

ದೇಶದ ಎಲ್ಲಾ ಹೆದ್ದಾರಿಗಳನ್ನು ಬೀಡಾಡಿ ದನಗಳಿಂದ ಮುಕ್ತಗೊಳಿಸುವಂತೆ ರಾಜ್ಯ ಸರ್ಕಾರಗಳು ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ [ಬೀದಿನಾಯಿಗಳ ಜಾಲದಲ್ಲಿ ನಗರಗಳು ಬಲಿಯಾಗುತ್ತಿರುವ ಮಕ್ಕಳು ಪತ್ರಿಕಾ ವರದಿ ಆಧರಿಸಿದ ಸ್ವಯಂ ಪ್ರೇರಿತ ಪ್ರಕರಣ ಮತ್ತು ಆಂಧ್ರಪ್ರದೇಶ ಸರ್ಕಾರ ನಡುವಣ ಪ್ರಕರಣ].
ರಸ್ತೆಗಳಿಂದ ಬೀಡಾಡಿ ದನಗಳನ್ನು ತೆರವುಗೊಳಿಸುವಂಎ ರಾಜಸ್ಥಾನ ಹೈಕೋರ್ಟ್ ನೀಡಿದ್ದ ನಿರ್ದೇಶನಗಳನ್ನು ಎತ್ತಿಹಿಡಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ , ಸಂದೀಪ್ ಮೆಹ್ತಾ ಮತ್ತು ಎನ್ ವಿ ಅಂಜಾರಿಯಾ ಅವರಿದ್ದ ಪೀಠ ಆದೇಶವನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ವಿಸ್ತರಿಸಲು ನಿರ್ಧರಿಸಿತು.
ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಿಂದ ಬೀಡಾಡಿ ದನಗಳು ಮತ್ತು ನಾಯಿಗಳನ್ನು ತೆರವುಗೊಳಿಸಬೇಕು. ಇದಕ್ಕಾಗಿಯೇ ಮೀಸಲಾದ ಹೆದ್ದಾರಿ ಗಸ್ತು ತಂಡವನ್ನು ರಚಿಸಬೇಕು. ಪ್ರಾಣಿಗಳು ರಸ್ತೆಗಳಲ್ಲಿ ಕಂಡುಬಂದರೆ ಅವುಗಳ ಬಗ್ಗೆ ಮಾಹಿತಿ ನೀಡಲು ಸಹಾಯವಾಣಿ ತೆರೆಯಬೇಕು. ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಈ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು ಎಂದು ಅದು ಹೇಳಿದೆ.
ಬೀದಿ ನಾಯಿ ಕಡಿತದಿಂದ ಪಾರಾಗುವುದಕ್ಕಾಗಿ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಆಸ್ಪತ್ರೆಗಳು ಸೇರಿದಂತೆ ಸಾರ್ವಜನಿಕ ಸಂಸ್ಥೆಗಳ ಆವರಣದ ಸುತ್ತ ಕಡ್ಡಾಯವಾಗಿ ತಂತಿ ಬೇಲಿ ಅಳವಡಿಸಬೇಕು ಎಂದು ಅದು ಸೂಚಿಸಿದೆ.
ತಂತಿ ಬೇಲಿ ಅಗತ್ಯವಿರುವ ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆಗಳನ್ನು ಎರಡು ವಾರಗಳಲ್ಲಿ ಗುರುತಿಸಬೇಕು. ಆವರಣದ ನಿರ್ವಹಣೆಗಾಗಿ ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಸ್ಥಳೀಯ ಪುರಸಭೆ ಅಧಿಕಾರಿಗಳು/ಪಂಚಾಯತ್ ಪ್ರತಿ 3 ತಿಂಗಳಿಗೊಮ್ಮೆಯಾದರೂ ಅಂತಹ ಆವರಣಗಳನ್ನು ಪರಿಶೀಲಿಸಬೇಕು ಎಂದು ಪೀಠ ವಿವರಿಸಿದೆ.
ಬೀದಿ ನಾಯಿಗಳನ್ನು ಹಿಡಿದ ಬಳಿಕ ಅವುಗಳನ್ನು ಅದು ಹಿಡಿದ ಜಾಗದಲ್ಲಿಯೇ ಅದರಲ್ಲಿಯೂ ಶಾಲೆಗಳು ಆಸ್ಪತ್ರೆಗಳು ಇರುವ ಜಾಗದಲ್ಲಿ ಮತ್ತೆ ಬಿಡಬಾರದು ಎಂದ ಅದು 3 ವಾರಗಳಲ್ಲಿ ಸ್ಥಿತಿಗತಿ ಹಾಗೂ ಆದೇಶದ ಅನುಪಾಲನಾ ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ನ್ಯಾಯಾಲಯ ರಾಜ್ಯ ಸರ್ಕಾರಗಳಿಗೆ ಸೂಚಿಸಿತು.
ಪ್ರಾಣಿಗಳ ಜನನ ನಿಯಂತ್ರಣ ನಿಯಮಾವಳಿ 2023ಅನ್ನು ಜಾರಿಗೊಳಿಸುವ ಸಂಬಂಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ಪೀಠ ಈ ಹಿಂದೆ ಕರೆ ನೀಡಿತ್ತು. ಬಹುತೇಕ ರಾಜ್ಯಗಳು ಆದೇಶ ಪಾಲಿಸದ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಖುದ್ದು ಹಾಜರಿರುವಂತೆ ಸಮನ್ಸ್ ಜಾರಿ ಮಾಡಿತ್ತು.
ಅಂತೆಯೇ ನವೆಂಬರ್ 03ರಂದು ಹಾಜರಿದ್ದ ಅಧಿಕಾರಿಗಳು ಅಫಿಡವಿಟ್‌ಗಳನ್ನು ಸಲ್ಲಿಸಿದ್ದರು. ನ್ಯಾಯಾಲಯ ಪ್ರಕರಣದ ಅಮಿಕಸ್ ಕ್ಯೂರಿ ಗೌರವ್ ಅಗರ್‌ವಾಲ್ ಅವರಿಗೆ ಎಲ್ಲಾ ರಾಜ್ಯಗಳ ವರದಿಗಳ ಸಾರಂಶ ಮತ್ತು ದಾಖಲೆಗಳ ಸಂಗ್ರಹವನ್ನು ಒದಗಿಸಲು ಸೂಚಿಸಿತ್ತು. ಇಂದು, ನ್ಯಾಯಾಲಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಮಿಕಸ್ ಕ್ಯೂರಿ ನೀಡಿದ ಸಲಹೆಗಳನ್ನು ಜಾರಿಗೆ ತರುವಂತೆ ನಿರ್ದೇಶಿಸಿತು.