ಸುಪ್ರೀಂಕೋರ್ಟ್ ಪ್ರಾದೇಶಿಕ ಪೀಠ ಸ್ಥಾಪನೆ, ನೇಮಕಾತಿ ವೈವಿಧ್ಯಕ್ಕೆ ಸಂಸದೀಯ ಸ್ಥಾಯಿ ಸಮಿತಿ ಒಲವು

ಸುಪ್ರೀಂಕೋರ್ಟ್ ಪ್ರಾದೇಶಿಕ ಪೀಠ ಸ್ಥಾಪನೆ, ನೇಮಕಾತಿ ವೈವಿಧ್ಯಕ್ಕೆ ಸಂಸದೀಯ ಸ್ಥಾಯಿ ಸಮಿತಿ ಒಲವು

ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಸಂಬಂಧಿಸಿದ 2021-22ರ ಅನುದಾನದ ಬೇಡಿಕೆಗಳನ್ನೊಳಗೊಂಡ 107 ನೇ ವರದಿಯನ್ನು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಲಾಯಿತು.

ಹದಿನೆಂಟನೇ ಕಾನೂನು ಆಯೋಗದ ಶಿಫಾರಸಿನಂತೆ ಸುಪ್ರೀಂಕೋರ್ಟ್‌ ಪ್ರಾದೇಶಿಕ ಪೀಠಗಳ ಸ್ಥಾಪನೆ, ಸಾಮಾಜಿಕ- ಆರ್ಥಿಕ ವೈವಿಧ್ಯ ಹಾಗೂ ಒಳಗೊಳ್ಳುವಿಕೆಯನುಸಾರ ನ್ಯಾಯಾಂಗ ನೇಮಕಾತಿಯಲ್ಲಿ ವೈವಿಧ್ಯತೆ ತರುವುದು, ಹೈಕೋರ್ಟ್‌ ನ್ಯಾಯಮೂರ್ತಿಗಳ ನಿವೃತ್ತಿ ವಯೋಮಿತಿ ಏರಿಕೆ ಸೇರಿದಂತೆ ವಿವಿಧ ಅಂಶಗಳ ಬಗೆಗೆ ಸಂಸದೀಯ ಸ್ಥಾಯಿ ಸಮಿತಿ ಒಲವು ವ್ಯಕ್ತಪಡಿಸಿದೆ.

ಕಾನೂನು ಆಯೋಗ ತನ್ನ 229ನೇ ವರದಿಯಲ್ಲಿ, ಸಾಂವಿಧಾನಿಕ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಂವಿಧಾನ ಪೀಠ ರಚಿಸಬೇಕು ಮತ್ತು ಉತ್ತರ ವಲಯದಲ್ಲಿ ದೆಹಲಿ, ದಕ್ಷಿಣ ವಲಯದಲ್ಲಿ ಚೆನ್ನೈ ಅಥವಾ ಹೈದರಾಬಾದ್‌ ಪೂರ್ವ ವಲಯದಲ್ಲಿ ಕೋಲ್ಕತ್ತಾ ಹಾಗೂ ಪಶ್ಚಿಮ ವಲಯದಲ್ಲಿ ಮುಂಬೈನಲ್ಲಿ ಪ್ರಾದೇಶಿಕ ಪೀಠಗಳನ್ನು ಸ್ಥಾಪಿಸುವಂತೆ ಶಿಫಾರಸು ಮಾಡಲಾಗಿತ್ತು. ಇದನ್ನು ಪುನರುಚ್ಚರಿಸಿರುವ ಸಮಿತಿಯು ಬಡವರಿಗೆ ನ್ಯಾಯ ಒದಗಿಸಲು ಮತ್ತು ದೇಶದ ರಾಜಧಾನಿ ತಲುಪಲಾಗದವರ ಅನುಕೂಲಕ್ಕಾಗಿ ಇಂತಹ ಪೀಠಗಳ ಅಗತ್ಯವಿದೆ ಎಂದು ಹೇಳಿದೆ. ಅಲ್ಲದೆ, ಈ ಬಗ್ಗೆ ತನ್ನ ಖಚಿತ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತ ಸಂಚಿತ ನಿಧಿಯಿಂದ ಮಾಡಿದ ಖರ್ಚಿನನ್ವಯ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ನೀತಿಗಳು ಮತ್ತು ಕಾರ್ಯಕ್ಷಮತೆಯನ್ನು ಪರಿಶೀಲಿಸಲು ರಚಿಸಲಾಗಿದ್ದ ಸಂಸದೀಯ ಸ್ಥಾಯಿ ಸಮಿತಿ ಮಾರ್ಚ್ 16 ರಂದು ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶಗಳಿವೆ.
ಸಂಸದ ಹಾಗೂ ಹಿರಿಯ ವಕೀಲ ಭೂಪೇಂದರ್‌ ಯಾದವ್‌ ನೇತೃತ್ವದ ಸಮಿತಿಯಲ್ಲಿ ವಕೀಲರಾಗಿ ಅನುಭವ ಹೊಂದಿರುವ ವಿವೇಕ್‌ ಥಂಕಾ ಮತ್ತು ಪಿ ವಿಲ್ಸನ್‌ ರೀತಿಯ 27 ಸಂಸದರು ಸದಸ್ಯರಾಗಿದ್ದರು.

