[ಪತಂಜಲಿ] ತಪ್ಪುದಾರಿಗೆಳೆಯುವ ಜಾಹೀರಾತುಗಳ ಕುರಿತ ದೂರುಗಳ ಸಮಗ್ರ ನಿರ್ವಹಣೆಗೆ ಡ್ಯಾಷ್‌ಬೋರ್ಡ್‌ ರಚಿಸಿ: ಸುಪ್ರೀಂ

ಪತಂಜಲಿ ಆಯುರ್ವೇದ್, ಅದರ ಪ್ರವರ್ತಕರಾದ ಬಾಬಾ ರಾಮದೇವ್‌ ಹಾಗೂ ಆಚಾರ್ಯ ಬಾಲಕೃಷ್ಣ ಅವರು ಅಲೋಪತಿ ಔಷಧವನ್ನು ಗುರಿಯಾಗಿಸಿ ದಾರಿತಪ್ಪಿಸುವ ಜಾಹೀರಾತು ಪ್ರಕಟಿಸಿದ್ದನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
Baba Ramdev, Patanjali, Supreme Court
Baba Ramdev, Patanjali, Supreme Court
Published on

ವೈದ್ಯಕೀಯ ಉತ್ಪನ್ನಗಳ ಕುರಿತಂತೆ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಶ್ನಿಸಿ ಹೂಡಿರುವ ಅರ್ಜಿಗಳನ್ನು ಪ್ರಚುರಪಡಿಸಲು ಮತ್ತು ಅದರ ಪ್ರಗತಿಯ ಕುರಿತಾದ ಮಾಹಿತಿ ನೀಡಲು ಅನುವಾಗುವಂತೆ ಆಯುಷ್‌ ಸಚಿವಾಲಯ ತನ್ನ ಜಾಲತಾಣದಲ್ಲಿ ಕೇಂದ್ರೀಕೃತ ಡ್ಯಾಷ್‌ಬೋರ್ಡ್‌ ರಚಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಸೂಚಿಸಿದೆ.

ಅಂತಹ ದೂರುಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು, ಅದರಲ್ಲಿಯೂ ವಿಶೇಷವಾಗಿ ದೂರುಗಳನ್ನು ಒಂದು ರಾಜ್ಯದ ಪರವಾನಗಿ ಅಧಿಕಾರಿಗಳು ಮತ್ತೊಂದು ರಾಜ್ಯಕ್ಕೆ ರವಾನಿಸಿದಾಗ ಉಂಟಾಗುವ ಅಡಚಣೆಗಳನ್ನು ನಿವಾರಿಸುವ ಸಲುವಾಗಿ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಈ ಸಲಹೆ  ನೀಡಿದೆ.

Also Read
ಕೋವಿಡ್ ಸಾವುಗಳಿಗೆ ಅಲೋಪತಿ ಕಾರಣ ಎನ್ನುವ ಆರೋಪ ಕೈಬಿಡುವಂತೆ ಪತಂಜಲಿ, ಬಾಬಾ ರಾಮದೇವ್‌ಗೆ ದೆಹಲಿ ಹೈಕೋರ್ಟ್ ಆದೇಶ

ಅಂತಹ ದೂರುಗಳು ಬಂದಾಗ ಕ್ರಮ ತೆಗೆದುಕೊಂಡ ವರದಿಗಳ ಕುರಿತಂತೆ ಯಾವುದೇ ದತ್ತಾಂಶ ಲಭ್ಯ ಇಲ್ಲದೆ ಇರುವುದರಿಂದ ಇದು ಔಷಧ ಮತ್ತು ಮತ್ತು ಸೌಂದರ್ಯಸಾಧನ ಕಾಯಿದೆ- 1940ರ ಅಡಿಯಲ್ಲಿ ಕೈಗೊಳ್ಳುವ ಕಾನೂನು ಕ್ರಮಗಳಿಗೂ ಅಡೆತಡೆ ಉಂಟುಮಾಡುತ್ತದೆ  ಎಂದು ನ್ಯಾಯಾಲಯ ತಿಳಿಸಿದೆ.

