ಈಗಿನ ಪೀಳಿಗೆ ಮದುವೆಯನ್ನು ಬಹಳ ಲಘುವಾಗಿ ಪರಿಗಣಿಸಿದೆ: ಮದ್ರಾಸ್ ಹೈಕೋರ್ಟ್

ಹೆಂಡತಿಗೆ ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್ (ಅಂಡಾಶಯದ ಸುತ್ತಲೂ ಏಳುವ ಗುಳ್ಳೆಗಳ ಕಾಯಿಲೆ) ಬಂದಿದ್ದು ಇದರಿಂದಾಗಿ ಆಕೆ ಮಿಲನಕ್ಕೆ ಮತ್ತು ಮಗುವನ್ನು ಪಡೆಯಲು ಯೋಗ್ಯವಾಗಿಲ್ಲ ಎಂದು ತಿಳಿಸಿ ಪತಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು.
Divorce
Divorce
Published on

ಪ್ರಸ್ತುತ ಪೀಳಿಗೆ ಮದುವೆಯ ಪರಿಕಲ್ಪನೆಯನ್ನು ಬಹಳ ಲಘುವಾಗಿ ಪರಿಗಣಿಸಿದ್ದು ಕ್ಷುಲ್ಲಕ ಕಾರಣಗಳಿಗೆ ಕೂಡ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇದರಿಂದ ಮದುವೆಗಳು ಮುರಿಯುತ್ತಿವೆ ಎಂದು ಮದ್ರಾಸ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ವಿವಾಹ ಸಂಸ್ಥೆಯ ಬಗ್ಗೆ ಒಲವಿಲ್ಲದ ದಂಪತಿಯ ವಿಚ್ಚೇದನ ಕೋರಿಕೆ ಈಡೇರಿಸಲು ಕೌಟುಂಬಿಕ ನ್ಯಾಯಾಲಯಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಕೂಡ ನ್ಯಾಯಾಲಯ ಈ ಸಂದರ್ಭದಲ್ಲಿ ತಿಳಿಸಿದೆ.

ಹೆಂಡತಿಗೆ ಪಾಲಿಸಿಸ್ಟಿಕ್‌ ಒವೇರಿಯನ್‌ ಸಿಂಡ್ರೋಮ್‌ (ಅಂಡಾಶಯದ ಸುತ್ತಲೂ ಏಳುವ ಗುಳ್ಳೆಗಳ ಕಾಯಿಲೆ) ಬಂದಿದ್ದು ಇದರಿಂದಾಗಿ ಆಕೆ ಮಿಲನಕ್ಕೆ ಮತ್ತು ಮಗುವನ್ನು ಪಡೆಯಲು ಯೋಗ್ಯವಾಗಿಲ್ಲ ಎಂದು ತಿಳಿಸಿ ಪತಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಪತ್ನಿ ಮೂಲ ಅರ್ಜಿಯನ್ನು ರದ್ದುಗೊಳಿಸಲು ಕೋರಿದ್ದರು. ಸಂವಿಧಾನದ 227 ನೇ ವಿಧಿಯಡಿ (ಉಚ್ಚ ನ್ಯಾಯಾಲಯದ ಮೇಲ್ವಿಚಾರಣಾ ವ್ಯಾಪ್ತಿ) ಆಕೆ ಹೈಕೋರ್ಟ್‌ನ್ನು ಸಂಪರ್ಕಿಸಿದ್ದರು.

Also Read
ಸಲಿಂಗ ವಿವಾಹ ಮೂಲಭೂತ ಹಕ್ಕು ಅಲ್ಲ, ಕಾನೂನು ಮಾನ್ಯತೆ ನೀಡಲಾಗದು: ದೆಹಲಿ ಹೈಕೋರ್ಟ್‌ಗೆ ಕೇಂದ್ರ

“ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ (ಪಿಸಿಓಎಸ್ / ಪಿಎಸ್ಒಎಸ್) ಕಲ್ಪನೆಯನ್ನು ನಪುಂಸಕತೆ ಎಂದು ಕರೆಯಲಾಗುವುದಿಲ್ಲ. ನಪುಂಸಕತೆ ಎಂಬುದು ಬೇರೆಯೇ ಆಗಿದ್ದು ಆಗ ವಿವಿಧ ದೈಹಿಕ ಮತ್ತು ಮಾನಸಿಕ ಕಾರಣಗಳಿಗಾಗಿ ಮಗುವಿಗೆ ಜನ್ಮ ನೀಡಲು ಸಾಧ್ಯವಾಗದು” ಎಂದು ವಿ. ಭವಾನಿ ಸುಬ್ಬರಾಯನ್‌ ಅವರಿದ್ದ ಪೀಠ ತಿಳಿಸಿತು.

“ಗಂಡ ತನ್ನ ಹೆಂಡತಿ ಜೊತೆ ವಾಸಿಸುವುದು, ಮಿಲನ ಮತ್ತು ಮಕ್ಕಳನ್ನು ಪಡೆಯುವುದು ಕಾನೂನುಬದ್ಧ ನಿರೀಕ್ಷೆಯಾಗಿದೆ. ದಂಪತಿಯಲ್ಲಿ ಒಬ್ಬರು ದೈಹಿಕ ಮತ್ತು ಮಾನಸಿಕ ಸಮಸ್ಯೆಯಿಂದಾಗಿ ಅದನ್ನು ಸಾಧಿಸಲಾಗದಿದ್ದರೆ ಅವರಲ್ಲಿ ಒಬ್ಬರು ಇಂತಹ ಆರೋಪಗಳನ್ನು ಹೊರಿಸಿ ನ್ಯಾಯಾಲಯದ ಮೆಟ್ಟಿಲೇರುವುದು ಸಹಜ ಎಂಬುದು ಸಾಕಷ್ಟು ತಾರ್ಕಿಕ ವಿಚಾರವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಇಷ್ಟಾದರೂ ನ್ಯಾಯಾಲಯ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತು. ಕೌಟುಂಬಿಕ ನ್ಯಾಯಾಲಯ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಲು ಬಾರದ ಕಾರಣ ಸಂವಿಧಾನದ 227 ನೇ ವಿಧಿ ಅನ್ವಯ ಹೈಕೋರ್ಟ್‌ ಮಧ್ಯಪ್ರವೇಶಿಸಲು ಯಾವುದೇ ಆಧಾರಗಳಿಲ್ಲ ಎಂದು ಅಭಿಪ್ರಾಯಪಟ್ಟ ಪೀಠ ಮಹಿಳೆ ಸಲ್ಲಿಸಿದ್ದ ಸಿವಿಲ್‌ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದರು.

Kannada Bar & Bench
kannada.barandbench.com