

ದೇಶದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿ ಕಡಿತ ಘಟನೆಗಳನ್ನು ಸುಪ್ರೀಂ ಕೋರ್ಟ್ ಬುಧವಾರ ಟೀಕಿಸಿದ್ದು ಪ್ರಾಣಿಗಳ ಜನನ ನಿಯಂತ್ರಣ ನಿಯಮಾವಳಿ ಜಾರಿಗೆ ತಾರದ ಸ್ಥಳೀಯ ಸಂಸ್ಥೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು [ಸಿಟಿ ಹೌಂಡೆಡ್ ಬೈ ಸ್ಟ್ರೇಸ್, ಕಿಡ್ಸ್ ಪ್ರೇ ಪ್ರೈಸ್ ವರದಿ ಆಧರಿಸಿದ ಸ್ವಯಂ ಪ್ರೇರಿತ ಪ್ರಕರಣ ವರ್ಸಸ್ ಆಂಧ್ರಪ್ರದೇಶ ಸರ್ಕಾರ]
ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳು ಮತ್ತು ಇತರ ಪ್ರಾಣಿಗಳ ವಿಷಯದ ಕುರಿತು ಸುಪ್ರೀಂ ಕೋರ್ಟ್ ಹೂಡಿದ್ದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ , ಸಂದೀಪ್ ಮೆಹ್ತಾ ಹಾಗೂ ಎನ್ ವಿ ಅಂಜಾರಿಯಾ ಅವರಿದ್ದ ಪೀಠ ಇಂದು ವಿವರವಾದ ವಾದ ಆಲಿಸಿತು. ಪ್ರಕರಣದ ವಿಚಾರಣೆ ಗುರುವಾರವೂ ಮುಂದುವರಿಯಲಿದೆ.
ಕಳೆದ ವರ್ಷ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಹಾಗೂ ಆರ್ ಮಹದೇವನ್ ಅವರಿದ್ದ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು ದೆಹಲಿಯನ್ನು ಬೀದಿ ನಾಯಿ ಮುಕ್ತಗೊಳಿಸಬೇಕು, ಈ ವಿಚಾರದಲ್ಲಿ ಯಾವುದೇ ರಾಜಿಗೊಳಗಾಗಬಾರದು ಎಂದು ನೀಡಿದ್ದ ಆದೇಶ ದೇಶವ್ಯಾಪಿ ಗಮನಸಳೆದಿತ್ತು. ಈ ಆದೇಶದ ವಿರುದ್ಧ ಪ್ರಾಣಿ ದಯಾ ಸಂಘಟನೆಗಳು ಸುಪ್ರೀಂ ಮೆಟ್ಟಿಲೇರಿದ್ದವು. ತದನಂತರ ಆದೇಶವನ್ನು ಬದಲಾಯಿಸಿದ್ದ ಸುಪ್ರೀಂ ಕೋರ್ಟ್ ಪ್ರಕರಣವನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿತ್ತು.
ಇದು ಶಾಶ್ವತ ಆಶ್ರಯದ ಬದಲಿಗೆ ಲಸಿಕೆ ಹಾಕುವುದು ಮತ್ತು ಸಂತಾನಹರಣ ಮಾಡಿದ ನಾಯಿಗಳನ್ನು ಬಿಡುಗಡೆ ಮಾಡುವುದನ್ನು ಕಡ್ಡಾಯಗೊಳಿಸಿತ್ತು. ಹೆದ್ದಾರಿಗಳಲ್ಲಿ ಬೀಡಾಡಿ ದನಗಳು ನಾಯಿಗಳಂತಹ ಪ್ರಾಣಿಗಳು ನುಗ್ಗುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶಿಸಿತ್ತು. ಅಲ್ಲದೆ ಬೀದಿ ನಾಯಿ ಹಾವಳಿ ತಡೆಯಲು ಸರ್ಕಾರಿ ಮತ್ತು ಖಾಸಗಿ ಶಿಕ್ಷಣ, ಆರೋಗ್ಯ ಸಂಸ್ಥೆಗಳಿಗೆ 8 ವಾರಗಳಲ್ಲಿ ಬೇಲಿ ಹಾಕಬೇಕು ಎಂದು ಅದು ಆದೇಶಿಸಿತ್ತು.
