇಶದ ಎಲ್ಲಾ ನಿವಾಸಿಗಳ ಸುರಕ್ಷತೆ ಮತ್ತು ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ" ಎಂದು ಸರ್ಕಾರವು ಸದನಕ್ಕೆ ತಿಳಿಸಿದೆ. ಪತ್ರಕರ್ತರ ಬಂಧನಕ್ಕೆ ಸಂಬಂಧಿಸಿದಂತೆ ಎನ್‌ಸಿಆರ್‌ಬಿ ನಿರ್ದಿಷ್ಟ ದತ್ತಾಂಶ ನಿರ್ವಹಿಸಿಲ್ಲ ಎಂದು ತಿಳಿಸಲಾಗಿದೆ. ಮಾಧ್ಯಮ ವ್ಯಕ್ತಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯಗಳಿಗೆ 2017 ರ ಸಲಹೆ ಪಾಲಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ ಎನ್ನಲಾಗಿದೆ.

Also Read
ಬಲಾತ್ಕಾರದ ಮತಾಂತರ ನಿಷೇಧಿಸಲಾಗಿದೆಯೇ ವಿನಾ ಲವ್‌ ಜಿಹಾದ್‌ ಉಲ್ಲೇಖಿಸಿಲ್ಲ: ಪಿಐಎಲ್‌ ವಜಾಕ್ಕೆ ಯೋಗಿ ಸರ್ಕಾರ ಮನವಿ

ರಾಷ್ಟ್ರಮಟ್ಟದಲ್ಲಿ ಅಂತರ್ಧರ್ಮೀಯ ವಿವಾಹ ನಿರ್ಬಂಧ ಕಾನೂನು ಜಾರಿ ಇಲ್ಲ

ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಜಾರಿಗೆ ತಂದಿರುವ ವಿವಾದಾತ್ಮಕ ಅಂತರ್ಧರ್ಮೀಯ ವಿವಾಹ ನಿಷೇಧ ಸುಗ್ರೀವಾಜ್ಞೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ʼದೇಶದ ಸಂವಿಧಾನದ ಏಳನೇ ಪರಿಚ್ಛೇದದ ಪ್ರಕಾರ ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್‌, ರಾಜ್ಯ ವಿಷಯಗಳಾಗಿವೆ. ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಅಪರಾಧಗಳ ತಡೆ, ಪತ್ತೆ ನೋಂದಣಿ, ತನಿಖೆ ಹಾಗೂ ಕಾನೂನು ಕ್ರಮಗಳು ಮುಖ್ಯವಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ್ದಾಗಿದೆ. ಕಾನೂನು ಉಲ್ಲಂಘನೆಯಾದಲ್ಲಿ ಕಾನೂನು ಜಾರಿ ಸಂಸ್ಥೆಗಳು ಅಸ್ತಿತ್ವದಲ್ಲಿರುವ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳುತ್ತವೆ ಎಂದು ಸರ್ಕಾರ ತಿಳಿಸಿದೆ.

ಕಳೆದ ಐದು ವರ್ಷಗಳಲ್ಲಿ ಮಲದಗುಂಡಿ ಸ್ವಚ್ಛಗೊಳಿಸುವ 340 ಮಂದಿ ಸಾವು

Table showing number of sewer deaths in last five years
Table showing number of sewer deaths in last five years

ಮನುಷ್ಯರಿಂದ ಶೌಚಗುಂಡಿ ಸ್ವಚ್ಛಗೊಳಿಸುವ ಅನಿಷ್ಟ ಪದ್ದತಿಯನ್ನು ಕೈಬಿಡುವಂತೆ ಅನೇಕ ಬಾರಿ ನ್ಯಾಯಾಲಯಗಳು ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಅಧಿಕಾರದಲ್ಲಿರುವವರಿಗೆ ಸೂಚಿಸುತ್ತಾ ಬಂದಿದ್ದರೂ ಕಳೆದ ಐದು ವರ್ಷಗಳಲ್ಲಿ ಚರಂಡಿ, ಮಲದ ಗುಂಡಿಗಳನ್ನು ಸ್ವಚ್ಛಗೊಳಿಸುವಾಗ ಸಾವನ್ನಪ್ಪಿದವರ ಸಂಖ್ಯೆ 340 ಆಗಿದೆ. 52 ಸಾವುಗಳೊಂದಿಗೆ ಉತ್ತರಪ್ರದೇಶ ಅಗ್ರಸ್ಥಾನದಲ್ಲಿದ್ದರೆ, ತಮಿಳುನಾಡು ಮತ್ತು ದೆಹಲಿಯಲ್ಲಿ ಕ್ರಮವಾಗಿ ಈ ಅವಧಿಯಲ್ಲಿ 43 ಮತ್ತು 36 ಸಾವುಗಳು ಸಂಭವಿಸಿವೆ.

ತೃತೀಯಲಿಂಗಿಗಳಿಗೆ ಮೀಸಲಾತಿ ಒದಗಿಸಲು ಯಾವುದೇ ಯೋಜನೆ ಇಲ್ಲ

ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ತೃತೀಯಲಿಂಗಿಗಳಿಗೆ ಮೀಸಲಾತಿ ನೀಡುವುದನ್ನು ಸರ್ಕಾರ ಪರಿಗಣಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್‌ಚಂದ್ ಗೆಹ್ಲೋಟ್, "ಸಾರ್ವಜನಿಕ ಸೇವೆಗಳಲ್ಲಿ ಕೆಲಸ ಮಾಡುವ ತೃತೀಯಲಿಂಗಿಗಳ ಸಂಖ್ಯೆಯ ಬಗ್ಗೆ ಸಚಿವಾಲಯದ ಬಳಿ ಯಾವುದೇ ಮಾಹಿತಿ ಇಲ್ಲ. ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ತೃತೀಯಲಿಂಗಿಗಳಿಗೆ ಮೀಸಲಾತಿ ನೀಡುವ ಯಾವುದೇ ಪ್ರಸ್ತಾಪ ಇಲ್ಲ" ಎಂದಿದ್ದಾರೆ.

Related Stories

No stories found.
Kannada Bar & Bench
kannada.barandbench.com