Also Read
[ಕೃಷಿಕರ ಪ್ರತಿಭಟನೆ] ರೈತ ಸಂಘದ ಪ್ರತಿನಿಧಿಗಳನ್ನು ಸೇರ್ಪಡೆ ಮಾಡಿ ಸುಪ್ರೀಂಕೋರ್ಟ್ ಸಮಿತಿ ಪುನಾರಚಿಸಲು ಮನವಿ

ಹೈಕೋರ್ಟ್‌ಗಳಲ್ಲಿ 419 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಇಲಾಖೆಯಿಂದ 208 ಶಿಫಾರಸುಗಳನ್ನು ಸ್ವೀಕರಿಸಲಾಗಿದೆ. ಕೊಲಿಜಿಯಂನಿಂದ ಉಳಿದ 211 ನೇಮಕಾತಿ ಶಿಫಾರಸುಗಳು ನಡೆಯಬೇಕಿದೆ ಎಂದು ಸಮಿತಿ ಹೇಳಿದೆ. ಅಲ್ಲದೆ ಕಳೆದ ಒಂದು ವರ್ಷದಲ್ಲಿ ಹೈಕೋರ್ಟ್ ನ್ಯಾಯಾಧೀಶರ ನೇಮಕದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ ಬದಲಿಗೆ ಖಾಲಿ ಹುದ್ದೆಗಳ ಪ್ರಮಾಣ ಶೇ 37 ರಿಂದ 39 ಕ್ಕೆ ಏರಿದೆ ಎಂದು ಅದು ಕಳವಳ ವ್ಯಕ್ತಪಡಿಸಿದೆ.

2016ರಲ್ಲಿ 126ರಷ್ಟಿದ್ದ ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿ 2020 ರಲ್ಲಿ ಕೇವಲ 66 ಕ್ಕೆ ಕುಸಿದಿದೆ. ನೇಮಕತಿಯಲ್ಲಿ ಶೇ 52ರಷ್ಟು ಇಳಿಮುಖವಾಗಿದೆ. ನಾಲ್ಕು ಹೈಕೋರ್ಟ್‌ಗಳಲ್ಲಿ ಮುಖ್ಯ ನ್ಯಾಯಮೂರ್ತಿ ಹುದ್ದೆಗಳು ಖಾಲಿ ಇವೆ ಎಂಬಿತ್ಯಾದಿ ಸಮಸ್ಯೆಗಳನ್ನು ಉಲ್ಲೇಖಿಸಿರುವ ಸಮಿತಿ ನ್ಯಾಯಾಧೀಶರ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಮತ್ತು ಭವಿಷ್ಯದಲ್ಲಿ ಹುದ್ದೆಗಳು ಖಾಲಿಯಾದರೆ ಈಗಿನ ಮಾರ್ಗಸೂಚಿಗಳ ಪ್ರಕಾರ ಕಟ್ಟುನಿಟ್ಟಾಗಿ ಭರ್ತಿ ಮಾಡಬೇಕೆಂದು ಹೇಳಿದೆ.