ಇಂದಿನ ವಿಚಾರಣೆಯ ವೇಳೆ ನ್ಯಾಯಾಲಯವು, "ಮಕ್ಕಳಷ್ಟೇ ಅಲ್ಲದೆ ವಯಸ್ಕರು ಸಹ ನಾಯಿಗಳ ಕಡಿತಕ್ಕೆ ತುತ್ತಾಗಿರುವುದು, ಬಲಿಯಾಗಿರುವುದು ನಮ್ಮ ಗಮನದಲ್ಲಿದೆ" ಎಂದು ಹೇಳಿತು.
ಕಳೆದ ಇಪ್ಪತ್ತು ದಿನಗಳಲ್ಲಿ ರಸ್ತೆಗಳಲ್ಲಿ ಸಂಚರಿಸುವಾಗ ನ್ಯಾಯಾಧೀಶರಿಗೆ ಪ್ರಾಣಿಗಳು ಡಿಕ್ಕಿ ಹೊಡೆದ ಎರಡು ಘಟನೆಗಳು ಸಂಭವಿಸಿದ್ದು ಅದರಲ್ಲಿ ಒಬ್ಬ ನ್ಯಾಯಾಧೀಶರ ಬೆನ್ನು ಹುರಿಗೆ ತೀವ್ರ ಹಾನಿಯಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿತು.
ನ್ಯಾಯಾಲಯದ ಆದೇಶಗಳನ್ನು ಜಾರಿಗೆ ತರಲು ಎನ್‌ಎಚ್‌ಎಐ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ ಸಿದ್ಧಪಡಿಸಿದೆ ಎಂದು ಅಮಿಕಸ್ ಕ್ಯೂರಿ ಗೌರವ್ ಅಗರ್ವಾಲ್ ಇಂದು ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೆ, ಬೀಡಾಡಿ ದನಗಳು ಹಾಗೂ ನಾಯಿಗಳನ್ನು ಆಶ್ರಯ ಕೇಂದ್ರಗಳಲ್ಲಿರಿಸಲು ಸೂಕ್ತ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ತಿಳಿಸಿದರು.
ಇದು ವೇಳೆ ಗಂಡು ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ಹಾಗೂ ಆಶ್ರಯ ತಾಣಗಳ ನಿರ್ವಹಣೆಗೆ ಅಗತ್ಯವಾದ ಸಿಬ್ಬಂದಿಗಳ ಕೊರತೆ ಇರುವುದರ ಬಗ್ಗೆ ಅವರು ತಿಳಿಸಿದರು. ಅಲ್ಲದೆ, ದೊಡ್ಡ ರಾಜ್ಯಗಳಾದ ಮಧ್ಯಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಪಂಜಾಬ್‌ನಂತಹ ರಾಜ್ಯಗಳು ಬೀದಿ ನಾಯಿಗಳ ಹಾವಳಿಯ ನಿಯಂತ್ರಣಕ್ಕೆ ನೀಡಲಾದ ಮಾರ್ಗಸೂಚಿಗಳ ಕುರಿತಾದ ಅನುಪಾಲನಾ ವರದಿಯನ್ನು ಇನ್ನೂ ಸಲ್ಲಿಸಿಲ್ಲ ಎನ್ನುವುದನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಬೀದಿ ನಾಯಿಗಳನ್ನು ಸ್ಥಳಾಂತರಿಸುವುದರ ವಿರುದ್ಧ ವಕೀಲರೊಬ್ಬರು ವಾದಿಸಿದಾಗ ನ್ಯಾಯಾಲಯ ನಾಯಿಗಳಿಗೂ ಆಪ್ತ ಸಮಾಲೋಚನೆ ನಡೆಸುತ್ತಿಲ್ಲ ಎಂಬುದಷ್ಟೇ ಕೊರತೆ. ಅದನ್ನು ಮಾಡಿಬಿಟ್ಟರೆ ಅವುಗಳನ್ನು ಮುಕ್ತಗೊಳಿಸಿದಾಗ ಅವು ಕಚ್ಚುವುದಿಲ್ಲ ಎಂದು ಪೀಠ ಹೇಳಿದ್ದು ಗಮನಸೆಳೆಯಿತು.
