ಪತಂಜಲಿ ಆಯುರ್ವೇದ ಲಿಮಿಟೆಡ್‌ನ ದಿಕ್ಕು ತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದ ಭಾರತೀಯ ವೈದ್ಯಕೀಯ ಸಂಘದ (IMA) ಅಧ್ಯಕ್ಷ ಡಾ.ಆರ್ ವಿ ಅಶೋಕನ್ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಕ್ಷಮೆಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತಾಕೀತು ಮಾಡಿದೆ.
ಹೀಗೆ ಅವರು ಕ್ಷಮೆಯಾಚಿಸಬೇಕಿರುವುದು ವೈಯಕ್ತಿಕ ನೆಲೆಯಲ್ಲೇ ವಿನಾ ಐಎಂಎ ಪರವಾಗಿ ಅಲ್ಲ. ಜೊತೆಗೆ ಜಾಹೀರಾತಿಗೆ ತಗಲುವ ವೆಚ್ಚವನ್ನು ಅವರು ತಮ್ಮ ಜೇಬಿನಿಂದಲೇ ನೀಡಬೇಕೆಂದು ತಿಳಿಸಿದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ನ್ಯಾಯಾಂಗ ನಿಂದನೆ ಪ್ರಕರಣವನ್ನು ಮುಂದೂಡಿದೆ.
ಪುರಾವೆ ಆಧಾರಿತ ಔಷಧಗಳನ್ನು ಗುರಿಯಾಗಿಸಿಕೊಂಡು ದಾರಿ ತಪ್ಪಿಸುವ ಜಾಹೀರಾತು ಪ್ರಕಟಿಸಿದ್ದ ಪತಂಜಲಿ ಆಯುರ್ವೇದ ಮತ್ತದರ ಪ್ರವರ್ತಕರಾದ ಬಾಬಾ ರಾಮದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಅವರ ವಿರುದ್ಧ ಐಎಂಎ ಸಲ್ಲಿಸಿದ್ದ ಪ್ರಕರಣವನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಾ ಬಂದಿತ್ತು.
ಪತಂಜಲಿಯ ಲೋಪವಷ್ಟೇ ಅಲ್ಲದೆ, ಇತರರು ಕೂಡ ತಪ್ಪುದಾರಿಗೆಳೆಯುವ ಜಾಹೀರಾತು ನೀಡುತ್ತಿರುವುದು, ಹಾದಿ ತಪ್ಪಿಸುವ ಜಾಹೀರಾತುಗಳನ್ನು ಪ್ರಚುರಪಡಿಸುವ ಖ್ಯಾತನಾಮರ ಹೊಣೆಗಾರಿಕೆ, ಆಧುನಿಕ ವೈದ್ಯಕೀಯ ಪದ್ದತಿಯ ಅನೈತಿಕ ವಿಧಾನಗಳ ಕುರಿತಂತೆಯೂ ಪ್ರಕರಣದ ವ್ಯಾಪ್ತಿ ಕಾಲಾನಂತರದಲ್ಲಿ ವಿಸ್ತರಿಸಿತ್ತು.
ಐಎಂಎ ಆರೋಪಗಳನ್ನು ಆಧರಿಸಿ ಪತಂಜಲಿ ವಿರುದ್ಧ ಹಲವು ಕಠಿಣ ಕ್ರಮಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೆ ವಿಚಾರಣೆ ವೇಳೆ ಐಎಂಎ ಖುದ್ದು ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಯಿತು. ಐಎಂಎ ತನ್ನ ಮನೆಯನ್ನು ಒಪ್ಪವಾಗಿ ಇರಿಸಿಕೊಳ್ಳಬೇಕು ಎಂದಿದ್ದ ಪೀಠ ಅಲೋಪಥಿ ವೈದ್ಯರು ಅನಗತ್ಯ ಮತ್ತು ದುಬಾರಿ ಔಷಧಗಳನ್ನು ನೀಡುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.
ಈ ಬಗ್ಗೆ ಮಾಧ್ಯಮಗಳೆದುರು ಆಕ್ಷೇಪಿಸಿದ್ದ ಐಎಂಎ ಅಧ್ಯಕ್ಷ ಡಾ. ಆರ್.ವಿ.ಅಶೋಕನ್ ಅವರು ಐಎಂಎಯನ್ನು ಸುಪ್ರೀಂ ಕೋರ್ಟ್ ಟೀಕಿಸಿರುವುದು ದುರದೃಷ್ಟಕರ. ಇದರಿಂದಾಗಿ ವೈದ್ಯರ ನೈತಿಕ ಸ್ಥೈರ್ಯ ಕುಸಿದಿದೆ ಎಂದಿದ್ದರು.
ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಈ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಶೋಕನ್ ಅವರು ವಿವಾದಾತ್ಮಕ ಸಂದರ್ಶನವನ್ನು ನೀಡಿದ ಮಾಧ್ಯಮಗಳು ಸೇರಿದಂತೆ ಪ್ರಮುಖ ಪತ್ರಿಕೆಗಳಲ್ಲಿ ಸಾರ್ವಜನಿಕ ಕ್ಷಮೆಯಾಚನೆ ಪ್ರಕಟಿಸುವಂತೆ ಅದು ಸೂಚಿಸಿತ್ತು.
ಇಂದಿನ ವಿಚಾರಣೆ ವೇಳೆ ಐಎಂಎ ಪರ ವಕೀಲರಾದ ಹಿರಿಯ ವಕೀಲ ಪಿ ಎಸ್ ಪಟ್ವಾಲಿಯಾ ಅವರನ್ನು ಸೂಕ್ತ ರೀತಿಯಲ್ಲಿ ಜಾಹೀರಾತು ಪ್ರಕಟಿಸದೇ ಇರುವುದಕ್ಕೆ ಪೀಠ ತರಾಟೆಗೆ ತೆಗೆದುಕೊಂಡಿತು.
ಕ್ಷಮಾಪಣೆ ಪ್ರಕಟಿಸುವ ಆದೇಶ ಪಾಲಿಸದೆ ಐಎಂಎ ಅಧ್ಯಕ್ಷರು ತೊಂದರೆ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಅವರ ನೀಡಿರುವ ಕ್ಷಮೆಯಾಚನೆ ಪ್ರಕಟಣೆಯನ್ನು ಒಪ್ಪುವುದಿಲ್ಲ. ಅಶೋಕನ್ ಅವರನ್ನು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಮಾಡಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿತು.
ಅಂತೆಯೇ ಪೀಠದ ನಿರ್ದೇಶನಗಳನ್ನು ಪಾಲಿಸಲು ಅಶೋಕನ್ ಅವರಿಗೆ ಅನುವು ಮಾಡಿಕೊಡುವುದಕ್ಕಾಗಿ ನ್ಯಾಯಾಲಯ ಪ್ರಕರಣವನ್ನು ಮುಂದೂಡಿತು.