ಪತಂಜಲಿ ಆಯುರ್ವೇದ್, ಅದರ ಪ್ರವರ್ತಕರಾದ ಬಾಬಾ ರಾಮದೇವ್‌ ಹಾಗೂ ಆಚಾರ್ಯ ಬಾಲಕೃಷ್ಣ ಅವರು ಅಲೋಪತಿ ಔಷಧವನ್ನು ಗುರಿಯಾಗಿಸಿ ದಾರಿತಪ್ಪಿಸುವ ಜಾಹೀರಾತು ಪ್ರಕಟಿಸಿದ್ದನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ನ್ಯಾಯಾಲಯದಲ್ಲಿ ಪ್ರಕರಣವು ಈಗ ಕೇವಲ ಪತಂಜಲಿಗೆ ಮಾತ್ರವೇ ಸೀಮಿತವಾಗದೆ, ತಪ್ಪುದಾರಿಗೆಳೆಯುವ ಜಾಹೀರಾತುಗಳು, ಅಂತಹ ಜಾಹೀರಾತುಗಳನ್ನು ಪ್ರಭಾವಿಗಳು, ಖ್ಯಾತನಾಮರು ಅನುಮೋದಿಸುವಲ್ಲಿ ತೋರಬೇಕಾದ ಹೊಣೆಗಾರಿಕೆ, ಆಧುನಿಕ ವೈದ್ಯಕೀಯ ವ್ಯವಸ್ಥೆಯಲ್ಲಿನ ಅನೈತಿಕ ಚಟುವಟಿಕೆಗಳು ಮುಂತಾದ ಹಲವು ಆಯಾಮಗಳಿಗೆ ತೆರೆದುಕೊಂಡಿದೆ.

ಇಂತಹ ವಿಷಯಗಳ ಕುರಿತಾಗಿ ವಿವಿಧ ರಾಜ್ಯಗಳು ಮತ್ತು ನಿಯಂತ್ರಕ ಪ್ರಾಧಿಕಾರಿಗಳು ಸಲ್ಲಿಸಿದ್ದ ದತ್ತಾಂಶವನ್ನು ಸಂಗ್ರಹಿಸಿ ನೀಡಲು ವಕೀಲ ಶಾದಾನ್‌ ಫರಾಸತ್‌ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಿಸಲಾಗಿತ್ತು.

Also Read
ಸುಪ್ರೀಂ ಕಪಾಳಮೋಕ್ಷ: ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ

ಇಂದಿನ ವಿಚಾರಣೆ ವೇಳೆ ಫರಾಸತ್‌ ಅವರು ಅಂತರ-ರಾಜ್ಯ ಕಕ್ಷಿದಾರರ ದೂರುಗಳ ಪ್ರಗತಿ ಮೇಲ್ವಿಚಾರಣೆಗೆ ಡ್ಯಾಷ್ಬೋರ್ಡ್ ರಚನೆಯ ಅಗತ್ಯತೆ, ದಾರಿ ತಪ್ಪುವ ಜಾಹೀರಾತು ನೀಡದೇ ಇರಲು ಜಾಹೀರಾತುಗಳಿಗೆ ಪೂರ್ವ ಅನುಮೋದನೆ ನೀಡುವುದು, ಆರೋಗ್ಯ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಗ್ರಾಹಕರ ದೂರುಗಳನ್ನು ಸರಳೀಕರಿಸುವ ಅಗತ್ಯದಂತಹ ವಿಚಾರಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಗಮನ ಸೆಳೆದರು.

ಅಲ್ಲದೆ ಗ್ರಾಹಕರ ದೂರುಗಳ ಸಂಖ್ಯೆ ಕುಸಿದಿರುವ ವಿಚಾರವನ್ನು ಅವರು ಪ್ರಸ್ತಾಪಿಸಿದರು. ಆಗ ನ್ಯಾಯಾಲಯ ಈ ವಿಚಾರವಾಗಿ ಎರಡು ವಾರಗಳಲ್ಲಿ ಅಫಿಡವಿಟ್‌ ಸಲ್ಲಿಸುವಂತೆ ಗ್ರಾಹಕ ವ್ಯವಹಾರಗಳ ಸಚಿವಾಲಯಕ್ಕೆ ಸೂಚಿಸಿತು.

Kannada Bar & Bench
kannada.barandbench.com