ಪ್ರಾಣಿ ಹಕ್ಕು ಪ್ರತಿಪಾದಕರೊಬ್ಬರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್, ವಾದ ಮಂಡಿಸಿದರು. ನಾಯಿಗಳ ಜನನ ನಿಯಂತ್ರಣವನ್ನು ಮಾಡಲು ಜಗತ್ತಿನಾದ್ಯಂತ ಸಿಎಸ್‌ವಿಆರ್ (ಕ್ಯಾಪ್ಚರ್, ಸ್ಟರ್ಲೈಸ್, ವ್ಯಾಕ್ಸಿನೇಟ್, ರಿಲೀಸ್) ಎನ್ನುವ ಮಾದರಿಯನ್ನು ಅನುಸರಿಸಲಾಗುತ್ತಿದೆ. ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಈ ಮಾದರಿಯನ್ನು ಅನುಸರಿಸಿದ ನಂತರ ನಾಯಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಅವುಗಳನ್ನು ಆಶ್ರಯ ತಾಣದಲ್ಲಿ ಕೂಡಿ ಹಾಕಿದರೆ ರೇಬಿಸ್‌ನಂತಹ ರೋಗಗಳು ಶೀಘ್ರ ಪಸರಿಸಿ ಎಲ್ಲ ನಾಯಿಗಳೂ ಅದಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ," ಎಂದು ವಾದಿಸಿದರು.
ಇದಕ್ಕೂ ಮೊದಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಾದ ಮಂಡಿಸಿ, "ನಾವು ಪ್ರಾಣಿ ಪ್ರಿಯರು ಎಂದು ಕರೆದಾಗ ಅದರ ವ್ಯಾಪ್ತಿಗೆ ಎಲ್ಲ ಪ್ರಾಣಿಗಳನ್ನು ಪ್ರೀತಿಸುವವರು ಒಳಪಡುತ್ತಾರೆ. ಮನೆಯೊಳಗೆ ನಾಯಿಯನ್ನು ಇರಿಸಿಕೊಳ್ಳಬೇಕೇ, ಬೇಡವೇ ಎನ್ನುವ ವಿವೇಚನೆಯು ಅವರವರಿಗೆ ಬಿಟ್ಟ ವಿಚಾರ. ಆದರೆ, ಗೇಟೆಡ್ ಸಮುದಾಯಗಳಲ್ಲಿ (ನಿರ್ಬಂಧಿತ ವಸತಿ ಪ್ರದೇಶಗಳು) ಬೀದಿ ನಾಯಿಗಳು ಓಡಾಡಬೇಕೆ, ಬೇಡವೇ ಎನ್ನುವುದನ್ನು ಅದನ್ನು ಆ ಸೀಮಿತ ಸಮುದಾಯ ನಿರ್ಧರಿಸುವುದು ಉತ್ತಮ. ಅದರಲ್ಲಿ 90% ಮಂದಿ ಅದು ಅಪಾಯಕಾರಿ ಎಂದು 10% ಮಂದಿ ನಾಯಿಗಳು ಇರಲಿ ಎನ್ನಬಹುದು... ಕೆಲವೊಬ್ಬರು ನಾಳೆ ಎಮ್ಮೆಗಳನ್ನೂ ಸಹ ಗೇಟೆಡ್ ವಸತಿ ಪ್ರದೇಶಗಳಲ್ಲಿ ತಂದು ನಾನು ಪ್ರಾಣಿ ಪ್ರಿಯ ಎನ್ನಬಹುದು. ಇದರಿಂದ ಉಳಿದವರಿಗೆ ತೊಂದರೆಯಾಗುತ್ತದೆ. ಹಾಗಾಗಿ ಇಂತಹ ವಿಚಾರದಲ್ಲಿ ಗೇಟೆಡ್ ಸಮುದಾಯಗಳು ಬಹುಮತದ ಮೂಲಕ ನಿರ್ಧರಿಸಲಿ ಬಿಡಿ. ನಾವು ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳುಳ್ಳ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ," ಎಂದು ಪ್ರಬಲವಾಗಿ ವಾದ ಮಂಡಿಸಿದರು.
ಹೈದರಾಬಾದ್‌ನ ನಲ್ಸಾರ್ ವಿವಿ ಪರವಾಗಿ ಹಿರಿಯ ನ್ಯಾಯವಾದಿ ಕೆ ಕೆ ವೇಣುಗೋಪಾಲ್, ಹಿರಿಯ ವಕೀಲರಾದ ಕಾಲಿನ್ ಗೊನ್ಸಾಲ್ವೆಸ್, ಆನಂದ್ ಗ್ರೋವರ್, ಸಿ.ಯು. ಸಿಂಗ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ವಿವಿಧ ವಕೀಲರು ವಾದ ಮಂಡಿಸಿದರು.