ಅಲ್ಲದೆ ಪ್ರಕರಣಗಳ ಬಾಕಿ ತಪ್ಪಿಸಲು ನ್ಯಾಯಾಧೀಶರ ನಿವೃತ್ತಿ ವಯಸ್ಸಿನಲ್ಲಿ ಏರಿಕೆ ಮಾಡಬೇಕು ಮತ್ತು ಕೆಲಸದ ದಿನಗಳನ್ನು ಹೆಚ್ಚಿಸಬೇಕೆಂದು ಹೇಳಿದೆ. ತ್ವರಿತಗತಿಯ ನ್ಯಾಯಾಲಯಗಳ ಸಂಖ್ಯೆ ನಿಗದಿತ ಪ್ರಮಾಣಕ್ಕಿಂತ ಶೇ 40ರಷ್ಟು ಕಡಿಮೆ ಇದ್ದು ಅವುಗಳ ಸ್ಥಾಪನೆಗೆ ಮುಂದಾಗುವಂತೆ ಸರ್ಕಾರಕ್ಕೆ ಸೂಚಿಸಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಇ ಕೋರ್ಟ್‌ ಪ್ರಾಜೆಕ್ಟ್‌ಗಳನ್ನು ಕಾರ್ಯರೂಪಕ್ಕೆ ತರುವಂತೆ ಅದು ಶಿಫಾರಸು ಮಾಡಿದೆ. ಕಾನೂನುಗಳನ್ನು ಪ್ರಾದೇಶಿಕ ಭಾಷೆಗಳಿಗೆ ಅನುವಾದ ಮಾಡುವ ಕಾರ್ಯದಲ್ಲಿ ಕಳೆದ ವರ್ಷ ವಿಳಂಬವಾಗಿರುವುದನ್ನು ಗಮನಿಸಿರುವ ಸಮಿತಿ ಅನುವಾದ ಕಾರ್ಯವನ್ನು ತ್ವರಿತಗೊಳಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ಹೇಳಿದೆ. 2014 ರಿಂದ 2021ರ ಫೆಬ್ರುವರಿ ಹೊತ್ತಿಗೆ 1,486 ಬಳಕೆಯಲ್ಲಿಲ್ಲದ ಮತ್ತು ಅನಗತ್ಯ ಕಾನೂನುಗಳನ್ನು ರದ್ದುಪಡಿಸಲಾಗಿದ್ದು ಈ ಪ್ರಯತ್ನವನ್ನು ಮುನ್ನಡೆಸಬೇಕು ಎಂದು ತಿಳಿಸಿದೆ.

ವರ್ಷಪೂರ್ತಿ ನಿರಂತರ ಚುನಾವಣೆಗಳನ್ನು ನಡೆಸುವುದು, ಅದು ಸ್ಥಳೀಯ ಸಂಸ್ಥೆಗಳು, ರಾಜ್ಯ ಸಭೆಗಳು ಅಥವಾ ಲೋಕಸಭೆಗಳು ಆಗಿರಲಿ, ರಾಜ್ಯ ಯಂತ್ರೋಪಕರಣಗಳ ಮೇಲೆ ದೊಡ್ಡ ಒತ್ತಡವನ್ನುಂಟುಮಾಡುತ್ತದೆ ಎಂದು ವರದಿ ತಿಳಿಸಿದ್ದು ಒಂದು ರಾಷ್ಟ್ರ ಒಂದು ಚುನಾವಣೆಗೆ ಒಲವು ವ್ಯಕ್ತಪಡಿಸಿದೆ.

No stories found.
Kannada Bar & Bench
kannada.barandbench.com