ಪ್ರಧಾನಿ ಮೋದಿ ಅವಮಾನಿಸಿದ ಪ್ರಕರಣ: ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು

ಅದಾನಿ ವಿವಾದ ಕುರಿತ ಮಾಧ್ಯಮಗೋಷ್ಠಿಯಲ್ಲಿ ಪ್ರಧಾನಿ ಮೋದಿಯವರ ಹೆಸರನ್ನು ತಪ್ಪಾಗಿ ಹೇಳಿ ಅಪಮಾನಿಸಿದ ಆರೋಪದ ಮೇಲೆ ಖೇರಾ ವಿರುದ್ಧ ಉತ್ತರ ಪ್ರದೇಶ ಮತ್ತು ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿದ್ದರು.
Pawan Khera and Supreme Court
Pawan Khera and Supreme Court
Published on

ಮಾಧ್ಯಮಗೋಷ್ಠಿಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಮತ್ತು ಅಸ್ಸಾಂ ಪೊಲೀಸರು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಮಧ್ಯಂತರ ಜಾಮೀನು ನೀಡಿದೆ.

ಗುರುವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಖೇರಾ ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದರು. ಕೂಡಲೇ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ , ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಎಂ ಆರ್ ಶಾ ಅವರಿದ್ದ ಪೀಠ ಈ ಆದೇಶ ನೀಡಿತು.

Also Read
ಮೋದಿ ಪದವಿ ಪ್ರಮಾಣಪತ್ರ ಕೋರಿ ಕೇಜ್ರಿವಾಲ್‌ ಆರ್‌ಟಿಐ ಅರ್ಜಿ; 'ಪ್ರಧಾನಿ ಖಾಸಗಿತನಕ್ಕೆ ಧಕ್ಕೆ' ಎಂದ ಗುಜರಾತ್‌ ವಿವಿ

"ಎಲ್ಲಾ ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಅಧಿಕಾರ ವ್ಯಾಪ್ತಿ ಇರುವ ನ್ಯಾಯಾಲಯದ ಮುಂದೆ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸುವವರೆಗೆ, ದೆಹಲಿ ನ್ಯಾಯಾಲಯ ಅರ್ಜಿದಾರರ ಪ್ರಕರಣವನ್ನು ಪಟ್ಟಿ ಮಾಡುವ ದಿನದ ತನಕ ಇಂದು ಸಂಜೆ ಹೊತ್ತಿಗೆ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಸೂಚಿಸುತ್ತಿದ್ದೇವೆ” ಎಂದು ನ್ಯಾಯಾಲಯ ಹೇಳಿತು.

ಅಲ್ಲದೆ ಉತ್ತರ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಖೇರಾ ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಗ್ಗೂಡಿಸುವ ಸಂಬಂಧ ಎರಡೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿತು.

Also Read
ರಾಹುಲ್‌ ಗಾಂಧಿಯ ʼಮೋದಿʼ ಹೇಳಿಕೆ ಪ್ರಶ್ನಿಸಿದ್ದ ಅರ್ಜಿ: ಈ ಹಿಂದಿನ ತಡೆಯಾಜ್ಞೆ ತೆರವುಗೊಳಿಸಿದ ಗುಜರಾತ್ ಹೈಕೋರ್ಟ್

ಇತ್ತೀಚೆಗೆ ನಡೆದ ಮಾಧ್ಯಮಗೋಷ್ಠಿಯೊಂದರಲ್ಲಿ,  ಖೇರಾ ಅವರು ಅದಾನಿ-ಹಿಂಡೆನ್‌ಬರ್ಗ್ ವಿವಾದದ ಬಗ್ಗೆ ಜಂಟಿ ಸಂಸದೀಯ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಗೆ ಉದ್ದೇಶಪೂರ್ವಕವಾಗಿ ಅವಮಾನ ಉಂಟುಮಾಡುವಂತಹ ಮಾತುಗಳನ್ನಾಡಿದ ಆರೋಪ ಎದುರಿಸುತ್ತಿದ್ದಾರೆ.

ಪತ್ರಿಕಾಗೋಷ್ಠಿಯ ವೇಳೆ ಖೇರಾ ಅವರು, "(ಮಾಜಿ ಪ್ರಧಾನಿ) ನರಸಿಂಹರಾವ್ ಅವರು ಜೆಪಿಸಿ (ಜಂಟಿ ಸಂಸದೀಯ ಸಮಿತಿ) ರಚಿಸುವುದಾದರೆ, ಅಟಲ್ ಬಿಹಾರಿ ವಾಜಪೇಯಿ ಅವರು ಜೆಪಿಸಿ ರಚನೆ ಮಾಡುವುದಾದರೆ, ನರೇಂದ್ರ ಗೌತಮ್ ದಾಸ್... ಕ್ಷಮಿಸಿ ದಾಮೋದರ ದಾಸ್ ಮೋದಿ ಅವರಿಗೆ ಜೆಪಿಸಿ ರಚಿಸಲು ಏನು ಸಮಸ್ಯೆ " ಎಂದು ಖೇರಾ ಕೇಳಿದ್ದರು.

ಇದು ವಿವಾದಕ್ಕೆ ಕಾರಣವಾಗಿತ್ತು. ನರೇಂದ್ರ ಮೋದಿ ಅವರು ಗೌತಮ್‌ ಅದಾನಿ ರಕ್ಷಣೆಗೆ ನಿಂತಿದ್ದಾರೆ ಎಂಬುದನ್ನು ಸೂಚಿಸುವ ಉದ್ದೇಶದಿಂದ ಮೋದಿ ಅವರ ತಂದೆ ಹೆಸರಿನ ಜಾಗದಲ್ಲಿ ಗೌತಮ್‌ ಅದಾನಿ ಅವರ ಹೆಸರನ್ನು ಪರೋಕ್ಷವಾಗಿ ಖೇರಾ ಉಲ್ಲೇಖಿಸಿದ್ದಾರೆ ಎಂದು ಬಿಜೆಪಿ ದೂರಿತ್ತು. ಆದರೆ ಇದನ್ನು ಅಲ್ಲಗಳೆದಿದ್ದ ಅವರು ತಮ್ಮ ಸಹೋದ್ಯೋಗಿಯೊಬ್ಬರ ಹೆಸರನ್ನು ಬಾಯ್ತಪ್ಪಿ ಹೇಳಿದ್ದಾಗಿ ಪ್ರತಿಪಾದಿಸಿದ್ದರು.  

Kannada Bar & Bench
kannada.barandbench.com